ಬೆಂಗಳೂರು: ಸುಮಾರು 20 ವರ್ಷಗಳಿಗೂ ಹೆಚ್ಚುಕಾಲ ವ್ಯಕ್ತಿಯೊಬ್ಬರ ಜಮೀನನ್ನು ಸ್ವಾಧೀನಕ್ಕೆ ಪಡೆದು ಪರಿಹಾರ ನೀಡದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಾಧಿಕಾರವನ್ನು ಸುಗ್ರೀವಾಜ್ಞೆ ಮೂಲಕ ಮುಚ್ಚುವುದೇ ಲೇಸು ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿದೆ. ನಗರದ ಮುದ್ದಯ್ಯನಪಾಳ್ಯದ ನಿವಾಸಿ 60 ವರ್ಷದ ಮುದ್ದೇಗೌಡ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ವಿಚಾರಣೆ ವೇಳೆ ಹಾಜರಿದ್ದ ಬಿಡಿಎ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ಅರ್ಜಿದಾರರ ಜಮೀನನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ಬಿಡಿಎ ಪರ ವಕೀಲರು ತಿಳಿಸಿದ್ದಾರೆ. ಆದರೂ 21 ವರ್ಷ ಅಂದರೆ, ಸರಿ ಸುಮಾರು ಕಾಲು ಶತಮಾನದಷ್ಟು ಸಮಯವನ್ನು ಪರಿಹಾರಕ್ಕಾಗಿ ವ್ಯಕ್ತಿಯೊಬ್ಬರನ್ನು ಬಿಡಿಎ ಅಲೆಯುವಂತೆ ಮಾಡಲಾಗಿದೆ. ಆದರೂ, ಏಕೆ ಪರಿಹಾರ ನೀಡಿಲ್ಲ? ಎಂದು ಪ್ರಶ್ನಿಸಿತು. ಅಷ್ಟೇ ಅಲ್ಲದೆ, ಬಿಡಿಎ ಕಚೇರಿಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಯಲು ಮಾರು ವೇಷದಲ್ಲಿ ಒಮ್ಮೆ ಹೋಗಿ ಪರಿಶೀಲಿಸಿ. ಆಗ ಕಚೇರಿಯಲ್ಲಿ ಏನಾಗುತ್ತಿದೆ ಎಂಬುದು ತಿಳಿಯಲಿದೆ ಎಂದು ಬಿಡಿಎ ಆಯುಕ್ತರಿಗೆ ನ್ಯಾಯಪೀಠ ಸಲಹೆ ನೀಡಿತು.
ಬೆಳಗ್ಗೆ 11 ಗಂಟೆ ಅಥವಾ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಬಿಡಿಎ ಆಯುಕ್ತರ ಕಚೇರಿಗೆ ಹೋದರೆ ನಿಮ್ಮ ಕೆಲಸ ಮಾಡಿಕೊಡುವುದಾಗಿ ಹೇಳುವ ನೂರಾರು ಏಜೆಂಟ್ಗಳು ಸಿಗುತ್ತಾರೆ. ಅಂತಹ ಜನರನ್ನು ಮೊದಲು ಅಲ್ಲಿಂದ ಜಾಗ ಖಾಲಿ ಮಾಡಿಸಬೇಕು. ಜೊತೆಗೆ, ಬಿಡಿಎನಲ್ಲಿ ನಡೆಯುತ್ತಿರವ ಅಕ್ರಮಗಳ ಸಂಬಂಧ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಹಲವು ದೂರು ಪತ್ರಗಳು ಬರುತ್ತಿವೆ. ಹೀಗಾಗಿ ಆಯುಕ್ತರಾಗಿರುವ ನೀವು ಇಚ್ಛೆಯಿಂದ ಒಳ್ಳೆಯ ಕೆಲಸ ಮಾಡಿ, ಜನ ನಿಮಗೆ ಒಳ್ಳೆಯದನ್ನು ಬಯಸುತ್ತಾರೆ ಎಂದು ಪೀಠ ಇದೇ ವೇಳೆ ತಿಳಿಸಿತು.
ಅಲ್ಲದೇ, ಅರ್ಜಿದಾರರಿಗೆ ಯಾವಾಗ ಪರಿಹಾರ ನೀಡುತ್ತೀರಿ ಎಂಬುದರ ಕುರಿತಂತೆ ಪ್ರಮಾಣ ಪತ್ರ ಸಲ್ಲಿಸುವಂತೆ ನ್ಯಾಯಪೀಠ ಸೂಚನೆ ನೀಡಿ, ವಿಚಾರಣೆಯನ್ನು ಮುಂದೂಡಿದೆ.
ಪ್ರಕರಣದ ಹಿನ್ನೆಲೆ ಏನು? ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ ನಿರ್ಮಾಣಕ್ಕಾಗಿ ಬಿಡಿಎ ಯಾವುದೇ ರೀತಿಯ ನಿಯಮಗಳನ್ನು ಪಾಲಿಸದೇ ಅಕ್ರಮವಾಗಿ ಅರ್ಜಿದಾರರ ಜಮೀನನ್ನು 2003ರಲ್ಲಿ ಸ್ವಾಧೀನ ಪಡಿಸಿಕೊಂಡಿತ್ತು. ಈ ಸಂಬಂಧ ಪರಿಹಾರ ನೀಡದ ಪರಿಣಾಮ ನ್ಯಾಯಾಂಗ ಹೋರಾಟಕ್ಕೆ ಕಾರಣವಾಗಿತ್ತು. ಅಲ್ಲದೇ, ತಮ್ಮ ಜಮೀನನ್ನು ಸ್ವಾಧೀನ ಪಡಿಸಿಕೊಂಡಿದ್ದ ಕ್ರಮವನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಸಿವಿಲ್ ನ್ಯಾಯಾಲಯ ವಜಾಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಕರಣ ಸಂಬಂಧ ಹಲವು ಬಾರಿ ವಿಚಾರಣೆ ನಡೆದಿದೆ. ಈ ಸಂದರ್ಭದಲ್ಲಿ ಬಿಡಿಎ ಪರ ವಕೀಲರು, ಅರ್ಜಿದಾರರು ಹೇಳಿದಂತೆ 18, 20 ಗುಂಟೆ ಜಮೀನು ಸ್ವಾಧೀನ ಪಡಿಸಿಕೊಂಡಿಲ್ಲ. ಬದಲಾಗಿ ಕೇವಲ 15 ಗುಂಟೆ ಮಾತ್ರ ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದ್ದರು. ಅಲ್ಲದೆ, ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ನಿವೇಶನ ಲಭ್ಯವಿಲ್ಲದ ಪರಿಣಾಮ ಪರಿಹಾರವಾಗಿ ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ನೀಡುವುದಾಗಿ ಹೇಳಲಾಗಿದೆ ಎಂದು ತಿಳಿಸಿದ್ದರು. ಇದನ್ನು ಒಪ್ಪದ ಅರ್ಜಿದಾರರು, ವಿಶ್ವೇಶ್ವರಯ್ಯ ಬಡಾವಣೆಯಲ್ಲಿಯೇ ನಿವೇಶನ ಬೇಕು. ಇಲ್ಲವಾದಲ್ಲಿ ಬಡ್ಡಿಯೊಂದಿಗೆ ಪರಿಹಾರ ಪಾವತಿಸಬೇಕು ಎಂದು ಕೋರಿದ್ದರು.
ಇದನ್ನೂ ಓದಿ: ಸರ್ಕಾರ ನಿವೃತ್ತ ಶಿಕ್ಷಕರನ್ನು ಸಹಾನುಭೂತಿಯಿಂದ ನಡೆಸಿಕೊಳ್ಳಬೇಕು: ಹೈಕೋರ್ಟ್