ಬೆಂಗಳೂರು: ವಿಧಾನಸಭಾ ಸಚಿವಾಲಯ ವ್ಯಾಪ್ತಿಗೆ ಬರುವ ಶಾಸಕರ ಭವನಕ್ಕೆ ಹೊಸ ಕಳೆ ಬಂದಿದೆ.
ಶಾಸಕರ ಭವನದಲ್ಲಿ ಈ ಹಿಂದೆ ಹೊರಗುತ್ತಿಗೆ ಆಧಾರದ ಮೇರೆಗೆ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿತ್ತು. ಆದರೆ, ಪ್ರಸ್ತುತ ಹೊರಗುತ್ತಿಗೆ ಆಧಾರದ ವ್ಯವಸ್ಥೆ ಜಾರಿಯಲ್ಲಿ ಇಲ್ಲದಿರುವ ಪ್ರಯುಕ್ತ ವಿಧಾನಸಭೆ ಸಚಿವಾಲಯದ ಅಲ್ಪ ಪ್ರಮಾಣದ ಸಿಬ್ಬಂದಿಯನ್ನು ಉಪಯೋಗಿಸಿಕೊಂಡು ಸ್ವಚ್ಛತಾ ಕಾರ್ಯಗಳನ್ನು ನೆರವೇರಿಸಲಾಗುತ್ತಿತ್ತು. ಆದರೂ ಸಹ ಶಾಸಕರ ಭವನದಲ್ಲಿ ಒಳಾಂಗಣ ಮತ್ತು ಹೊರಾಂಗಣ ಸ್ವಚ್ಛತೆಯ ಗುಣಮಟ್ಟವನ್ನು ಕಾಪಾಡಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಮತ್ತು ಉಪ ಸಭಾಧ್ಯಕ್ಷರು ಶಾಸಕರ ಭವನಕ್ಕೆ ಆಗಿಂದಾಗ್ಗೆ ಭೇಟಿ ನೀಡಿ, ಪರಿಸರವು ಮಲಿನಗೊಂಡಿರುವುದನ್ನು ಗಮನಿಸಿದ್ದರು.
ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಖಾಸಗಿ ಸಂಸ್ಥೆಗೆ ಡೀಪ್ ಕ್ಲೀನಿಂಗ್ ಕಾರ್ಯವನ್ನು ವಹಿಸಿದ್ದು, ಸ್ವಚ್ಛತಾ ಕಾಮಗಾರಿ ನಡೆಯುತ್ತಿದೆ. ವಿಧಾನಸಭೆ ಸಚಿವಾಲಯ ವ್ಯಾಪ್ತಿಗೆ ಬರುವ ಶಾಸಕರ ಭವನದ ಕಟ್ಟಡಗಳಲ್ಲಿ ದೈನಂದಿನ ಸ್ವಚ್ಛತೆಯನ್ನು ಕಾಪಾಡಲು, ಕಸ ವಿಲೇವಾರಿ ಮಾಡಲು, ಶಾಸಕರುಗಳ ಕೊಠಡಿಗಳಲ್ಲಿ ಶುಚಿತ್ವವನ್ನು ಕಾಪಾಡುವ ಸಂಬಂಧ ಹೊರಗುತ್ತಿಗೆ ಆಧಾರದ ಮೇರೆಗೆ ಕಾರ್ಯನಿರ್ವಹಿಸಲು ಪ್ರತಿಷ್ಠಿತ ಆರ್ಪಿಎಫ್ (Request for Proposal) ಕರೆಯಲು ಸಹ ತೀರ್ಮಾನಿಸಲಾಗಿದೆ.
ಶಾಸಕರ ಭವನ ಕಟ್ಟಡಗಳ ಹೊರಾಂಗಣ ಸ್ವಚ್ಛತೆ ಸಂಬಂಧದಲ್ಲಿ ಸುಣ್ಣಬಣ್ಣ ಬಳಿಯುವುದು, ಕಟ್ಟಡಗಳ ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನು ಮಾಡಲು ಹಾಗೂ ಕಟ್ಟಡವನ್ನು ನಿರ್ವಹಣೆ ಮಾಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಈಗಾಗಲೇ ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಲಾಗಿರುತ್ತದೆ ಎಂದು ವಿಧಾನ ಸಭೆಯ ಸಭಾಧ್ಯಕ್ಷರ ಕಚೇರಿ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಅಷ್ಟಮಂಗಲದಲ್ಲಿ ಕಾಣಿಸಿಕೊಂಡ ನಾಗಬನ: 20 ಸೆಂಟ್ಸ್ ಜಾಗ ಬಿಟ್ಟು ಕೊಟ್ಟ ಯು.ಟಿ.ಖಾದರ್ - Nagara Panchami Special