ಬೆಂಗಳೂರು: ದೇಶಾದ್ಯಂತ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಸಂಬಂಧ ಅವರ ಪತ್ನಿ ಸೇರಿದಂತೆ ಮೂವರನ್ನು ಮಾರತ್‌ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅತುಲ್ ಪತ್ನಿ ನಿಖಿತಾ ಸಿಂಘಾನಿಯರನ್ನು ಹರಿಯಾಣದ ಗುರುಗ್ರಾಮದಲ್ಲಿ ಬಂಧಿಸಿದ್ದರೆ, ತಾಯಿ ನಿಶಾ ಸಂಘಾನಿಯಾ ಹಾಗೂ ಸಹೋದರ ಅನುರಾಗ್ ಸಿಂಘಾನಿಯ ಅವರನ್ನು ಉತ್ತರ ಪ್ರದೇಶದ ಅಲಹಾಬಾದ್ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರತ್‌ಹಳ್ಳಿ ಠಾಣೆ ಪೊಲೀಸರು ಉತ್ತರ ಪ್ರದೇಶದ ಜೋನಪುರದಲ್ಲಿರುವ ಪತ್ನಿ ನಿಖಿತಾ ಸಿಂಘಾನಿಯಾ ಮನೆ ಬಾಗಿಲಿಗೆ ಡಿಸೆಂಬರ್ 13ರಂದು ಸಮನ್ಸ್ ಅಂಟಿಸಿ, ಮೂರು ದಿನದೊಳಗಾಗಿ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದ್ದರು.
''ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ'' ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಶಿವಕುಮಾರ್ ಮಾಹಿತಿ ನೀಡಿದ್ದಾರೆ.
34 ವರ್ಷದ ಅತುಲ್ ಮಾರತ್‌ಹಳ್ಳಿಯ ಬಹುರಾಷ್ಟ್ರೀಯ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು. ಪತ್ನಿ ಹಾಗೂ ಆಕೆ ಮನೆಯವರು ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಡಿಸೆಂಬರ್ 9ರಂದು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದನ್ನೂ ಓದಿ: ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಕೇಸ್: ಪತ್ನಿಗೆ ಸಮನ್ಸ್ ಜಾರಿ