ಬೆಂಗಳೂರು: ಹಾಲಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡದಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಿತು. ಅದರ ಭಾಗವಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿಯೂ ಹಸುಗಳನ್ನು ಕರೆತಂದು ಪ್ರತಿಭಟನೆ ನಡೆಸಲಾಯಿತು. ಈ ವೇಳೆ, ಬಿಜೆಪಿ ಕಾರ್ಯಕರ್ತರು ವಿಧಾನಸೌಧ ಮುತ್ತಿಗೆಗೆ ಯತ್ನ ನಡೆಸಿದರು. ಆದರೆ ಮಾನವ ಹಕ್ಕುಗಳ ರಕ್ಷಣೆ ಜನ ಸೇವಾ ಸಮಿತಿ ಸದಸ್ಯರು ಪ್ರತಿಭಟನೆಗೆ ಹಸುಗಳ ಬಳಕೆ ಆಕ್ಷೇಪಿಸಿದ್ದರಿಂದ ಸ್ಥಳದಲ್ಲಿ ಹೈಡ್ರಾಮಾವೇ ನಡೆಯಿತು.

ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡುವಂತೆ ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿ ಮಹಾನಗರ ಘಟಕದಿಂದ ಹಸುಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದರು. ಹಸುಗಳ ಕೊರಳಿಗೆ ಧಿಕ್ಕಾರ ಅಂತ ಬರೆದಿರುವ ಪ್ಲೆ ಕಾರ್ಡ್‌ಗಳನ್ನು ಹಾಕಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
716 ಕೋಟಿ ರೂ. ಹಾಲಿನ ಬಾಕಿ ಪ್ರೋತ್ಸಾಹ ಹಣ ಬಿಡುಗಡೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್ನಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬಿಜೆಪಿ ಕಾರ್ಯಕರ್ತರು ಹೊರಟರು. ಈ ವೇಳೆ, ಪ್ರತಿಭಟನಾಕಾರರಿಗೆ ಪೊಲೀಸರು ತಡೆ ಒಡ್ಡಿದರು. ಹಸುಗಳ ಸಮೇತ ಮುತ್ತಿಗೆ ಯತ್ನಕ್ಕೆ ಬ್ರೇಕ್ ಹಾಕಿದರು. ಫ್ರೀಡಂ ಪಾರ್ಕ್ನಲ್ಲಿಯೇ ಪ್ರತಿಭಟನೆ ನಡೆಸಬೇಕು ಎಂದು ಸೂಚಿಸಿದರು. ಅದರಂತೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಫ್ರೀಡಂ ಪಾರ್ಕ್ನಲ್ಲಿ ಹೈಡ್ರಾಮಾ ನಡೆಯಿತು.

ಬಿಜೆಪಿ ಪ್ರತಿಭಟನೆಯಲ್ಲಿ ಹಸುಗಳನ್ನು ಕರೆತಂದಿದ್ದಕ್ಕೆ ಮಾನವ ಹಕ್ಕುಗಳ ರಕ್ಷಣೆ ಜನ ಸೇವಾ ಸಮಿತಿ ಕಡೆಯಿಂದ ಮೂವರು ವ್ಯಕ್ತಿಗಳು ಆಕ್ಷೇಪಿಸಿದರು. ಹಸುಗಳನ್ನು ಕರೆತಂದಿದ್ದ ಪ್ರತಿಭಟನಾನಿರತ ರೈತರ ಬಳಿ ತೆರಳಿ ಪ್ರತಿಭಟಿಸಿದರು. ಪ್ರತಿಭಟನೆಗೆ ಹಸುಗಳನ್ನು ತಂದಿದ್ದು ಸರಿಯಲ್ಲ. ಹಸುಗಳ ಬಳಕೆ ನಿಷಿದ್ಧ ಎಂದರು. ಈ ವೇಳೆ, ಸಮಿತಿ ಸದಸ್ಯರ ವರ್ತನೆಯಿಂದ ರೊಚ್ಚಿಗೆದ್ದ ಪ್ರತಿಭಟನಾಕಾರು ಸಮಿತಿ ಸದಸ್ಯರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಸಮಿತಿ ಸದಸ್ಯರ ನಡೆಗೆ ಸಿಟ್ಟಾಗಿ ಸ್ಥಳದಿಂದ ಓಡಿಸಲು ಮುಂದಾದರು. ಈ ವೇಳೆ ನೂಕಾಟ, ತಳ್ಳಾಟ ನಡೆದು ಮಾತಿನ ಚಕಮಕಿ ನಡೆಯಿತು. ನಂತರ ಸಮಿತಿ ಸದಸ್ಯರ ವಿರುದ್ಧ ಧಿಕ್ಕಾರ ಕೂಗಿ ಹೊರಗೆ ಕಳುಹಿಸಿದರು. ಬಳಿಕ ಹಸುಗಳೊಂದಿಗೆ ವಿಧಾನಸೌಧ ಮುತ್ತಿಗೆ ಯತ್ನಕ್ಕೆ ಬಿಜೆಪಿ ಕಾರ್ಯಕರ್ತರು ಮುಂದಾದರು. ಈ ವೇಳೆ, ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತರು ಮತ್ತು ರೈತರನ್ನು ಪೊಲೀಸರು ವಶಕ್ಕೆ ಪಡೆದು ಸ್ಥಳದಿಂದ ಬೇರೆಡೆಗೆ ಕರೆದೊಯ್ದರು.
ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಚಾರ್ಟರ್ ವಿಮಾನದಲ್ಲಿ ದೆಹಲಿಗೆ ಜಮೀರ್ ಅಹ್ಮದ್ ಅವರ ಜೊತೆ ತೆರಳುವ ಮುಖ್ಯಮಂತ್ರಿಗಳು, ಈ ಸರ್ಕಾರಕ್ಕೆ ಹಾಲಿನ ಪ್ರೋತ್ಸಾಹಧನ ನೀಡಲು ಮನುಷ್ಯತ್ವ ಇಲ್ಲ. ಹಾಗಾಗಿ ಈ ದನಗಳನ್ನು ತೆಗೆದುಕೊಂಡು ನಾವು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿ ಸರ್ಕಾರದ ಗಮನ ಸೆಳೆಯಬೇಕಾಯಿತು ಎಂದು ತಿಳಿಸಿದರು.
ಸರ್ಕಾರದ ವಿರುದ್ಧ ಆಕ್ರೋಶ: ಸರಕಾರದ ವಿರುದ್ಧ ಜಾನುವಾರುಗಳು ತಿರುಗಿ ಬಿದ್ದಿವೆ. ಜಾನುವಾರುಗಳಿಗೆ ಪಶು ಆಸ್ಪತ್ರೆಗಳಿಲ್ಲ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಪಶು ಆಸ್ಪತ್ರೆಗಳನ್ನು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡುವ ಮುಖಾಂತರ ಬೆಂಗಳೂರಿನಲ್ಲಿ ಹಾಲು ಉತ್ಪಾದಕರೂ ಇರಬಾರದು; ಹಾಲು ಕೊಡುವ ಗೋವುಗಳೂ ಇರಬಾರದು ಎಂಬ ಗೋ ವಿರೋಧಿ ಸರಕಾರ ರಾಜ್ಯದ್ದು ಎಂದು ಆರೋಪಿಸಿದರು.
ಹಾಲಿನ ಮನಸ್ಸುಗಳನ್ನು ವಿರೋಧಿಸುವ ಸರಕಾರ ರಾಜ್ಯದಲ್ಲಿದೆ. ಜಾನುವಾರುಗಳ ಜೊತೆ ನಾವು ವಿಧಾನಸೌಧ ಮುತ್ತಿಗೆಗೆ ಹೋಗುತ್ತೇವೆ ಎಂದು ಪ್ರಕಟಿಸಿದರು. ರೈತರಿಗೆ ಯಡಿಯೂರಪ್ಪ ಅವರು ನೀಡುತ್ತಿದ್ದ 4 ಸಾವಿರ ಮೊತ್ತವನ್ನು ನಿಲ್ಲಿಸಿದ್ದಾರೆ. ಯಂತ್ರಧಾರೆಯ ಡೀಸೆಲ್ ಹಣವನ್ನು ನಿಲ್ಲಿಸಿದ್ದಾರೆ. ರೈತ ವಿದ್ಯಾಸಿರಿ ಸ್ಕಾಲರ್ಶಿಪ್ಪನ್ನು ಸ್ಥಗಿತಗೊಳಿಸಿದ್ದಾರೆ ಎಂದು ಹೇಳೀದರು.
ರೈತರಿಗೆ ಕೃಷಿ ಇಲಾಖೆಯ ಸಬ್ಸಿಡಿ ಯಂತ್ರಗಳನ್ನೂ ಕೊಡುತ್ತಿಲ್ಲ. 850ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯನವರು ಇದರ ಕುರಿತು ತುಟಿ ಬಿಚ್ಚಿಲ್ಲ ಎಂದು ಆರೋಪಿಸಿದರು. ರೈತರು ದುಡ್ಡಿನ ಆಸೆಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೃಷಿ ಸಚಿವರು ಅತ್ಯಂತ ಅನಾಗರಿಕವಾಗಿ ಮಾತನಾಡಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ಳಲಿ ಎಂದು ಹಾಲಿನ ಪ್ರೋತ್ಸಾಹಧನ ನಿಲ್ಲಿಸಿದ್ದೀರಾ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ.ಎಸ್.ನಡಹಳ್ಳಿ ಅವರು ಮಾತನಾಡಿ, ಬಿಜೆಪಿ, ಯಡಿಯೂರಪ್ಪ ಅವರು ಜಾರಿಗೊಳಿಸಿದ ಎಲ್ಲ ರೈತಪರ ಯೋಜನೆಗಳನ್ನು ಕಾಂಗ್ರೆಸ್ ಸರಕಾರ ಸ್ಥಗಿತಗೊಳಿಸಿದೆ ಎಂದು ಆಕ್ಷೇಪಿಸಿದರು. ಹಾಲಿನ ಪ್ರೋತ್ಸಾಹಧನ, ವಿದ್ಯಾಸಿರಿ ಶಿಷ್ಯವೇತನ ಸೇರಿ ಎಲ್ಲ ರೈತಪರ ಯೋಜನೆಗಳನ್ನು ನಿಲ್ಲಿಸಲಾಗಿದೆ ಎಂದು ಆಕ್ರೋಶ ಹೊರ ಹಾಕಿದರು.
ಪ್ರತಿಭಟನೆಯಲ್ಲಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಬಿಜೆಪಿ ವಿರುದ್ಧ ಗರಂ: ಹಸುಗಳನ್ನು ಪ್ರತಿಭಟನೆಗೆ ಬಳಸಿಕೊಂಡಿದ್ದನ್ನು ಪ್ರಶ್ನಿಸಿದ್ದ ವೇಳೆ ತಳ್ಳಾಟ ಮಾಡಿ, ಅವಾಚ್ಯ ಶಬ್ದಬಳಸಿ ಬೈದಿದ್ದಾರೆ ಎಂದು ಆರೋಪಿಸಿದ ಮಾನ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಠಚಾರ ನಿರ್ಮೂಲಕನಾ ಸಂಸ್ಥೆ ಸದಸ್ಯ ರಾಘವೇಂದ್ರ ನಾಯ್ಕ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಓದಿ: ಸಿದ್ದರಾಮಯ್ಯ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ: ಸಿಎಂ ಸೇರಿ ನಾಲ್ವರಿಗೆ ತಲಾ 10 ಸಾವಿರ ರೂ. ದಂಡ