ಬೆಂಗಳೂರು: ಮುಡಾ ಅಕ್ರಮ ಆರೋಪ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಿಎಂ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕುಮಾರಕೃಪಾ ಅತಿಥಿಗೃಹದಿಂದ ಪಾದಯಾತ್ರೆ ಮೂಲಕ ಆಗಮಿಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಿಎಂ ಅಧಿಕೃತ ನಿವಾಸ ಕಾವೇರಿಗೆ ಮುತ್ತಿಗೆ ಹಾಕಿದರು. ಈ ವೇಳೆ ಗೇಟ್ ಬಳಿಯೇ ತಡೆದ ಪೊಲೀಸರು, ಪ್ರತಿಭಟನಾನಿರತ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು. ಮುಂಜಾಗ್ರತಾ ಕ್ರಮವಾಗಿ ಸಿಎಂ ನಿವಾಸಕ್ಕೆ ಹೆಚ್ಚಿನ ಭದ್ರತೆ ಕಲ್ಪಿಸಿದ್ದು, ಬಿಜೆಪಿ ಕಾರ್ಯಕರ್ತರು ಆಗಮಿಸುತ್ತಿದ್ದಂತೆ ವಶಕ್ಕೆ ಪಡೆದು ಸ್ಥಳದಿಂದ ಕರೆದೊಯ್ದರು.
ಮತ್ತೊಂದೆಡೆ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಕೂಡ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ನಡೆಸಲು ರಾಜ್ಯಪಾಲರು ನೀಡಿರುವ ಅನುಮತಿಗೆ ರಾಜ್ಯ ಹೈಕೋರ್ಟ್ ಹಸಿರು ನಿಶಾನೆ ತೋರಿಸಿದೆ. ಅಲ್ಲದೆ, ಜನ ಪ್ರತಿನಿಧಿ ನ್ಯಾಯಾಲಯ ಸಿಎಂ ವಿರುದ್ಧ ಎಫ್ಐಆರ್ ದಾಖಲಿಸಿ, ಮೂರು ತಿಂಗಳ ಒಳಗಾಗಿ ತನಿಖೆ ಮುಗಿಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ರಮೇಶ್ ಗೌಡ ಒತ್ತಾಯ ಮಾಡಿದರು.
ಊರಿಗೆಲ್ಲ ನೈತಿಕತೆಯ ಪಾಠ ಮಾಡುವ ಸಿದ್ದರಾಮಯ್ಯ ಅವರು ಈಗಲಾದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದ ಅವರು; ಅವರು ರಾಜೀನಾಮೆ ಕೊಡದಿದ್ದರೆ ಜೆಡಿಎಸ್ ನಿರಂತರವಾಗಿ ಉಗ್ರ ಹೋರಾಟ ನಡೆಸುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಧಿಕಾರ ದುರ್ಬಳಕೆ ಆರೋಪ : ಮುಡಾದಲ್ಲಿ ನಿವೇಶನಗಳನ್ನು ಕಬಳಿಸಲು ಸಿಎಂ ಸಿದ್ದರಾಮಯ್ಯ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ಈ ಬಗ್ಗೆ ನ್ಯಾಯಾಲಯಗಳ ಆದೇಶ ಕೂಡ ಸ್ಪಷ್ಟವಾಗಿದೆ. ತಮ್ಮ ಕುಟುಂಬಕ್ಕೆ ಅನುಕೂಲ ಮಾಡಿಕೊಳ್ಳಲು ಸಿಎಂ ಅವರು ಅಧಿಕಾರ ದುರ್ಬಳಕೆ ಜತೆಗೆ ನೈತಿಕ ಮೌಲ್ಯಗಳನ್ನು ಗಾಳಿಗೆ ತೂರಿದ್ದಾರೆ. ಹೀಗಾಗಿ ಒಂದು ಕ್ಷಣವೂ ಅವರು ಅಧಿಕಾರದಲ್ಲಿ ಮುಂದುವರಿಯದೇ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ತಮ್ಮ ಪತ್ನಿಗೆ ಅನುಕೂಲ ಆಗುವಂತೆ ನಿರ್ಧಾರ ತೆಗೆದುಕೊಳ್ಳುವಾಗ, ಪ್ರತಿ ಸಲವೂ ಸಿದ್ದರಾಮಯ್ಯ ಅವರು ಪ್ರಭಾವಿ ಹುದ್ದೆಯಲ್ಲಿ ಇದ್ದರು. ಈ ಪ್ರಭಾವದಿಂದ ಅವರು ತಮ್ಮ ಪತ್ನಿ ಅವರಿಗೆ ಕೇವಲ ಎರಡು ನಿವೇಶನಗಳು ದೊರೆಯುಬೇಕಿದ್ದ ಜಾಗದಲ್ಲಿ 14 ನಿವೇಶನಗಳನ್ನು ಪಡೆದುಕೊಂಡಿದ್ದಾರೆ. ಇದನ್ನೇ ನ್ಯಾಯಾಲಯ ಗಮನಿಸಿದೆ. ಇನ್ನಾದರೂ ಅವರು ಪದತ್ಯಾಗ ಮಾಡಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯರಾದ ಕೆ ಎನ್ ತಿಪ್ಪೇಸ್ವಾಮಿ, ಟಿ.ಎ.ಶರವಣ ಸೇರಿದಂತೆ ಜೆಡಿಎಸ್ ನಗರ ಘಟಕದ ಅನೇಕ ಪದಾಧಿಕಾರಿಗಳು, ವಿಧಾನಸಭೆ ಕ್ಷೇತ್ರಗಳ ಅಧ್ಯಕ್ಷರು, ಇತರ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ - MUDA Scam