ಬೆಂಗಳೂರು: ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿದ ಬಿಟ್ ಕಾಯಿನ್ ಹಗರಣ ಸಂಬಂಧ ಇನ್ಸ್ಪೆಕ್ಟರ್ ಪ್ರಶಾಂತ್ ಬಾಬು ಹಾಗೂ ಸೈಬರ್ ತಜ್ಞ ಸಂತೋಷ್ ಸೇರಿ ಇಬ್ಬರನ್ನ ಬಂಧಿಸಿರುವ ಸಿಐಡಿ ವಿಶೇಷ ತನಿಖಾ ತಂಡ (ಎಸ್ಐಟಿ) ನಗರದ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ಆರು ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದುಕೊಂಡಿದೆ.
ಬಿಟ್ ಕಾಯಿನ್ ಪ್ರಕರಣಕ್ಕೆ ಬೇಕಾಗಿದ್ದ ಡಿಜಿಟಲ್ ಸಾಕ್ಷ್ಯಾಧಾರ ನಾಶಪಡಿಸಿರುವುದು, ಪ್ರಕರಣದ ಪ್ರಮುಖ ಆರೋಪಿಗಳಾದ ಶ್ರೀಕೃಷ್ಣ ಹಾಗೂ ಸಹಚರನಾಗಿದ್ದ ರಾಬಿನ್ ಖಂಡನ್ ವಾಲಾಗೆ ಅಕ್ರಮವಾಗಿ ಲ್ಯಾಪ್ಟಾಪ್ ಖರೀದಿಸಿ ಕೊಟ್ಟು, ಒತ್ತಾಯಪೂರ್ವಕವಾಗಿ ಹ್ಯಾಕ್ ಮಾಡಿಸಿ 1.83 ಲಕ್ಷ ಮೌಲ್ಯದ ಬಿಟ್ ಕಾಯಿನ್ಗಳನ್ನ ವರ್ಗಾಯಿಸಿಕೊಂಡ ಆರೋಪದಡಿ ಜೆಸಿಪಿಡಿ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಇಒ ಸಂತೋಷ್ ಕುಮಾರ್ ಹಾಗೂ ಪ್ರಕರಣದ ತಾಂತ್ರಿಕ ನೆರವು ನೀಡಲು ನಿಯೋಜನೆಗೊಂಡಿದ್ದ ಇನ್ಸ್ಪೆಕ್ಟರ್ ಪ್ರಶಾಂತ್ ಬಾಬು ಅವರನ್ನ ನಿನ್ನೆ ಬಂಧಿಸಲಾಗಿತ್ತು.
ಶ್ರೀಕಿಯನ್ನ ವಿವಿಧ ಪ್ರಕರಣಗಳಲ್ಲಿ ವಿಚಾರಣೆಗೊಳಪಡಿಸಿದ್ದ ಇನ್ಸ್ಪೆಕ್ಟರ್ಗಳಾದ ಲಕ್ಷ್ಮೀಕಾಂತಯ್ಯ, ಚಂದ್ರಾಧರ್ ಹಾಗೂ ಶ್ರೀಧರ್ ಪೂಜಾರ್ ವಿರುದ್ಧ ಸಿಐಡಿಯ ಸೈಬರ್ ಪೊಲೀಸ್ ಠಾಣೆಯಲ್ಲಿ ಎಸ್ಐಟಿ ಪ್ರಕರಣ ದಾಖಲಿಸಿಕೊಂಡಿದೆ. ಡ್ರಗ್ಸ್ ಪ್ರಕರಣದಲ್ಲಿ 2020ರಲ್ಲಿ ಕೆಂಪೇಗೌಡ ನಗರ ಪೊಲೀಸರಿಂದ ಬಂಧಿತನಾಗಿದ್ದ ಶ್ರೀಕಿ ಪ್ರಕರಣವನ್ನ ಸಿಸಿಬಿ ಅಂದಿನ ತನಿಖಾಧಿಕಾರಿ ಶ್ರೀಧರ್ ಪೂಜಾರಿ, ಅಲ್ಲದೇ ಕಾಟನ್ಪೇಟೆ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಲಕ್ಷ್ಮೀಕಾಂತಯ್ಯ ಹಾಗೂ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಇನ್ಸ್ಪೆಕ್ಟರ್ ಚಂದ್ರಾಧರ್ 2020ರಲ್ಲಿ ವಿವಿಧ ದಿನಾಂಕಗಳಂದು ಪ್ರತ್ಯೇಕ ಪ್ರಕರಣಗಳಲ್ಲಿ ಶ್ರೀಕಿಯನ್ನು ಗೌಪ್ಯವಾಗಿ ಬಂಧಿಸಿ ಅಕ್ರಮವಾಗಿ ವಿಚಾರಣೆ ನಡೆಸಿದ್ದರು.
ಅನಧಿಕೃತವಾಗಿ ಕ್ರಿಪ್ಟೊ ವ್ಯಾಲೆಟ್ ಆಕ್ಸಿಸ್: ಈ ಅವಧಿಯಲ್ಲಿ ಶ್ರೀಕಿಗೆ ಲ್ಯಾಪ್ಟಾಪ್ ನೀಡಿ ಅನಧಿಕೃತವಾಗಿ ಕ್ರಿಪ್ಟೊ ವ್ಯಾಲೆಟ್ ಆಕ್ಸಿಸ್ ಮಾಡಿದ್ದರು. ಒತ್ತಾಯಪೂರ್ವಕವಾಗಿ ಹ್ಯಾಕಿಂಗ್ ಮಾಡಿಸಿ ಲಕ್ಷಾಂತರ ಮೌಲ್ಯದ ಬಿಟ್ ಕಾಯಿನ್ಗಳನ್ನ ವರ್ಗಾವಣೆ ಮಾಡಿಸಿಕೊಂಡಿದ್ದರು. ಶ್ರೀಕಿ ವಿರುದ್ಧ ದಾಖಲಾಗಿದ್ದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ತಾಂತ್ರಿಕ ಅಧಿಕಾರಿಯಾಗಿ ನಿಯೋಜನೆಯಾಗಿದ್ದ ಪ್ರಶಾಂತ್ ಬಾಬು ಅವರು ಎಚ್ಎಚ್ಎಸ್ಆರ್ ಲೇಔಟ್ನಲ್ಲಿರುವ ಜೆಸಿಪಿಡಿ ಟೆಕ್ನಾಲಜೀಸ್ ಸೆಂಟರ್ಗೆ ಆರೋಪಿಗಳನ್ನ ಕರೆದೊಯ್ದು, ನ್ಯಾಯಾಲಯದ ಅನುಮತಿಯಿಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಟಲ್ ಸಾಕ್ಷ್ಯಧಾರಗಳನ್ನ ನಾಶಪಡಿಸಿ, ಯೂಸರ್ನೇಮ್, ಪಾಸ್ವರ್ಡ್ ಬದಲಾಯಿಸುವಂತೆ ಸಂತೋಷ್ ಕುಮಾರ್ಗೆ ಸೂಚಿಸಿದ್ದರು.
ಶ್ರೀಕಿ ಹಲವು ಬಾರಿ ಹ್ಯಾಕಿಂಗ್ ಮಾಡಲು ಅಮೆಜಾನ್ ಸರ್ವರ್ಗಳಿಗೆ ಭೇಟಿ ನೀಡಿದರೂ ಪ್ರಕರಣದಲ್ಲಿ ಎಲ್ಲಿಯೂ ಮಾಹಿತಿ ನೀಡಿಲ್ಲ. ತನಿಖೆ ವೇಳೆ ಅಕ್ರಮವಾಗಿ ಉಪಯೋಗಿಸಿದ್ದ ಎಂಎಸ್ಐ ಲ್ಯಾಪ್ಟಾಪ್ನಲ್ಲಿ ಬ್ಲ್ಯಾಕ್ ಹಿಸ್ಟರಿಯಲ್ಲಿ ಡಿಲೀಟ್ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆ ಇಬ್ಬರನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಜಿ ಅಲೋಕ್ ಮೋಹನ್, ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಡಿ ಇನ್ಸ್ಪೆಕ್ಟರ್ ಒಳಗೊಂಡಂತೆ ಇಬ್ಬರನ್ನ ಬಂಧಿಸಲಾಗಿದೆ. ಅಕ್ರಮದಲ್ಲಿ ಭಾಗಿಯಾದ ಆರೋಪದಡಿ ನಿನ್ನೆ ಬಂಧಿಸಿ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಜ.31 ರವರೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ತನಿಖಾ ದೃಷ್ಟಿಯಿಂದ ಈ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುವುದಿಲ್ಲ ಎಂದರು.
ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ: ಸಾಕ್ಷ್ಯವಿದ್ದರೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಎಸ್ಐಟಿ ಮನವಿ