ಚಿಕ್ಕಮಗಳೂರು: 'ಪ್ರಧಾನಿ ಮೋದಿ ಅಕ್ಕಿಗೆ ತಮ್ಮ ಫೋಟೋ ಹಾಕಿಕೊಂಡು ಓಡಾಡುತ್ತಿದ್ದಾರೆ. ಇವರು ಒಂದೇ ಒಂದು ಕಾಳು ಅಕ್ಕಿ ಕೊಟ್ಟಿಲ್ಲ' ಎಂದು ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತರೀಕೆರೆಯಲ್ಲಿ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಪರ ಪ್ರಚಾರ ನಡೆಯಿತು. ಈ ಸಂದರ್ಭ ಬಿಜೆಪಿ ನಾಯಕರು, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ 18-20 ಸ್ಥಾನ ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಹೇಳಿಕೆ ಜಗತ್ತೀನ 8ನೇ ಅದ್ಭುತ. ರಾಜ್ಯದಲ್ಲಿ ಬಿಜೆಪಿ - ಜೆಡಿಎಸ್ 28ಕ್ಕೆ 28 ಸ್ಥಾನಗಳನ್ನೂ ಗೆಲ್ಲುತ್ತದೆ. ಸರ್ಕಾರ ಬಂದು 9 ತಿಂಗಳಾಯ್ತು. ಒಂದು ರೂಪಾಯಿಯ ಕೆಲಸ ಆಗಿಲ್ಲ. ಇಂದು ಕಾಂಗ್ರೆಸ್ ಶಾಸಕರಿಗೆ ಅನುದಾನ ತರಲು ಆಗ್ತಿಲ್ಲ. ಸರ್ಕಾರ ರೈತರು, ಬಡವರ ಹೆಸರಲ್ಲಿ ಮೊಸಳೆ ಕಣ್ಣೀರು ಹಾಕುತ್ತಿದೆ. ಇಂತಹ ಕೆಟ್ಟ ಸರ್ಕಾರ ನಾನೆಂದಿಗೂ ನೋಡಿರಲಿಲ್ಲ. ಒಂದು ಲಕ್ಷ ಕೋಟಿ ರೂ.ಗೂ ಹೆಚ್ಚು ಸಾಲ ಮಾಡುವ ಪರಿಸ್ಥಿತಿ ಬಂದಿದೆ. 2-3 ತಿಂಗಳಲ್ಲಿ ಸರ್ಕಾರಿ ನೌಕರರಿಗೂ ಸಂಬಳ ಕೊಡೋದಕ್ಕೆ ಕಷ್ಟ ಆಗುತ್ತದೆ. ಈ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟ ಆಗುತ್ತದೆ ಎಂದು ಟೀಕಿಸಿದರು.
ಮಾಜಿ ಸಚಿವ ಸಿ.ಟಿ ರವಿ ಮಾತನಾಡಿ, ಕಾಂಗ್ರೆಸ್ ಪ್ರಣಾಳಿಕೆಯನ್ನು ನೋಡಿದ್ದೀರಾ?. ಇವರು ದೇಶವನ್ನೇ ಒತ್ತೆ ಇಡಲು ಹೇಸುವ ಜನರಲ್ಲ. ಸಿಎಂ ಸಿದ್ದರಾಮಯ್ಯರ ಲೆಕ್ಕ ಯಾರಿಗಾದರು ಗೊತ್ತಾ? ಹೇಳ್ತೀನಿ ಕೇಳಿ. ನಾನು ಕೊಟ್ಟೆ, ನಾನು ಕೊಟ್ಟೆ ಅಂತಾರೆ. ಯಾರತ್ರ ಕಿತ್ತು ಕೊಟ್ರು ಅಂತಾ ಗೊತ್ತಾ? ಈಗ ಮನೆಯಲ್ಲಿ ಓರ್ವ ಕುಡಿದರೆ ತಿಂಗಳಿಗೆ 1,500 ರೂ. ಆಗುತ್ತೆ. ಮನೆಯಲ್ಲಿ ಇಬ್ಬರು ಕುಡಿದ್ರೆ 3,000 ರೂ. ಆಗುತ್ತದೆ. ಯಾರ ಮನೆಯದ್ದು ಕೊಟ್ರು ಹೇಳಿ? ನರೇಂದ್ರ ಮೋದಿ ಅವರು ಕೊಟ್ಟ ಅಕ್ಕಿಯನ್ನೇ ನಾನು ಕೊಟ್ಟೆ ಅಂತಿದ್ದಾರೆ. ಇವರು ಒಂದೇ ಒಂದು ಕಾಳು ಅಕ್ಕಿ ಕೊಟ್ಟಿಲ್ಲ ಎಂದು ಕಿಡಿ ಕಾರಿದರು.
ಸುಳ್ಳೇ ನಮ್ಮ ಮನೆ ದೇವರು ಅನ್ನೋದು ಕಾಂಗ್ರೆಸ್ಗೆ ಅನ್ವಯವಾಗುತ್ತದೆ. ಇದನ್ನು ಪಿಕ್ ಪಾಕೆಟ್ ಸರ್ಕಾರ ಅಂತೀರೋ, ದರೋಡೆ ಸರ್ಕಾರ ಅಂತೀರೋ. ಮೋದಿ ಅವರು ಇಲ್ಲದಿದ್ದರೆ ಕ್ಯಾಪ್ಟನ್ ಅಭಿನಂದನ್ 48 ಗಂಟೆಯಲ್ಲಿ ವಾಪಸ್ ಬರಲು ಆಗುತ್ತಿತ್ತೆ? ಮೋದಿ ಇಲ್ಲ ಎಂದರೆ ಸರ್ಜಿಕಲ್ ಸ್ಟ್ರೈಕ್ ಮೂಲಕ ಭಯೋತ್ಪಾದಕರಿಗೆ ಉತ್ತರ ಕೊಡೋದಕ್ಕೆ ಆಗುತ್ತಿತ್ತೆ? ಮೋದಿ ಪ್ರಧಾನಿ ಆಗಬೇಕಂದ್ರೆ ಕೋಟ ಶ್ರೀನಿವಾಸ್ ಪೂಜಾರಿ ಗೆಲ್ಲಬೇಕು. ಈ ಪೂಜಾರಿ ದೇವಸ್ಥಾನದ ಪೂಜಾರಿ ಅಲ್ಲ, ಕನ್ನಡದ ಪೂಜಾರಿ. ಲೋಕಸಭೆಯಲ್ಲಿ ಕನ್ನಡದಲ್ಲೇ ಮಾತನಾಡ್ತಾರೆ ಎಂದರೆ ಅದು ನಮ್ಮ ಹೆಮ್ಮೆ ಎಂದು ತಿಳಿಸಿದರು.
ಇದನ್ನೂ ಓದಿ: ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ: ಡಿಸಿಎಂ ಡಿಕೆ ಶಿವಕುಮಾರ್ಗೆ ಲೋಕಾಯುಕ್ತ ನೋಟಿಸ್ - DK Shivakumar
ತರೀಕೆರೆ ಪಟ್ಟಣದ ಬಯಲು ರಂಗಮಂದಿರದಲ್ಲಿ ನಿನ್ನೆ ಈ ಸಭೆ ನಡೆಯಿತು. ಕಾರ್ಯಕ್ರಮದಲ್ಲಿ ನಾಯಕರಾದ ಆರಗ ಜ್ಞಾನೇಂದ್ರ, ಮಾಧುಸ್ವಾಮಿ, ಡಿ.ಎಸ್ ಸುರೇಶ್, ಡಿ.ಎನ್ ಜೀವರಾಜ್, ಎಸ್.ಎಲ್ ಬೋಜೇಗೌಡ ಸೇರಿದಂತೆ ಹಲವರು ಭಾಗಿ ಆಗಿದ್ದರು. ತರೀಕೆರೆ ಕಾಂಗ್ರೆಸ್ ಮಾಜಿ ಶಾಸಕ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮುಖಂಡರಾಗಿದ್ದಂತಹ ಎಸ್.ಎಂ ನಾಗರಾಜು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ, ತರೀಕೆರೆ ಕಾಂಗ್ರೆಸ್ ಮುಖಂಡ ಧ್ರುವ ಕುಮಾರ್ ಕೂಡ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ: ಇಸ್ರೇಲ್ ದಾಳಿಗೆ ಹಮಾಸ್ ಮುಖಂಡನ ಮೂವರು ಮಕ್ಕಳು, ಮೊಮ್ಮಕ್ಕಳ ಸಾವು - Israeli air strike
ಕಾಂಗ್ರೆಸ್ ತೊರೆದು ಬಿಜೆಪಿಗೆ ನೂರಾರು ಕೈ ಮುಖಂಡರು ಹಾಗೂ ಕಾರ್ಯಕರ್ತರು ಸೇರ್ಪಡೆಯಾದರು. ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿ ಆಗಬೇಕು ಎಂದು ಬಿಜೆಪಿ ಪಕ್ಷ ಸೇರ್ಪಡೆ ಆಗಿದ್ದು, ಕಾಂಗ್ರೆಸ್ಗೆ ಶಾಕ್ ನೀಡಿದ್ದಾರೆ. ಈ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷದ ಮೇಲೆ ಹಾಗೂ ಅಭ್ಯರ್ಥಿ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.