ಬೆಂಗಳೂರು: ಮಹಾನಗರದ ಅವ್ಯವಸ್ಥೆಗಳ ವಿರುದ್ಧ ಇದೇ 28ರಂದು ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಪ್ರಕಟಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ಇಂದು ಬೆಂಗಳೂರಿನ ಸಮಸ್ಯೆಗಳ ಕುರಿತು ಪಕ್ಷದ ನಾಯಕರು ಸಭೆಯಲ್ಲಿ ಚರ್ಚೆ ನಡೆಸಿದರು. ಆ ಬಳಿಕ ಬಳಿಕ ಮಾತನಾಡಿದ ವಿಜಯೇಂದ್ರ, ಬೆಂಗಳೂರು ನಗರದ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರತಿ ವಾರ್ಡ್ನಲ್ಲಿ ಬಿಜೆಪಿ ವತಿಯಿಂದ ಹೋರಾಟವನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು. ಬೆಂಗಳೂರು ಮಹಾನಗರದ ಜನತೆಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಬಿಜೆಪಿ ಹೋರಾಟ ನಿರಂತರವಾಗಿ ಇರಲಿದೆ. ಕೇವಲ ನಾಮಕೇವಾಸ್ತೆ ಹೋರಾಟ ಇದಲ್ಲ. ಸಮಸ್ಯೆಗೆ ಪರಿಹಾರ, ಹೋರಾಟಕ್ಕೆ ಜಯ ಸಿಗಬೇಕಿದೆ. ಆ ನಿಟ್ಟಿನಲ್ಲಿ ಹೋರಾಟ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಇಂದು ನಗರದ ಎಲ್ಲ ಶಾಸಕರು, ಮಾಜಿ ಶಾಸಕರು, ಮಾಜಿ ಕಾರ್ಪೊರೇಟರ್ಗಳ ಸಭೆಯನ್ನು ನಡೆಸಲಾಗಿದೆ. ಬೆಂಗಳೂರು ನಗರದಲ್ಲಿ ಇವತ್ತು ಆಗುತ್ತಿರುವ ಅವ್ಯವಸ್ಥೆಗಳನ್ನು ಚರ್ಚಿಸಿದ್ದೇವೆ. ಕೇವಲ ಎರಡು ದಿನ ಮಳೆ ಬಂದಾಗ ಬೆಂಗಳೂರಿನ ರಸ್ತೆಗಳು ವಾಹನ ಓಡಾಡದಂತೆ ಬ್ಲಾಕ್ ಆಗಿದ್ದವು. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ಜನರಿದ್ದಾರೆ. ರಾಜ್ಯದಲ್ಲಿ ಹೊಸ ಸರ್ಕಾರ ಬಂದ ಬಳಿಕ ಒಂದು ವರ್ಷದಲ್ಲಿ ಬೆಂಗಳೂರು ನಗರದ ಅಭಿವೃದ್ಧಿಗೆ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ ಎಂದು ಟೀಕಿಸಿದರು.
ಎಷ್ಟೇ ಮಳೆ ಬಂದರೂ ಎದುರಿಸಲು ಸನ್ನದ್ಧರಾಗಿದ್ದೇವೆ ಎಂದು ಬಿಬಿಎಂಪಿ ಆಯುಕ್ತರು ಹೇಳುತ್ತಾರೆ. ತಯಾರಿದ್ದೇವೆ ಎಂದು ಅವರು ಭಾಷಣ ಮಾಡಿದರೂ ಅವ್ಯವಸ್ಥೆಗಳು ಹಾಗೇ ಉಳಿದಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ರಾಜ್ಯ ಸರ್ಕಾರವು ಆಸ್ತಿ ತೆರಿಗೆ, ಮೋಟಾರು ವಾಹನ ತೆರಿಗೆ ಸೇರಿ ಎಲ್ಲ ತೆರಿಗೆಗಳನ್ನು ಹೆಚ್ಚಿಸಿದೆ. ಆದರೆ, ಬೆಂಗಳೂರಿನ ಜನತೆಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ತಿಳಿಸಿದರು.
ರಸ್ತೆಗಳು ಗುಂಡಿಗಳಿಂದ ತುಂಬಿ ಹೋಗಿವೆ. ಕಸ ವಿಲೇವಾರಿಯೂ ಸರಿಯಾಗಿ ಆಗುತ್ತಿಲ್ಲ. ಬೆಂಗಳೂರಿಗೆ ಅತಿ ಹೆಚ್ಚು ಸಚಿವರಿದ್ದರೂ ಈ ನಗರದ ಅಭಿವೃದ್ಧಿ ಕುರಿತು ಯಾರು ಕೂಡ ಚಿಂತನೆ ಮಾಡದೇ ಇರುವುದು ನಿಜವಾಗಿ ಒಂದು ದುರಂತ ಎಂದು ಹೇಳಿದರು.
ಇದನ್ನೂ ಓದಿ: 'ಬಂಡವಾಳ ಹೂಡಿಕೆ ಬಗ್ಗೆ ಅಪಪ್ರಚಾರ ಮಾಡುವ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು' - D K Shivakumar
ಬೆಂಗಳೂರಿಗೆ ನಯಾ ಪೈಸೆ ನೀಡಿಲ್ಲ: ಬೆಂಗಳೂರು ಅಭಿವೃದ್ಧಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಒಂದು ನಯಾಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಮುಖ್ಯಮಂತ್ರಿಗಳು ಹೋಗಿ ಫೋಟೊ ಷೋ ಮಾಡುವುದು ಬಿಟ್ಟರೆ ಬೇರೇನೂ ಕೆಲಸ ಆಗುತ್ತಿಲ್ಲ. ಕಮಿಷನರ್ ಮಳೆಗೆ ಸಂಬಂಧಿಸಿ ಎಲ್ಲ ಮಾಡಿದ್ದಾಗಿ ಒಂದು ತಿಂಗಳ ಹಿಂದೆಯೇ ಹೇಳಿಕೆ ನೀಡಿದ್ದರು. ಪಾಲಿಕೆ ಎಲ್ಲ ಸಿದ್ಧತೆ ಮಾಡಿದ್ದರೆ ಸಿಎಂ ಸ್ಥಳ ಭೇಟಿ ಮಾಡುವ ಪ್ರಮೇಯ ಯಾಕೆ ಬಂತು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನಿಸಿದರು.
ಯಡಿಯೂರಪ್ಪ ಅವರು ಹಿಂದೆ ಒಂದು ವರ್ಷದಲ್ಲಿ 7 ಸಾವಿರ ಕೋಟಿ ವಿಶೇಷ ಅನುದಾನ ನೀಡಿದ್ದರು. ಬಸವರಾಜ ಬೊಮ್ಮಾಯಿ ಅವರು 6,700 ಕೋಟಿ ಬಿಡುಗಡೆ ಮಾಡಿದ್ದರು. ಕಾಂಗ್ರೆಸ್ ಎಷ್ಟು ಬಿಡುಗಡೆ ಮಾಡಿರುವುದನ್ನು ಪ್ರಕಟಿಸಿಲಿ ಎಂದು ಸವಾಲೆಸೆದರು. ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ಹಣ ಇಲ್ಲದೆ ಗುತ್ತಿಗೆದಾರರು ಆತ್ಮಹತ್ಯೆಗೆ ಮುಂದಾಗಿದ್ದರು. ಕಮಿಷನ್ ಆಪಾದನೆ ಮಾಡಿದ್ದರು. ಈ ಸ್ಥಿತಿಯಲ್ಲಿ ರಾಜ್ಯ ಸರ್ಕಾರದ ಪಾತ್ರ ಏನು?. ಕುಡಿಯುವ ನೀರಿಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನ ಮರ್ಯಾದೆ ಹರಾಜಾಗಿದೆ ಎಂದು ಹೇಳಿದರು.
ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಎಷ್ಟು ಹಣ ನೀಡಿದ್ದೀರಿ? ಲೆಕ್ಕ ಕೊಡಿ. ಬಿಲ್ ಸಿಗದೆ ಕಸ ತೆಗೆಯುವವರು ಸಮಸ್ಯೆಯಲ್ಲಿದ್ದಾರೆ. ರಾಶಿ ರಾಶಿ ಕಸ ಬಿದ್ದಿದೆ. ಬೆಂಗಳೂರಿನ ತೆರಿಗೆ ನಮ್ಮ ಹಕ್ಕು ಎಂದು ಇಲ್ಲಿನ ಜನರೂ ಕೇಳುತ್ತಿದ್ದಾರೆ ಎಂದು ತಿಳಿಸಿದರು. ಇದರ ವಿರುದ್ಧ ಇದೇ 28ರಂದು ಫ್ರೀಡಂ ಪಾರ್ಕಿನಲ್ಲಿ ಬಿಜೆಪಿ ದೊಡ್ಡ ಹೋರಾಟ ಮಾಡಲಿದೆ ಎಂದು ತಿಳಿಸಿದರು.