ಬೆಂಗಳೂರು: ನಗರದ ರಾಗಿಗುಡ್ಡ ಮೆಟ್ರೋ ನಿಲ್ದಾಣದಿಂದ ಸಿಲ್ಕ್ ಬೋರ್ಡ್‌ವರೆಗೆ ನಿರ್ಮಾಣಗೊಂಡಿರುವ ದಕ್ಷಿಣ ಭಾರತದ ಮೊದಲ ಡಬಲ್ ಡೆಕ್ಕರ್ ಮೇಲ್ಸೇತುವೆ ಮೇಲೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಬೈಕ್ ರೈಡ್ ಮಾಡಿದ್ದಾರೆ. ಖುದ್ದು ತಾವೇ ಬೈಕ್ ಚಲಾಯಿಸಿದ ವಿಡಿಯೋವನ್ನು ಅವರು ತಮ್ಮ 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡು, 'ಅತ್ಯಂತ ಸುಗಮ ಮತ್ತು ಸುಲಲಿತ ಪ್ರಯಾಣ' ಎಂದು ತಿಳಿಸಿದ್ದಾರೆ.
Took a ride on the new double decker flyover from ragi gudda to silk board. Smooth and clutter free
— CP Bengaluru ಪೊಲೀಸ್ ಆಯುಕ್ತ ಬೆಂಗಳೂರು (@CPBlr) July 21, 2024
ನೂತನವಾಗಿ ನಿರ್ಮಿಸಿರುವ ರಾಗಿ ಗುಡ್ಡದಿಂದ ಸಿಲ್ಕ್ ಬೋರ್ಡ್ ವರೆಗಿನ ಫ್ಲೈಓವರ್ ಮೇಲೆ ಒಂದು ಸವಾರಿ. ಅತ್ಯಂತ ಸುಗಮ ಮತ್ತು ಸುಲಲಿತ ... pic.twitter.com/09ba4fN61n
ಮೆಟ್ರೋದ ಹಳದಿ ಮಾರ್ಗದ ರಾಗಿಗುಡ್ಡ ಮೆಟ್ರೋ ನಿಲ್ದಾಣದಿಂದ ಸಿಲ್ಕ್ ಬೋರ್ಡ್‌ವರೆಗೆ ಸುಮಾರು 3.6 ಕಿ.ಮೀ ಉದ್ದ ನಿರ್ಮಾಣವಾಗಿರುವ ಡಬಲ್ ಡೆಕ್ಕರ್ ಮೇಲ್ಸೇತುವೆ ಜುಲೈ 17ರಂದು ಲೋಕಾರ್ಪಣೆಗೊಂಡಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೂತನ ಸೇತುವೆಯನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿದ್ದರು.
ಉದ್ಘಾಟನೆಯ ಬಳಿಕ ಡಿಸಿಎಂ ಡಿಕೆಶಿ ಕಾರು ಚಲಾಯಿಸಿ ಅನುಭವ ಹಂಚಿಕೊಂಡಿದ್ದರು. 'ದಕ್ಷಿಣ ಭಾರತದ ಮೊದಲ ರೋಡ್-ಕಮ್-ಮೆಟ್ರೋ ಮೇಲ್ಸೇತುವೆಯನ್ನು ಉದ್ಘಾಟಿಸಿ ಸ್ವತಃ ಕಾರ್ ಡ್ರೈವ್ ಮಾಡಿದೆ. ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಸಂಪರ್ಕಿಸುವ ಈ ಅತ್ಯಾಧುನಿಕ ಫ್ಲೈಓವರ್ ನಗರದ ಚಲನಶೀಲತೆಗೆ ಹೊಸ ಭಾಷ್ಯ ಬರೆದಿದೆ ಎಂದರೆ ತಪ್ಪಾಗದು" ಎಂದು ಅವರು ತಿಳಿಸಿದ್ದರು.
449 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಡಬ್ಬಲ್-ಡೆಕ್ಕರ್ ಮೇಲ್ಸೇತುವೆಯ ಕೆಳ ರಸ್ತೆಯಿಂದ ಡಬ್ಬಲ್-ಡಕ್ಕರ್‌ನ ಮೊದಲ ಮೇಲ್ಸೇತುವೆಯು 8 ಮೀಟರ್ ಎತ್ತರದಲ್ಲಿದೆ. ಮೆಟ್ರೋ ವಯಾಡಕ್ಟ್ 16 ಮೀಟರ್ ಎತ್ತರ ಹೊಂದಿದೆ. ಈ ಮೇಲ್ಸೇತುವೆಯ ಮೂಲಕ ಹೆಚ್ಎಸ್ಆರ್ ಲೇಔಟ್ ಹಾಗೂ ಹೊಸೂರು ಲೇಔಟ್ ಅನ್ನು ಅಡ್ಡಿಯಿಲ್ಲದೆ ಬೇಗ ತಲುಪಬಹುದು.