ಬೆಂಗಳೂರು: ಲೋಕಸಭೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪ್ರಧಾನಿ ಮೋದಿ ಫೋಟೋ ಬಳಕೆ ಸಂಬಂಧ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ನಿಯೋಗ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗೆ ಇಂದು ದೂರು ಸಲ್ಲಿಸಿತು. ಪಿ.ರಾಜೀವ್ ನೇತೃತ್ವದ ನಿಯೋಗ ಚುನಾವಣಾ ಆಯೋಗಕ್ಕೆ ಈ ಸಂಬಂಧ ದೂರು ನೀಡಿದ್ದು, ಮೋದಿ ಹಾಗೂ ಬಿಜೆಪಿ ನಾಯಕರುಗಳ ಹೆಸರು ಹಾಗೂ ಫೋಟೋ ಬಳಸದಂತೆ ಎಚ್ಚರಿಕೆ ನೀಡುವಂತೆ ಮನವಿ ಮಾಡಿತು.
ಪ್ರಧಾನಿ ಮೋದಿ ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಯ ಮುಖವಾಗಿದ್ದಾರೆ. ಮೋದಿಯವರ ಸಾಧನೆಗಳೇ ಬಿಜೆಪಿಯ ಪ್ರಮುಖ ಪ್ರಚಾರದ ವಿಷಯವಾಗಿದೆ. ಹಾಗಾಗಿ ಚುನಾವಣೆಯಲ್ಲಿ ಮೋದಿ ಹೆಸರು ಹಾಗೂ ಫೋಟೋವನ್ನು ಕೇವಲ ಬಿಜೆಪಿ, ಬಿಜೆಪಿ ಅಭ್ಯರ್ಥಿಗಳು ಹಾಗೂ ಮೈತ್ರಿ ಅಭ್ಯರ್ಥಿಗಳು ಬಳಸಬಹುದು. ಬೇರೆಯವರಿಗೆ ಬಳಸುವ ಅಧಿಕಾರ ಇಲ್ಲ ಎಂದು ದೂರಿನಲ್ಲಿ ತಿಳಿಸಿದೆ.
ಆದರೆ ಶಿವಮೊಗ್ಗದ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಅವರು ಮೋದಿ ಹಾಗೂ ಇತರ ಬಿಜೆಪಿ ನಾಯಕರ ಪರವಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಮತದಾರರ ದಾರಿ ತಪ್ಪಿಸುತ್ತಿದ್ದಾರೆ. ಆ ಮೂಲಕ ಮತದಾರರನ್ನು ಗೊಂದಲಕ್ಕೀಡು ಮಾಡುತ್ತಿದ್ದಾರೆ. ಇದು ಅಪರಾಧ. ಅವರ ನಡೆ ನೀತಿ ಸಂಹಿತೆಗೆ ವಿರುದ್ಧವಾಗಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಮೋದಿ ಫೋಟೋ ಬಳಸದಂತೆ ಅವರಿಗೆ ಎಚ್ಚರಿಕೆ ನೀಡುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.
ಇದನ್ನೂ ಓದಿ: ಏ.14ರಂದು ರಾಜ್ಯದಲ್ಲಿ ಮೋದಿ ಮತ ಪ್ರಚಾರ: ಮೈಸೂರಲ್ಲಿ ಸಮಾವೇಶ, ಮಂಗಳೂರಲ್ಲಿ ರೋಡ್ ಶೋ - Modi Campaign