ಬೆಂಗಳೂರು: ಮಾಜಿ ಸಚಿವ, ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ತಮ್ಮ ಮತವನ್ನು ತಮಗೆ ಚಲಾಯಿಸುವ ಅವಕಾಶವನ್ನು ತಪ್ಪಿಸಿಕೊಂಡಿದ್ದಾರೆ. ಕೊನೆ ಕ್ಷಣದಲ್ಲಿ ತುಮಕೂರು ಟಿಕೆಟ್ ಸಿಕ್ಕ ಹಿನ್ನೆಲೆ ಅಲ್ಲಿನ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಲು ಸಾಧ್ಯವಾಗದೇ ಇರುವುದರಿಂದ ಸ್ವಕ್ಷೇತ್ರ ಗೋವಿಂದರಾಜನಗರದಲ್ಲಿ ಮತದಾನ ಮಾಡಿದರು. ಬೆಳಗ್ಗೆಯೇ ಬೆಂಗಳೂರಿನ ಗೋವಿಂದರಾಜನಗರದ ಆರೋಗ್ಯ ಕೇಂದ್ರದ ಮತಗಟ್ಟೆಗೆ ಆಗಮಿಸಿದ ವಿ.ಸೋಮಣ್ಣ ಮತ ಚಲಾಯಿಸಿದರು.
ಸರದಿ ಸಾಲಿನಲ್ಲಿ ನಿಂತು ಮತಗಟ್ಟೆ ಪ್ರವೇಶಿಸಿ ತಮ್ಮ ಗುರುತು ಪತ್ರವನ್ನು ಹಾಜರುಪಡಿಸಿದ ಸೋಮಣ್ಣ, ತಮ್ಮ ಹಕ್ಕು ಚಲಾವಣೆ ಮಾಡಿದರು. ನಂತರ ಮಾತನಾಡಿದ ಸೋಮಣ್ಣ, ಮೋದಿ ಕನಸು ನನಸು ಮಾಡಲು ಮತದಾನದ ಬೃಹತ್ ಕಾರ್ಯಕ್ರಮದಲ್ಲಿ ಸಂತೋಷದಿಂದ ಭಾಗಿಯಾಗಿದ್ದಾಗಿ ತಿಳಿಸಿದರು.
ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ವಿ.ಸೋಮಣ್ಣ ಅವರ ಹೆಸರು ಗೋವಿಂದರಾಜನಗರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿದೆ. ತುಮಕೂರು ಟಿಕೆಟ್ ಸಿಗುವುದು ಖಚಿತವಾಗಿಲ್ಲದೇ ಇದ್ದ ಕಾರಣ ಅವರು ತುಮಕೂರು ಕ್ಷೇತ್ರದ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರಿಸಿಕೊಂಡಿರಲಿಲ್ಲ. ಕೊನೆ ಕ್ಷಣದಲ್ಲಿ ಅವರಿಗೆ ಟಿಕೆಟ್ ನೀಡಲಾಯಿತು. ಹೀಗಾಗಿ ಸೋಮಣ್ಣ ತಮ್ಮ ಹೆಸರನ್ನು ತುಮಕೂರು ಮತದಾರರ ಪಟ್ಟಿಗೆ ಸೇರಿಸಿಕೊಳ್ಳಲಿಲ್ಲ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿ ಆಗಿದ್ದರೂ ಅವರ ಮತವನ್ನು ಅವರಿಗೇ ಹಾಕಿಕೊಳ್ಳುವ ಅವಕಾಶವನ್ನು ಸೋಮಣ್ಣ ತಪ್ಪಿಸಿಕೊಂಡರು.