ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಕ್ರಿಪ್ಟೊ ವ್ಯಾಲೆಟ್ ಮುಖಾಂತರ ವರ್ಗಾವಣೆಯಾಗಿರುವ ಕೋಟ್ಯಂತರ ಮೌಲ್ಯದ ಬಿಟ್ ಕಾಯಿನ್ ರಿಕವರಿ ಮಾಡಿಕೊಳ್ಳುವುದೇ ತೊಡಕಾಗಿದೆ.
ಅಂತಾರಾಷ್ಟ್ರೀಯ ಹಾಗೂ ಆನ್ಲೈನ್ ಗೇಮಿಂಗ್ ಕಂಪನಿಯ ಜಾಲತಾಣಗಳನ್ನ ಹ್ಯಾಕ್ ಮಾಡಿ ಕ್ರಿಪ್ಟೊ ವ್ಯಾಲೆಟ್ ಮೂಲಕ ಕೋಟ್ಯಂತರ ರೂಪಾಯಿ ವರ್ಗಾವಣೆ ಮಾಡಿರುವ ಆರೋಪ ಶ್ರೀಕಿ ಮೇಲಿದೆ. ಈತನನ್ನ ಬಂಧಿಸಿ ವಿಚಾರಣೆಗೊಳಪಡಿಸಿದಾಗಲೂ ಸ್ಪಷ್ಟವಾಗಿ ಇಷ್ಟೇ ಪ್ರಮಾಣದಲ್ಲಿ ಬಿಟ್ ಕಾಯಿನ್ ವರ್ಗಾವಣೆ ಬಗ್ಗೆ ಸಮಗ್ರ ಹೇಳಿಕೆ ನೀಡಿಲ್ಲ ಎನ್ನಲಾಗಿದೆ.
ಆರೋಪಿ ಹೇಳಿಕೆಯನ್ನ ನೈಜತೆ ಪರಿಶೀಲಿಸಲು ದೇಶ - ವಿದೇಶಗಳ ಆನ್ ಲೈನ್ ಗೇಮಿಂಗ್ ಹಾಗೂ ಬಿಟ್ ಕಾಯಿನ್ ಎಕ್ಸ್ ಚೇಂಜ್ ಕಂಪನಿಗಳಿಗೆ ಇಂಟರ್ ಪೋಲ್ ಮೂಲಕ ಎಸ್ಐಟಿ ಮಾಹಿತಿ ಕೋರಿ ಪತ್ರ ಬರೆದಿತ್ತು. ಪತ್ರ ಬರೆದು ಹಲವು ತಿಂಗಳೇ ಕಳೆದರೂ ಆಯಾ ದೇಶಗಳ ಕಂಪನಿಗಳಿಂದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇದು ಎಸ್ಐಟಿ ತನಿಖೆಗೆ ಹಿನ್ನೆಡೆಯಾಗಿದೆ. ಕೆಲ ದಿನಗಳ ಬಳಿಕ ಕಾದು ನೋಡಿ ಮತ್ತೆ ಇಂಟರ್ ಪೋಲ್ ಮೂಲಕ ಮನವಿ ಪತ್ರ ನೀಡಲು ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಪತ್ರ ಬರೆದು ಮಾಹಿತಿ ಕೋರಿದರೂ ಪ್ರತಿಕ್ರಿಯಿಸದ 34 ವಿದೇಶಿ ಕಂಪನಿಗಳು: ಬಿಟ್ ಕಾಯಿನ್ ಹಗರಣ ಸಂಬಂಧ ಕೆ.ಜಿ.ನಗರ, ಕಾಟನ್ ಪೇಟೆ, ಅಶೋಕನಗರ, ಕಬ್ಬನ್ ಪಾರ್ಕ್ ಹಾಗೂ ತುಮಕೂರು ಸೇರಿದಂತೆ ಒಟ್ಟು 8 ಪ್ರಕರಣಗಳ ತನಿಖೆಯನ್ನ ಎಸ್ಐಟಿ ನಡೆಸುತ್ತಿದೆ. ಪ್ರಕರಣ ಸೂತ್ರಧಾರ ಶ್ರೀಕಿ, ಬಿಟ್ ಕಾಯಿನ್ ಮಾರಾಟಗಾರ ರಾಬಿನ್ ಖಂಡೇವಾಲ್ನನ್ನ ನಿರಂತರ ವಿಚಾರಣೆ ನಡೆಸಿದಾಗ ದೇಶ - ವಿದೇಶಗಳ ಆನ್ಲೈನ್ ಗೇಮಿಂಗ್ ಕಂಪನಿಗಳ ಹ್ಯಾಕ್ ಮಾಡಿ ಅಲ್ಲಿನ ಬಿಟ್ ಕಾಯಿನ್ ಎಕ್ಸ್ ಚೇಂಜ್ ಕಂಪನಿಗಳ ವರ್ಗಾವಣೆ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ಯುಎಸ್ಐ, ಕೊರಿಯಾ, ದಕ್ಷಿಣ ಕೊರಿಯಾ ಸೇರಿದಂತೆ ವಿವಿಧ ದೇಶಗಳಲ್ಲಿರುವ ಹತ್ತಾರು ದೇಶಗಳ 34 ವೆಬ್ ಸೈಟ್ ಹಾಗೂ ಕ್ರಿಪ್ಟೊ ಹಾಗೂ ಬಿಟ್ ಕಾಯಿನ್ ಎಕ್ಸ್ ಚೇಂಜ್ ಕಂಪನಿಗಳಿಗೆ ಇಂಟರ್ ಪೊಲ್ ಮೂಲಕ ಬಿಟ್ ಕಾಯಿನ್ ವರ್ಗಾವಣೆ ಮಾಹಿತಿ ನೀಡುವಂತೆ ಪತ್ರ ಬರೆಯಲಾಗಿತ್ತು. ಆದ್ರೆ ಇದುವರೆಗೂ ಯಾವುದೇ ಅಲ್ಲಿನ ಕಂಪನಿಗಳಿಂದ ಪ್ರತಿಕ್ರಿಯೆ ಬಂದಿಲ್ಲ. ಎಸ್ಐಟಿ ತನಿಖೆಯಲ್ಲಿ ಯಾರಿಗೆ ಎಷ್ಟು ಬಿಟ್ ಕಾಯಿನ್ ವರ್ಗಾವಣೆಯಾಗಿದೆ ಎಂಬುದೇ ತಿಳಿಯುವುದೇ ತನಿಖೆ ತಿರುಳಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಪತ್ರ ಬರೆದು ಮಾಹಿತಿ ಕೊರಲಾಗುವುದು ಎಂದು ಎಸ್ಐಟಿ ಹಿರಿಯ ಅಧಿಕಾರಿಯೊಬ್ಬರು ಈಟಿವಿ ಭಾರತಗೆ ತಿಳಿಸಿದ್ದಾರೆ.
150ಕ್ಕಿಂತ ಹೆಚ್ಚು ಸಾಕ್ಷಿದಾರರ ಹೇಳಿಕೆ ದಾಖಲಿಸಿಕೊಂಡ ಎಸ್ಐಟಿ: ಬಿಟ್ ಕಾಯಿನ್ ಹಗರಣದ ಒಟ್ಟು 8 ಪ್ರಕರಣಗಳ ತನಿಖೆ ನಡೆಸುತ್ತಿರುವ ಎಸ್ಐಟಿ ಇದುವರೆಗೂ 150ಕ್ಕಿಂತ ಹೆಚ್ಚು ಮಂದಿಯನ್ನ ವಿಚಾರಣೆ ನಡೆಸಿ ಅವರನ್ನ ಸಾಕ್ಷಿಗಳಾಗಿ ಹೇಳಿಕೆ ದಾಖಲಿಸಲಾಗಿದೆ. ಅಶೋಕನಗರದಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಕೆಂಪೆಗೌಡನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ಶೀಘ್ರದಲ್ಲೇ ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ. ಕಾಟನ್ ಪೇಟೆ ಠಾಣೆಯಲ್ಲಿ ಎಸ್ಐಟಿ ದೂರಿನ ಮೇರೆಗೆ ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ಇಬ್ಬರು ಪೊಲೀಸರು ಸೇರಿ ನಾಲ್ವರನ್ನ ಬಂಧಿಸಲಾಗಿದೆ. ಅಲ್ಲದೇ ಮತ್ತೊಬ್ಬ ಅಧಿಕಾರಿಯನ್ನ ಬಂಧಿಸದಂತೆ ಹೈಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದು, ಆದೇಶ ತೆರವುಗೊಳಿಸಲು ರಿಟ್ ಪಿಟಿಷನ್ ಹಾಕಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಓದಿ: ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಪೂರ್ಣ: ಸೋಮವಾರಕ್ಕೆ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ - Sexual assault case