ರಾಯಚೂರು: ಜಿಲ್ಲೆಯಲ್ಲಿ ಲೋಕಸಭಾ ಚುನಾವಣಾ ಕಣ ರಂಗೇರುತ್ತಿದೆ. ಇಂದು ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಬಿಜೆಪಿಯಿಂದ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ, ಕಾಂಗ್ರೆಸ್‌ನಿಂದ ಜಿ.ಕುಮಾರ ನಾಯಕ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿ ಬಿ.ವಿ.ನಾಯಕ ಪರವಾಗಿ ಅವರ ಸೂಚಕರು ಜಿಲ್ಲಾ ಚುನಾವಣೆ ಅಧಿಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ.
ನಗರದ ಅತ್ತನೂರಲ್ಲಿ ನಡೆದ ಮುಖಂಡರ, ಕಾರ್ಯಕರ್ತರ ಸಭೆಯ ನಂತರ ಬಿಜೆಪಿಯ ಘೋಷಿತ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ಜೆಡಿಎಸ್ ಮುಖಂಡರು ಹಾಗೂ ಬಿಜೆಪಿ ನಾಯಕರೊಂದಿಗೆ ಎರಡನೇ ಸಲ ನಾಮಪತ್ರ ಸಲ್ಲಿಸಿದರು. ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ನಾರಾಯಣ ಸ್ವಾಮಿ, ಶಾಸಕ ಡಾ.ಶಿವರಾಜ್ ಪಾಟೀಲ್, ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ವೆಂಕಟರಾವ್ ನಾಡಗೌಡ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು.
ನಗರದ ಕರ್ನಾಟಕ ಸಂಘದಿಂದ ರ್ಯಾಲಿ ಮೂಲಕ ಆಗಮಿಸಿದ ಕಾಂಗ್ರೆಸ್ನ ಅಭ್ಯರ್ಥಿ ಜಿ.ಕುಮಾರ ನಾಯಕ ಜಿಲ್ಲಾ ಚುನಾವಣೆ ಅಧಿಕಾರಿಗಳಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಸಚಿವ ಎನ್.ಎಸ್.ಬೋಸರಾಜು, ಶರಣಬಸಪ್ಪ ದರ್ಶನಾಪುರ, ಶಾಸಕ ಬಸವನಗೌಡ ದದ್ದಲ್ ಹಾಗೂ ಸ್ಥಳೀಯ ಮುಖಂಡರು ಜೊತೆಗಿದ್ದರು.
ಬಿಜೆಪಿ ಟಿಕೆಟ್ ವಂಚಿತ ಮಾಜಿ ಸಂಸದ ಬಿ.ವಿ.ನಾಯಕ ಪರವಾಗಿ ಮಾನವಿ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಜಕ್ಕಲದಿನ್ನಿ ಹಾಗೂ ಅವರ ಆಪ್ತರು, ಪಕ್ಷದ ಮುಖಂಡರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ಬಿ.ವಿ.ನಾಯಕ ಪರವಾಗಿ ಉಮೇದುವಾರಿಕೆ ಸಲ್ಲಿಸಿದರು.
ಪಕ್ಷದಿಂದ ಈಗಾಗಲೇ ಘೋಷಿಸಿರುವ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಮಪತ್ರದ ಜೊತೆಯಲ್ಲಿ ಮಾಜಿ ಸಂಸದ ಬಿ.ವಿ.ನಾಯಕ ನಾಮಪತ್ರ ಸಲ್ಲಿಸಿರುವುದು ಕೆಲವೊಂದು ಗೊಂದಲಕ್ಕೆ ಕಾರಣವಾಗಿದೆ. ಅಲ್ಲದೇ ರಾಜಾ ಅಮರೇಶ್ವರ ನಾಯಕ ಕುರಿತಾಗಿ ಜಾತಿ ಪ್ರಮಾಣಪತ್ರ ವಿವಾದದ ಕಂಟಕ ಎದುರಾಗಿತ್ತು.
'ಬಿ.ವಿ.ನಾಯಕರದ್ದು ಬಂಡಾಯವಲ್ಲ': ನಾಮಪತ್ರ ಸಲ್ಲಿಸಿದ ನಂತರದಲ್ಲಿ ಸುದ್ದಿಗಾರರೊಂದಿಗೆ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಬಿಜೆಪಿಯಲ್ಲಿ ಬಿ.ವಿ.ನಾಯಕರ ಅವರದ್ದು ಬಂಡಾಯವಲ್ಲ. ಏಪ್ರಿಲ್ 22ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ರಾಜ್ಯ ಚುನಾವಣಾ ಉಸ್ತುವಾರಿಗಳೇ ಎಲ್ಲಾ ನೋಡಿಕೊಳ್ಳುತ್ತಾರೆ. ಬಿ ಫಾರಂ ಅನ್ನು ನನಗೆ ನೀಡಲಾಗಿದೆ. ಬಿಜೆಪಿ-ಜೆಡಿಎಸ್ ನಾಯಕರೆಲ್ಲ ಒಟ್ಟಾಗಿದ್ದೇವೆ. ಹೆಚ್ಚು ಬಹುಮತದಿಂದ ಗೆಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂಓದಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರ: ಪ್ರಿಯಾಂಕ ಜಾರಕಿಹೊಳಿ ನಾಮಪತ್ರ ಸಲ್ಲಿಕೆ - Priyanka Jarkiholi