ಹಾವೇರಿ : ಜಿಲ್ಲೆಯ ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಭರತ್ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಬಿಜೆಪಿ ಹೈಕಮಾಂಡ್ ಭರತ್ ಬೊಮ್ಮಾಯಿ ಹೆಸರು ಅಂತಿಮಗೊಳಿಸಿದೆ. ಆ ಮೂಲಕ ಬೊಮ್ಮಾಯಿ ಕುಟುಂಬದ ಮೂರನೇ ತಲೆಮಾರು ವಿದ್ಯುಕ್ತವಾಗಿ ರಾಜಕೀಯಕ್ಕೆ ಕಾಲಿಟ್ಟಂತಾಗಿದೆ.
ಅಜ್ಜ ಎಸ್. ಆರ್ ಬೊಮ್ಮಾಯಿ ರಾಜಕೀಯ ಪ್ರವೇಶಿಸುವ ಜೊತೆಗೆ ಸಿಎಂ ಹುದ್ದೆಗೆ ಏರಿದ್ದಲ್ಲದೆ ಕೇಂದ್ರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದರು. ಎಸ್. ಆರ್ ಬೊಮ್ಮಾಯಿ ಪುತ್ರ ಬಸವರಾಜ ಬೊಮ್ಮಾಯಿ ಜೆಡಿಯು ರಾಜ್ಯಾಧ್ಯಕ್ಷರಾಗಿ ನಂತರ ವಿಧಾನಪರಿಷತ್ ಸದಸ್ಯರಾಗಿ ಬಳಿಕ ಬಿಜೆಪಿ ಸೇರ್ಪಡೆಯಾಗಿ ನಾಲ್ಕು ಬಾರಿ ಶಾಸಕರಾಗಿದ್ದವರು.
ಒಂದು ಬಾರಿ ಜಲಸಂಪನ್ಮೂಲ ಸಚಿವರಾಗಿ, ಗೃಹಸಚಿವರಾಗಿ ನಂತರ ರಾಜ್ಯದ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಕಳೆದ ವಿಧಾನಸಭೆಯಲ್ಲಿ ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದರು. ಆದರೆ ಹೈಕಮಾಂಡ್ ತೀರ್ಮಾನದ ಹಿನ್ನೆಲೆ 2024ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾದರು.
ಸಂಸದರಾಗಿ ಆಯ್ಕೆಯಾಗುತ್ತಿದ್ದಂತೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದಾದ ನಂತರ ಶಿಗ್ಗಾಂವ್ ವಿಧಾನಸಭಾ ಕ್ಷೇತ್ರಕ್ಕೆ ಮುಂದಿನ ಉತ್ತರಾಧಿಕಾರಿ ಯಾರು? ಎಂಬ ಪ್ರಶ್ನೆ ಸಹಜವಾಗಿತ್ತು. ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರು ಕಾಂಗ್ರೆಸ್ ಮುಖಂಡರ ನಡುವೆ ಮತ್ತಷ್ಟು ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದವು. ಬಿಜೆಪಿ ಸಾಕಷ್ಟು ಕಾರ್ಯಕರ್ತರಲ್ಲಿ ಬಸವರಾಜ ಬೊಮ್ಮಾಯಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಅವರ ಪುತ್ರ ಭರತ್ ತರಬೇಕು ಎನ್ನುವುದಾಗಿತ್ತು. ಆದರೆ ಬಸವರಾಜ ಬೊಮ್ಮಾಯಿ ಇದನ್ನು ನಯವಾಗಿ ತಿರಸ್ಕರಿಸಿದ್ದರು.
ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದ ನಂತರವೂ ಸಹ ಬೊಮ್ಮಾಯಿ ತಮ್ಮ ಮಗನ ಸ್ಪರ್ಧೆಗೆ ಆಸಕ್ತಿ ತೋರಿಸಿರಲಿಲ್ಲ. ಆದರೆ ಇದೀಗ ಬಿಜೆಪಿ ಹೈಕಮಾಂಡ್ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಹೆಸರು ಅಂತಿಮಗೊಳಿಸಿದೆ. ಆ ಮೂಲಕ ಬೊಮ್ಮಾಯಿ ಮನೆತನದ ಮೂರನೇ ತಲೆಮಾರು ವಿದ್ಯುಕ್ತವಾಗಿ ರಾಜಕೀಯಕ್ಕೆ ಕಾಲಿಟ್ಟಂತಾಗಿದೆ. ಭರತ್ ಬೊಮ್ಮಾಯಿಗೆ ಶಿಗ್ಗಾಂವ್ ಉಪಚುನಾವಣೆ ಟಿಕೆಟ್ ಸಿಗಲು ಕಾರಣಗಳೇನು? ಎನ್ನುವ ಪ್ರಶ್ನೆಗೆ ಸಿಕ್ಕ ಉತ್ತರಗಳು ಈ ಕೆಳಗಿನಂತಿವೆ.
1) ಬಸವರಾಜ ಬೊಮ್ಮಾಯಿ ಸತತವಾಗಿ 4 ಬಾರಿ ಗೆದ್ದ ಕ್ಷೇತ್ರ ಶಿಗ್ಗಾಂವಿ
2) ಬಸವರಾಜ ಬೊಮ್ಮಾಯಿ ಸಂಪೂರ್ಣ ಪ್ರಾಬಲ್ಯ ಹೊಂದಿರುವ ಕ್ಷೇತ್ರ
3) ಲಿಂಗಾಯತ ಮತದಾರರೇ ಹೆಚ್ಚಾಗಿರುವ ಕ್ಷೇತ್ರ
4) ಬಿ. ಎಸ್ ಯಡಿಯೂರಪ್ಪ ಹಾಗೂ ಬಿ. ವೈ ವಿಜಯೇಂದ್ರ ಅವರೂ ಭರತ್ ಬೊಮ್ಮಾಯಿ ಸ್ಪರ್ಧೆಗೆ ಸಂಪೂರ್ಣ ಸಾಥ್ ನೀಡುವ ಭರವಸೆ ನೀಡಿರುವುದು.
5) ಮಾಜಿ ಸಚಿವ ಮುರುಗೇಶ್ ನಿರಾಣಿ ಶಿಗ್ಗಾಂವಿ ಉಪಚುನಾವಣೆ ಸ್ಪರ್ಧೆಗೆ ಆಸಕ್ತಿ ತೋರದೆ ಹಿಂದೆ ಸರಿದಿದ್ದರಿಂದ ಭರತ್ ಟಿಕೆಟ್ ಹಾದಿ ಸುಲಭ ಆಯಿತು.
6) ಶಿಗ್ಗಾಂವಿ ಕ್ಷೇತ್ರದಲ್ಲಿ ಪ್ರಬಲ ಪರ್ಯಾಯ ಬಿಜೆಪಿ ಟಿಕೆಟ್ ಆಕಾಂಕ್ಷಿಗಳೇ ಇಲ್ಲದಿರುವುದು.
7) ಭರತ್ ಬೊಮ್ಮಾಯಿ 2023 ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತಂದೆ ಪರವಾಗಿ ಶಿಗ್ಗಾಂವಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದು.
8) ತಂದೆಯ ರಾಜಕೀಯ ಪಟ್ಟು ತಂತ್ರಗಾರಿಕೆಗಳನ್ನು ಹತ್ತಿರದಿಂದ ನೋಡಿ ರಾಜಕೀಯಕ್ಕಿಳಿಯುವ ನಿರ್ಧಾರ ತೆಗೆದುಕೊಂಡ ಭರತ್ ಬೊಮ್ಮಾಯಿ.
9) ಬಿಜೆಪಿ ವರಿಷ್ಠರ ಜೊತೆ ಬಸವರಾಜ ಬೊಮ್ಮಾಯಿ ಬಾಂಧವ್ಯ ಹೊಂದಿರುವುದು ಭರತ್ ಸ್ಪರ್ಧೆಗೆ ಅನುಕೂಲ ಆಯಿತು.
10) ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಬಂದಾಗ ಭರತ್ ಬೊಮ್ಮಾಯಿಗೆ ಟಿಕೆಟ್ ನೀಡುವಂತೆ ಸ್ಥಳೀಯರಿಂದ ಆಗ್ರಹ ಕೇಳಿ ಬಂದಿತ್ತು.
ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿದ್ದೇ ಅಂತಿಮ ಮಾತು ಎಂದು ಅವರ ಅಭಿಮಾನಿಗಳು ಹೇಳುತ್ತಿರುವುದು ಸಾಬೀತಾಗಿದೆ. ಬಸವರಾಜ ಬೊಮ್ಮಾಯಿ ಮೊದಲ ಆದ್ಯತೆ ಯಾರಿಗೆ ನೀಡುತ್ತಾರೆ ಅವರಿಗೆ ನಮ್ಮ ಬೆಂಬಲ. ಅವರ ಮಗ ಸ್ಪರ್ಧಿಸದಿದ್ದರೆ ನಮಗೆ ಟಿಕೆಟ್ ನೀಡಿ ಎಂದು ಇಲ್ಲಿಯ ಮುಖಂಡರು ವರಿಷ್ಠರಲ್ಲಿ ಮನವಿ ಮಾಡಿದ್ದರು. ಇದೀಗ ಬೊಮ್ಮಾಯಿ ತಮ್ಮ ಮಗ ಭರತ್ಗೆ ಟಿಕೆಟ್ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣ ಮತ್ತಷ್ಟು ರಂಗೇರಿದ್ದು, ಕಾಂಗ್ರೆಸ್ ಪಕ್ಷ ಯಾರನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡುತ್ತೆ ಎಂಬ ಕುತೂಹಲ ಮೂಡಿದೆ.
ಭರತ್ ಬೊಮ್ಮಾಯಿ ಕಿರುಪರಿಚಯ : ಭರತ್ ಬೊಮ್ಮಾಯಿ ಮಾರ್ಚ್ 31, 1989 ರಲ್ಲಿ ಜನಿಸಿದರು. ಸಿಂಗಪೂರ್‌ನಲ್ಲಿ ಎಂಬಿಎ ಮಾಡಿರುವ ಭರತ್ ಬೊಮ್ಮಾಯಿ ಅಮೆರಿಕದಲ್ಲಿ ಬ್ಯಾಚಲರ್ಸ್ ಆಫ್ ಇಂಜಿನಿಯರಿಂಗ್ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ಮತ್ತು ಚೆನ್ನಮ್ಮ ದಂಪತಿಯ ಜೇಷ್ಠ ಸುಪುತ್ರ ಭರತ್ ಬೊಮ್ಮಾಯಿ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಉದ್ಯಮರಂಗದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಅಲ್ಲದೆ ಉದ್ಯಮರಂಗದ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ : ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್; ಬೊಮ್ಮಾಯಿ ಪುತ್ರನಿಗೆ ಶಿಗ್ಗಾಂವಿ ಟಿಕೆಟ್, ಸಂಡೂರನಲ್ಲಿ ಯಾರಿಗೆ ಮಣೆ?