ಮಂಡ್ಯ : ರಾಜ್ಯದಲ್ಲೆಡೆ ಭಾರಿ ಮಳೆ ಆಗ್ತಿದ್ರು, ಬಿಸಿಲ ತಾಪ ಹಕ್ಕಿ - ಪಕ್ಷಿಗಳನ್ನ ಬಿಡ್ತಿಲ್ಲ. ಕೆರೆ ಕಟ್ಟೆ ಸೇರಿದಂತೆ ನದಿಗಳೂ ನೀರಿಲ್ಲದೇ ಬಣಗುಡುತ್ತಿವೆ. ಬಿಸಿಲ ಬೇಗೆಗೆ ಮದ್ದೂರಿನ ಶಿಂಷಾ ನದಿ ಒಡಲು ಬತ್ತಿ ಹೋಗಿದೆ. ಈ ಹಿನ್ನೆಲೆಯಲ್ಲಿ ನದಿಯ ನೀರನ್ನೇ ಆಶ್ರಯಿಸಿಕೊಂಡಿದ್ದ ಕೊಕ್ಕರೆ ಬೆಳ್ಳೂರು ಪಕ್ಷಿಧಾಮದಲ್ಲಿನ ಪಕ್ಷಿ ಸಂಕುಲ ನೀರು - ಆಹಾರವಿಲ್ಲದೇ ಪರಿತಪಿಸುತ್ತಿವೆ. ಹಾಗಾದರೆ ಇಲ್ಲಿನ ಪಕ್ಷಿಗಳ ಪರಿಸ್ಥಿತಿ ಹೇಗಿದೆ? ಇದಕ್ಕೆ ಪರಿಹಾರವೇನು ? ಎಂಬುದರ ಸಂಕ್ಷಿಪ್ತ ವರದಿ ಇಲ್ಲಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸುಪ್ರಸಿದ್ದ ಕೊಕ್ಕರೆ ಬೆಳ್ಳೂರು ಪಕ್ಷಿಧಾಮ ರಾಜ್ಯದಲ್ಲೇ ಕೊಕ್ಕರೆಗಳಿಗೆ ಅಚ್ಚುಮೆಚ್ಚಿನ ತಾಣವಾಗಿದೆ. ವಂಶಾಭಿವೃದ್ಧಿಗಾಗಿ ಸಾವಿರಾರು ಕಿ. ಮೀ ದೂರದಿಂದ ಬಣ್ಣದ ಕೊಕ್ಕರೆ, ಫೆಲಿಕಾನ್, ಪಾರ್ಕ್ ಪೇಂಟರ್, ನೈಟ್ ಎರಾನ್, ವೈಟ್ ಹೇಬಿಸ್, ಪಾಂಡ್ ಎರಾನ್, ಕಾರ್ಮೋರೆಂಟ್ ಸೇರಿದಂತೆ ವಿವಿಧ ಬಗೆಯ ಕೊಕ್ಕರೆಗಳು ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಇನ್ನಿತರೆ ಕಡೆಯಿಂದ ಇಲ್ಲಿಗೆ ಬರುತ್ತವೆ. ಪಕ್ಕದಲ್ಲೇ ಇರುವ ಶಿಂಷಾ ನದಿ ಬತ್ತಿ ಹೋಗಿರುವುದರಿಂದ ನೀರು ಮತ್ತು ಆಹಾರವಿಲ್ಲದೇ ಕೊಕ್ಕರೆಗಳು ಪರದಾಡುತ್ತಿವೆ. ಅಲ್ಲದೇ ಆಹಾರವಿಲ್ಲದೆ ಮರದಿಂದ ನಿತ್ರಾಣಗೊಂಡು ಸಾಕಷ್ಟು ಪಕ್ಷಿಗಳು ಕುಸಿದು ಬೀಳುತ್ತಿವೆ.
ಜನವರಿಯಲ್ಲಿ ಬೆಳ್ಳೂರು ಪಕ್ಷಿಧಾಮಕ್ಕೆ ಬಂದು ವರ್ಷದಲ್ಲಿ 6 ತಿಂಗಳ ಕಾಲ ನೆಲೆಸಿ, ಗೂಡು ಕಟ್ಟಿಕೊಂಡು ವಾಸಿಸುವ ಈ ಪಕ್ಷಿಗಳನ್ನು ವೀಕ್ಷಿಸಲು ದೇಶ - ವಿದೇಶದ ಪಕ್ಷಿ ಪ್ರೇಮಿಗಳು ಬರ್ತಾರೆ. ಈಗಾಗಲೇ ಹಕ್ಕಿಜ್ವರದಿಂದ ಪಕ್ಷಿಗಳು ಕ್ಷೀಣಿಸುತ್ತಿವೆ. ಇದರ ಮಧ್ಯೆ ಭೀಕರ ಬರಗಾಲದಿಂದ ಎಲ್ಲ ಕೆರೆ-ಕಟ್ಟೆಗಳಲ್ಲಿ ನೀರಿಲ್ಲದೇ ಹಕ್ಕಿಗಳು ಸಾವು - ಬದುಕಿನ ನಡುವೆ ಹೋರಾಟ ನಡೆಸುತ್ತಿವೆ. ಕೊಕ್ಕರೆಗಳ ಹಿತದೃಷ್ಟಿಯಿಂದ ಅಭಿವೃದ್ಧಿ ಅಗತ್ಯ. ಹಕ್ಕಿಗಳ ಸಂತಾನೋತ್ಪತ್ತಿಗಾಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ, ನೀರಾವರಿ ಇಲಾಖೆ ಪಕ್ಷಿಗಳ ಸಂರಕ್ಷಣೆಗೆ ಮುಂದಾಗಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
''ಕೊಕ್ಕರೆ ಬೆಳ್ಳೂರಿನಲ್ಲಿ ಆಗ ತುಂಬಾ ಮರಗಳು ಇದ್ದವು. ಆಗ ಸುಮಾರು 2000 ದಿಂದ 2500 ಪಕ್ಷಿಗಳು ಬರುತ್ತಿದ್ದವು. ಫೆಲಿಕಾನ್ ಎಂಬಂತಹ ಪಕ್ಷಿಗಳು ಸುಮಾರು 700 ರಿಂದ 800 ರವರೆಗೆ ಬರುತ್ತಿದ್ದವು. ನಂತರ ಮರಗಳನ್ನು ಆಯ್ಕೆ ಮಾಡಿಕೊಂಡು ಗೂಡು ಮಾಡಿಕೊಂಡು ಹೋಗುತ್ತಿದ್ದವು. ಆದರೆ, ಈಗ ಮರಗಳು ಕಡಿಮೆಯಾಗಿವೆ. ಕೆಲವೆಡೆ ಮನೆಯ ಪಕ್ಕದಲ್ಲಿರುವ ಮರಗಳ ಕೊಂಬೆಗಳನ್ನು ಕಡಿಯುತ್ತಿದ್ದಾರೆ. ಈಗ ಕಳೆದ ಬಾರಿಗೆ ಹೋಲಿಸಿದರೆ ಹೋದ ಬಾರಿ ಫೆಲಿಕಾನ್ 200 ನೆಸ್ಟ್ ಮಾಡಿತ್ತು. ಈ ಬಾರಿ 80 ನೆಸ್ಟ್ ಮಾಡಿದೆ'' ಎಂದು ಕೊಕ್ಕರೆ ಸಂರಕ್ಷಕ ಬಿ. ಲಿಂಗೇಗೌಡ ಅವರು ತಿಳಿಸಿದ್ದಾರೆ.
ವರ್ಷದಲ್ಲಿ ಆರು ತಿಂಗಳ ಕಾಲ ಇಲ್ಲಿಗೆ ವಿಭಿನ್ನ ರೀತಿಯ ಪಕ್ಷಿಗಳು ಬರುತ್ತವೆ. ಈಗ ಬರದ ಪರಿಸ್ಥಿತಿಯಿಂದಾಗಿ ಪಕ್ಷಿಗಳು ನಿತ್ರಾಣಗೊಳ್ಳುತ್ತಿವೆ. ಈ ಕೂಡಲೇ ಪಕ್ಷಿಗಳನ್ನ ಉಳಿಸಿಕೊಳ್ಳಲು ಜಿಲ್ಲಾಡಳಿತ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಕಾರ್ಯಪ್ರವೃತ್ತವಾಗಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಕೊಕ್ಕರೆ ಬೆಳ್ಳೂರಿನಲ್ಲಿ ಪೆಲಿಕಾನ್ ಸಾವು: ಆತಂಕಗೊಂಡ ಪಕ್ಷಿ ಪ್ರಿಯರು