ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಗಾಗಿ ರಾಜ್ಯ ಸರ್ಕಾರದ ಕೆ-ರೈಡ್ ಸಂಸ್ಥೆಗೆ ಜರ್ಮನಿಯ ಲಕ್ಸಂಬರ್ಗ್ ನಗರದ ಕೆಎಫ್‌ಡಬ್ಲ್ಯೂ ಡೆವಲಪ್ಮೆಂಟ್ ಬ್ಯಾಂಕ್ 4,561 ಕೋಟಿ ರೂ. (500 ಮಿಲಿಯನ್ ಯೂರೋ) ಸಾಲ ನೀಡುತ್ತಿದೆ. ವಿಧಾನಸೌಧದಲ್ಲಿ ಇಂದು ಈ ಸಂಬಂಧ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಸಮ್ಮುಖದಲ್ಲಿ ಅಧಿಕೃತವಾಗಿ ಒಡಂಬಡಿಕೆಗೆ ಸಹಿ ಹಾಕಲಾಯಿತು. ಕೆ-ರೈಡ್ ಪರವಾಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿಯೂ ಆದ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಎನ್.ಮಂಜುಳಾ ಹಾಗೂ ಕೆಎಫ್ ಡಬ್ಲ್ಯೂ ಪರವಾಗಿ ಅದರ ಭಾರತದ ನಿರ್ದೇಶಕ ವೂಲ್ಫ್ ಮೌತ್ ಅಂಕಿತ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, ''ಕೇಂದ್ರ ಸರ್ಕಾರದ ಆರ್ಥಿಕ ಇಲಾಖೆ ಮತ್ತು ಕೆಎಫ್‌ಡಬ್ಲ್ಯೂ ನಡುವೆ ಈ ಸಂಬಂಧ 2023ರ ಡಿ.15ರಂದು ಪ್ರಾಥಮಿಕ ಒಪ್ಪಂದವಾಗಿತ್ತು. ಈಗ ಕೆಎಫ್‌ಡಬ್ಲ್ಯೂ ಮತ್ತು ಯೋಜನೆಯ ಅನುಷ್ಠಾನದ ಹೊಣೆ ಹೊತ್ತಿರುವ ಕೆ-ರೈಡ್ ನಡುವೆ ಪೂರಕ ಒಪ್ಪಂದ ಮಾಡಿಕೊಳ್ಳಲಾಗಿದೆ. ಯೋಜನೆಯ ಎಲ್ಲ ನಾಲ್ಕೂ ಕಾರಿಡಾರ್ ಕಾಮಗಾರಿಗಳನ್ನು 2027ರ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಲು ಇದು ಮಹತ್ವದ ಒಪ್ಪಂದ. ಶೇ.4ರ ಬಡ್ಡಿ ದರದಲ್ಲಿ 20 ವರ್ಷಗಳ ಅವಧಿಗೆ ಈ ಸಾಲವನ್ನು ಜರ್ಮನಿಯ ಬ್ಯಾಂಕ್ ನೀಡುತ್ತಿದೆ'' ಎಂದು ಮಾಹಿತಿ ನೀಡಿದರು.
''ಕೆಎಫ್‌ಡಬ್ಲ್ಯೂ ನೀಡುತ್ತಿರುವ ಹಣವನ್ನು ಕೆಂಗೇರಿ-ವೈಟ್ಫೀಲ್ಡ್ ನಡುವಿನ ಕಾರಿಡಾರ್-3ರ ಅಡಿ ಬರುವ ಸ್ಟೇಷನ್ ವರ್ಕ್, ವಯಾಡಕ್ಟ್, ಹೀಳಲಿಗೆ-ರಾಜಾನುಕುಂಟೆ ನಡುವಿನ ಕಾರಿಡಾರ್-4ರ ವ್ಯಾಪ್ತಿಯಲ್ಲಿ ಬರುವ ದೇವನಹಳ್ಳಿಯಲ್ಲಿನ ಡಿಪೋ-1, ಸಿಗ್ನಲ್ ಮತ್ತು ಟೆಲಿಕಾಂ, ಪ್ಲಾಟ್ ಫಾರಂ ಸ್ಕ್ರೀನ್ ಡೋರ್, ಸ್ವಯಂಚಾಲಿತ ಪ್ರಯಾಣ ದರ ವಸೂಲಿ ವ್ಯವಸ್ಥೆ, ಸೌರಫಲಕ, ಭದ್ರತಾ ಸಾಧನಗಳು ಮತ್ತು ಎಂಎಐ (ಮ್ಯಾನ್ ಮಶೀನ್ ಇಂಟರ್ಫೇಸ್) ಕಾಮಗಾರಿಗಳಿಗೆ ಬಳಸಿಕೊಳ್ಳಲಾಗುವುದು'' ಎಂದು ಸಚಿವರು ವಿವರಿಸಿದರು.
''ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಬೆಂಗಳೂರಿಗೆ ಬ್ರ್ಯಾಂಡ್ ಮೌಲ್ಯವಿದೆ. ಜೊತೆಗೆ, ನಗರಗಳಲ್ಲಿ ಸುಗಮ ಸಂಚಾರ ಜಾಲವನ್ನು ಅಭಿವೃದ್ಧಿಪಡಿಸುವುದು ಸರ್ಕಾರದ ಗುರಿ. ಇದಕ್ಕೆ ತಕ್ಕಂತೆ ಸಬರ್ಬನ್ ರೈಲು ಯೋಜನೆಯನ್ನು ಕಾಲಮಿತಿಯಲ್ಲಿ ಪೂರೈಸಲು ಹಲವು ಉಪಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆಯು ರಾಜ್ಯದ ರಾಜಧಾನಿಯ ಚಹರೆಯನ್ನೇ ಆಮೂಲಾಗ್ರವಾಗಿ ಬದಲಿಸಲಿದೆ'' ಎಂದು ಪಾಟೀಲ್ ಹೇಳಿದರು.
''ಬೆಂಗಳೂರಿನ ಜನರ ಜೀವನವನ್ನು ಸುಗಮಗೊಳಿಸುವುದು ಸಬರ್ಬನ್ ರೈಲು ಯೋಜನೆಯ ಉದ್ದೇಶವಾಗಿದೆ. ಒಟ್ಟು 15,767 ಕೋಟಿ ರೂ. ವೆಚ್ಚದ ಈ ಯೋಜನೆಯು 58 ನಿಲ್ದಾಣಗಳನ್ನು ಹೊಂದಿರಲಿದೆ. ಒಟ್ಟು 4 ಕಾರಿಡಾರ್ಗಳಲ್ಲಿ 148 ಕಿ.ಮೀ. ಉದ್ದ ಇರಲಿದೆ. ಈ ಯೋಜನೆಗೆ ಕೇಂದ್ರ ರೈಲ್ವೆ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳು ತಲಾ ಶೇ.20ರಷ್ಟು ಹೂಡಿಕೆ ಮಾಡಲಿವೆ. ಬಾಹ್ಯ ಸಾಲದ ರೂಪದಲ್ಲಿ ಶೇ.60ರಷ್ಟು ಸಂಪನ್ಮೂಲ ಕ್ರೋಢೀಕರಣ ಮಾಡಲಾಗುವುದು'' ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನಲ್ಲಿರುವ ಜರ್ಮನಿ ಕಾನ್ಸುಲ್ ಜನರಲ್ ಅಕಿಂ ಬರ್ಕಾರ್ಟ್, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕೆಎಫ್‌ಡಬ್ಲ್ಯೂ ಹಿರಿಯ ಪರಿಣತೆ ಸ್ವಾತಿ ಖನ್ನಾ ಹಾಗೂ ಕಾಂಚಿ ಅರೋರ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಒಂದು ಜಿಲ್ಲೆ ಒಂದು ಉತ್ಪನ್ನ ಉತ್ತೇಜಿಸಲು 'ಯುನಿಟಿ ಮಾಲ್' ನಿರ್ಮಾಣಕ್ಕೆ ರಾಜ್ಯ ಸಂಪುಟ ಅಸ್ತು