ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿನ ಬಣ ಬಡಿದಾಟಕ್ಕೆ ಅಂತ್ಯ ಹಾಡಲು ಮುಂದಾಗಿರುವ ಹೈಕಮಾಂಡ್, ಬಿಜೆಪಿಯ ಎಲ್ಲಾ ನಾಯಕರನ್ನು ಮತ್ತೆ ಒಗ್ಗೂಡಿಸುವ ಪ್ರಯತ್ನ ನಡೆಸಿದೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಶಾಸಕರ ಜೊತೆ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ಅವರು ಮಾತುಕತೆ ನಡೆಸಿದರು.
ಪ್ರತಿ ಶಾಸಕರ ಜೊತೆ ರಾಧಾಮೋಹನ್ ದಾಸ್ ಪ್ರತ್ಯೇಕ ಚರ್ಚೆ ನಡೆಸಿದ್ದು, ಯಾವುದೇ ಬಣದಲ್ಲಿ ಗುರುತಿಸಿಕೊಳ್ಳದೆ ತಟಸ್ಥ ನಿಲುವು ಹೊಂದಿರುವ ಶಾಸಕರು ಅಗರವಾಲ್ ಅವರನ್ನು ಭೇಟಿ ಮಾಡಿದರು. ಪಕ್ಷದ ಈಗಿನ ಸ್ಥಿತಿ ಉತ್ತಮವಾಗಿಲ್ಲ. ದಯವಿಟ್ಟು ಇದನ್ನು ಮೊದಲು ಸರಿಪಡಿಸಬೇಕಿದೆ ಎಂದು ಮನವಿ ಮಾಡಿದ್ದಾರೆ.
ಸದ್ಯ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಬಿ. ವೈ. ವಿಜಯೇಂದ್ರ ಪ್ರೊಬೆಷನರಿ ಪೀರಿಯಡ್ನಲ್ಲಿದ್ದಾರೆ. ಅವರಿಗೂ ಸ್ವಲ್ಪ ಅವಕಾಶ ಕೊಡಬೇಕೆಂಬುದು ಬಹುತೇಕ ಮುಖಂಡರ ಅಭಿಪ್ರಾಯ. ಪಕ್ಷಕ್ಕೆ ಶಕ್ತಿ ಇದ್ದರೆ ಈಗಿನ ಪರಿಸ್ಥಿತಿಯನ್ನು ಸರಿಪಡಿಸಿ ಎಂದು ರಾಧಾ ಮೋಹನ್ ದಾಸ್ ಅಗರವಾಲ್ ಅವರಿಗೆ ಬಿಜೆಪಿ ಶಾಸಕರು ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಯತ್ನಾಳ್ ವಿಚಾರ ಪ್ರಸ್ತಾಪಕ್ಕೆ ಸಿಟ್ಟು : ಬಿಜೆಪಿಯ ರೆಬಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಚಾರವನ್ನು ವಿಜಯೇಂದ್ರ ಬಣದ ಕೆಲವು ಶಾಸಕರು ಪ್ರಸ್ತಾಪಿಸುತ್ತಿದ್ದಂತೆ ರಾಜ್ಯ ಉಸ್ತುವಾರಿ ಅಗರವಾಲ್ ಸಿಟ್ಟಾಗಿದ್ದಾರೆ ಎನ್ನಲಾಗಿದೆ. "ಯತ್ನಾಳ್ ಮಾಡುತ್ತಿರುವುದು ತಪ್ಪು ಎಂಬುದು ನಿಜ. ಅದನ್ನು ನೋಡಿಕೊಳ್ಳಲು ಪಕ್ಷ ಇದೆ. ನೀವು ಮಾಡುತ್ತಿರುವುದೇನು?. ಎಲ್ಲವೂ ಹೈಕಮಾಂಡ್ ಗಮನದಲ್ಲಿದೆ. ಎಲ್ಲವೂ ಸರಿ ಹೋಗುತ್ತದೆ. ಗುಂಪುಗಾರಿಕೆಯನ್ನು ಮೊದಲು ಬಿಡಿ ಎಂದು ತಾಕೀತು ಮಾಡಿದ್ದಾಗಿ ತಿಳಿದುಬಂದಿದೆ.
ಎಲೆಕ್ಷನ್ನಾ, ಸಹಮತವಾ? ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕೇ?, ಬೇಡವೇ? ಎಂಬುದರ ಕುರಿತು ಕೂಡ ಸ್ಪಷ್ಟತೆ ಸಿಗುವ ನಿರೀಕ್ಷೆಯಿದೆ. ವಿಜಯೇಂದ್ರ ಪರವಾಗಿರುವ ಬಣ ಸಹಮತದ ಮೂಲಕ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಬೇಕೆಂದು ಒತ್ತಾಯಿಸುತ್ತಿದೆ. ಯತ್ನಾಳ್ ಬಣ ಚುನಾವಣೆ ಮಾಡಿ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಬೇಕೆಂದು ಆಗ್ರಹಿಸಿದೆ.
ಚುನಾಯಿತ ಪ್ರತಿನಿಧಿಗಳ ಸಭೆಯ ನಂತರ ಮಾತಡಿದ ಪ್ರತಿಪಕ್ಷದ ನಾಯಕ ಅರ್. ಅಶೋಕ್ ಅವರು, ಪಕ್ಷ ಸಂಘಟನೆ, ಜಿಲ್ಲಾಧ್ಯಕ್ಷರು ಮತ್ತು ತಾಲ್ಲೂಕು ಮಟ್ಟದ ಪದಾಧಿಕಾರಿಗಳ ಚುನಾವಣೆಗೆ ಸಂಬಂಧಿಸಿದಂತೆ ಮಾತ್ರ ಚರ್ಚೆ ನಡೆಯಿತು. ರಾಜ್ಯಾಧ್ಯಕ್ಷರ ನೇಮಕಾತಿ ಅಥವಾ ಬದಲಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆದಿಲ್ಲ ಎಂದು ಹೇಳಿದರು.
ರಾಜ್ಯಾಧ್ಯಕ್ಷರ ಚುನಾವಣೆಗಾಗಿ ದೆಹಲಿ ವರಿಷ್ಠರು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಉಸ್ತುವಾರಿಯಾಗಿ ನೇಮಿಸಿದ್ದಾರೆ. ಅವರು ಬಂದ ಮೇಲೆ ಪ್ರಕ್ರಿಯೆ ಆರಂಭವಾಗುತ್ತದೆ ಎಂದರು.
ಪಕ್ಷಕ್ಕಾಗಿ ಧ್ವನಿ ಎತ್ತಿದ್ದೇವೆ : ರಾಜ್ಯ ಕಾರ್ಯಾಲಯದಲ್ಲಿ ನಡೆದ ‘ಸಂಘಟನಾ ಪರ್ವ’ದ ಸಭೆಯ ಕುರಿತು ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ಇಂದಿನ ಸಭೆಯಲ್ಲಿ ಕಾರ್ಯಕರ್ತರ ಪರವಾಗಿ, ಕಾರ್ಯಕರ್ತರ ಧ್ವನಿಯಾಗಿ ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದು ಕೇಂದ್ರದ ನಾಯಕರಿಗೆ ತಲುಪಿದೆ ಎಂದರು.
ಕೆಲವರು ಬಹಿರಂಗವಾಗಿ ಮಾತನಾಡುತ್ತಿರುವುದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುತ್ತಿದೆ. ಕಾರ್ಯಕರ್ತರ ಮನಸ್ಸಿಗೂ ನೋವು ಉಂಟಾಗುತ್ತಿದೆ. ಇದಕ್ಕೆ ತಾರ್ಕಿಕ ಅಂತ್ಯ ಹಾಡಬೇಕಿದೆ. 50 ಶಾಸಕರು ಬಂದಿದ್ದು, ಹಾದಿಬೀದಿಯಲ್ಲಿ ಮಾತನಾಡುವವರಿಗೆ ರಾಷ್ಟ್ರೀಯ ನಾಯಕರು ತಾಕೀತು ಮಾಡಬೇಕೆಂದು ಅವರೆಲ್ಲರೂ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.
ಪಕ್ಷದ ಸಂಘಟನೆಯ ಜೊತೆ, ರಾಜ್ಯಾಧ್ಯಕ್ಷರಿಗೆ ಶಕ್ತಿ ಕೊಡುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂಬುದು ಜನಪ್ರತಿನಿಧಿಗಳ ಆಶಯವಾಗಿತ್ತು. ಸಂಘಟನಾ ಪರ್ವದಲ್ಲಿ ನಡೆಯುತ್ತಿರುವ ಸದಸ್ಯತ್ವ ಅಭಿಯಾನ, ಮಂಡಲ ಅಧ್ಯಕ್ಷರು, ಜಿಲ್ಲಾ ಅಧ್ಯಕ್ಷರ ನಿಯುಕ್ತಿಗೆ ಆಗುತ್ತಿರುವ ಎಲ್ಲ ಕ್ರಮಗಳು ಅಚ್ಚುಕಟ್ಟಾಗಿ ಆಗುತ್ತಿವೆ ಎಂದು ಹೇಳಿದರು.
ಓದಿ: ಸರ್ಕಾರಕ್ಕೆ ಯಾವಾಗ ಬುದ್ಧಿ ಬರತ್ತೋ ಆವಾಗ ದಾಸೋಹ ದಿನ ಅರ್ಥಪೂರ್ಣವಾಗಿ ಆಚರಣೆ ಮಾಡಲಿ: ವಿಜಯೇಂದ್ರ