ಬೆಂಗಳೂರು: ಕಾರು ಚಾಲಕ ಯೂ ಟರ್ನ್ ಪಡೆಯುವ ಸಂದರ್ಭದಲ್ಲಿ ತನ್ನನ್ನು ಗಮನಿಸಲಿಲ್ಲವೆಂದು ಸಿಟ್ಟಿಗೆದ್ದ ದ್ವಿಚಕ್ರ ವಾಹನ ಸವಾರನೊಬ್ಬ ಕಾರನ್ನು ಅಡ್ಡಗಟ್ಟಿ, ಬೈಕ್ನಿಂದ ಇಳಿದು ಬಂದು ಕಾರಿಗೆ ಒದ್ದು ಉದ್ಧಟತನ ಪ್ರದರ್ಶಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜೂನ್ 7ರಂದು ಜಕ್ಕೂರು ಸಮೀಪ ಶ್ರೀರಾಮಪುರ ವಿಲೇಜ್ ಬಳಿ ಘಟನೆ ನಡೆದಿದ್ದು, ಕಾರಿನ ಡ್ಯಾಶ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಾರಿನಲ್ಲಿ ಸಾಗುತ್ತಿದ್ದ ಚಾಲಕ ಪ್ರವೀಣ್, ಯೂ ಟರ್ನ್ ಪಡೆಯುವಾಗ ಬೈಕ್ ಸವಾರನನ್ನು ಗಮನಿಸಿರಲಿಲ್ಲ. ಕೊಂಚ ದೂರ ಸಾಗಿದ ಬಳಿಕ ಕಾರನ್ನು ಓವರ್ ಟೇಕ್ ಮಾಡಿ ಅಡ್ಡಗಟ್ಟಿದ್ದ ಬೈಕ್ ಸವಾರ, ಇಳಿದು ಬಂದು ಏಕಾಏಕಿ ಕಾರಿನ ಬಾನೆಟ್‌ಗೆ ಒದ್ದು, ಕಾರು ಚಾಲಕನಿಗೆ ನಿಂದಿಸಿದ್ದಾನೆ. ಆರೋಪಿಯ ಕೃತ್ಯ ಕಾರಿನ ಡ್ಯಾಶ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಘಟನೆಯ ಕುರಿತು ಎಕ್ಸ್ ಆ್ಯಪ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಕಾರು ಚಾಲಕ ಪ್ರವೀಣ್, ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ರೋಡ್ ರೇಜ್ ಗಲಾಟೆ ಹೆಚ್ಚಳ: ಗಂಭೀರವಾಗಿ ಪರಿಗಣಿಸಿದ ಪೊಲೀಸರು, ನಾಲ್ವರ ವಿರುದ್ಧ ರೌಡಿಪಟ್ಟಿ ಓಪನ್
''KA 03 KN 7212 ವಾಹನದ ವ್ಯಕ್ತಿಯು ನನ್ನ ವಾಹನಕ್ಕೆ ಮುಂಭಾಗದಿಂದ ದಾಳಿ ಮಾಡಲು ಪ್ರಾರಂಭಿಸಿದ. ಯೂ ಟರ್ನ್ ತೆಗೆದುಕೊಳ್ಳುವಾಗ ನಾನು ಅವನನ್ನು ಗಮನಿಸಲು ಸಾಧ್ಯವಾಗದ ಕಾರಣ ಹೀಗೆ ವರ್ತಿಸಿದ್ದಾನೆ. ಇದರಿಂದ ನಮಗೆ ಶಾಕ್ ಆಯಿತು'' ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸರು, ಘಟನಾ ಸ್ಥಳ ಸೇರಿದಂತೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳುವಂತೆ ತಿಳಿಸಿದ್ದಾರೆ. ಅಲ್ಲದೆ, ಇಂತಹ ಸಂಕಷ್ಟ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ 'ನಮ್ಮ 112'ಗೆ ಕರೆ ಮಾಡುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಹಾರ್ನ್ ಮಾಡಿ ದಾರಿ ಕೇಳಿದ್ದಕ್ಕೆ ಕಾರು ತಡೆದು ಪುಂಡಾಟ; ಇಬ್ಬರ ಬಂಧನ