ಬೆಂಗಳೂರು: ಆಸ್ಟ್ರೇಲಿಯಾದಿಂದ ಭಾರತಕ್ಕೆ ವಾಪಸ್ ಆಗಿದ್ದ ವ್ಯಕ್ತಿಗೆ ಮಾದಕ ವಸ್ತು ಗಾಂಜಾ ಕೊಡುವುದಾಗಿ ನಂಬಿಸಿ ಹಲ್ಲೆಗೈದು ಹಣ ಸುಲಿಗೆ ಮಾಡಿದ್ದ 6 ಮಂದಿ ಆರೋಪಿಗಳನ್ನು ಬೊಮ್ಮನಹಳ್ಳಿ ಠಾಣೆ ಬಂಧಿಸಿದ್ದಾರೆ. ಬೊಮ್ಮನಹಳ್ಳಿ ನಿವಾಸಿ ಅಮಿತ್ ರಾಣಾ ಅವರ ಸಹೋದರ ಆಸ್ಟ್ರೇಲಿಯಾ ಪ್ರಜೆಯಾಗಿದ್ದ ಅಲೋಕ್ ರಾಣಾ ಎಂಬವರನ್ನು ಅಪಹರಿಸಿ, ಹಣ ಸುಲಿಗೆ ಮಾಡಿದ್ದ ತಮಿಳುನಾಡು ಮೂಲದ ಮೋನಿಷ್, ಲೊಕೇಶ್, ಕಿಶೋರ್, ರವಿ, ದಿಲೀಪ್ ಹಾಗೂ ಸತೀಶ್ ಎಂಬವರನ್ನು ಬಂಧಿಸಲಾಗಿದೆ.
ಅಪಹರಣಕ್ಕೊಳಗಾದ ಅಲೋಕ್ ರಾಣಾ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡಿಕೊಂಡಿದ್ದರು. ಸಹೋದರನನ್ನು ನೋಡಲು ಬೆಂಗಳೂರು ಬಂದಿದ್ದರು. ಗಾಂಜಾ ಸೇವನೆಗೆ ಜೋತುಬಿದ್ದಿದ್ದ ಅಲೋಕ್ ಡಾರ್ಕ್ ವೆಬ್ ಮೂಲಕ ಆರೋಪಿ ಮೋನಿಷ್ನನ್ನು ಸಂಪರ್ಕಿಸಿದ್ದರು. ಹಲವು ಬಾರಿ ಮಾದಕಗ ದ್ರವ್ಯವನ್ನೂ ಖರೀದಿಸಿದ್ದರು. ನಿರಂತರ ಖರೀದಿ ಹಿನ್ನೆಲೆಯಲ್ಲಿ ಶ್ರೀಮಂತ ವ್ಯಕ್ತಿಯೆಂದು ಭಾವಿಸಿ ಹಣಕ್ಕಾಗಿ ಮೊನೀಷ್ ಹಾಗೂ ಆತನ ಸಹಚರರು ಸುಲಿಗೆಗೆ ಸಂಚು ರೂಪಿಸಿದ್ದರು.
ಡ್ರಗ್ಸ್ ವ್ಯವಹಾರ ಸಂಬಂಧ ಫೆ.5ರಂದು ಆರೋಪಿಗಳನ್ನು ಅಲೋಕ್ ಮಾಡಿ ಭೇಟಿ ಮಾಡಿದ್ದರು. ಪೂರ್ವಯೋಜಿತ ಸಂಚಿನಂತೆ ಆತನನ್ನು ಬೆದರಿಸಿದ ಆರೋಪಿಗಳು ಅವಾಚ್ಯ ಶಬ್ಧಗಳಿಂದಲೂ ನಿಂದಿಸಿದ್ದಾರೆ. ಅಲೋಕ್ ಅವರ ಮೊಬೈಲ್ನಿಂದ 98 ಸಾವಿರ ರೂ ವರ್ಗಾಯಿಸಿಕೊಂಡಿದ್ದಾರೆ. ಕೆಲ ಹೊತ್ತಿನ ಬಳಿಕ ಅಲೋಕ್ ಸಹೋದರ ಅಮಿತ್ಗೆ ಕರೆ ಮಾಡಿಸಿ 40 ಸಾವಿರ ಹಣ ಹಾಕಿಸಿಕೊಂಡಿದ್ದಾರೆ. ಇಷ್ಟಕ್ಕೆ ತೃಪ್ತರಾಗದ ಸುಲಿಗೆಕೋರರು ಇನ್ನೂ ಹೆಚ್ಚು ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಈ ಮಧ್ಯೆ ಅಲೋಕ್ ಕಾರ್ನಲ್ಲಿ ಅಳವಡಿಸಿದ್ದ ಜಿಪಿಎಸ್ ಆಧಾರದ ಮೇರೆಗೆ ಅಮಿತ್ ಸ್ಥಳಕ್ಕೆ ಹೋದಾಗ ಆರೋಪಿಗಳೆಲ್ಲರೂ ಸ್ಥಳದಿಂದ ಪರಾರಿಯಾಗಿದ್ದರು. ಈ ಸಂಬಂಧ ತಡವಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡ 24 ಗಂಟೆ ಅಂತರದಲ್ಲಿ ಆರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಮಾಹಿತಿ ನೀಡಿದ್ದಾರೆ.
ಪಾರ್ಕಿಂಗ್ ವಿಚಾರಕ್ಕೆ ನೆರೆಹೊರೆ ಮನೆಯವರ ಗಲಾಟೆ: ತಮಿಳಿನಲ್ಲಿ ಇತ್ತೀಚೆಗೆ ತೆರೆಕಂಡಿದ್ದ 'ದಿ ಪಾರ್ಕಿಂಗ್' ಸಿನಿಮಾ ಮಾದರಿಯಂತೆ ಮನೆ ಮುಂಭಾಗ ಕಾರು ನಿಲ್ಲಿಸುವ ವಿಚಾರಕ್ಕಾಗಿ ಅಕ್ಕಪಕ್ಕದ ಮನೆಯವರು ಗಲಾಟೆ ಮಾಡಿಕೊಂಡಿದ್ದಾರೆ. ಕಾರಿನ ಗ್ಲಾಸ್ ಪುಡಿ ಪುಡಿ ಮಾಡಿ ಪರಸ್ಪರ ಅವಾಚ್ಯ ಶಬ್ಧಗಳಿಂದ ನಿಂದಿಸಿಕೊಂಡಿರುವ ಘಟನೆ ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗೋವಿಂದಪ್ಪ ಲೇಔಟ್ ನಿವಾಸಿಗಳಾದ ಮಯೂರ್ ಮತ್ತು ಸಂತೋಷ್ ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ. ಸಂತೋಷ್ ಹಾಗೂ ಮಯೂರ್ ಇಬ್ಬರೂ ಎದುರುಬದುರು ಮನೆಯವರು. ಸಂತೋಷ್ ಮನೆ ಮುಂದೆ ಮಯೂರ್ ಕಾರು ನಿಲ್ಲಿಸಿದ್ದರು ಎಂಬ ವಿಚಾರಕ್ಕೆ ಕೆಲ ದಿನಗಳ ಕಾಲ ಮಯೂರ್ ಸಂತೋಷ್ ಮನೆ ಮುಂದೆ ಕಾರು ಪಾರ್ಕ್ ಮಾಡಿದ್ದರು ಎನ್ನಲಾಗಿದೆ. ಈ ವೇಳೆ ಕಾರು ತೆಗೆಯುವುದಕ್ಕೆ ಸಂತೋಷ್ ಒತ್ತಾಯಿಸಿದ್ದರು. ಸಂತೋಷ್ ಮಾತಿಗೆ ಕ್ಯಾರೆನ್ನದೆ ಕಾರು ತೆಗೆಯಲು ಮಯೂರ್ ನಿರಾಕರಿಸಿದ್ದಾರೆ. ಈ ವೇಳೆ ಇಬ್ಬರ ಕುಟುಂಬಸ್ಥರಿಂದ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಕೈಯಿಂದಲೇ ಸಂತೋಷ್ ಕಾರು ಗ್ಲಾಸ್ ಪುಡಿ ಮಾಡಿದ್ದಾರೆ. ಈ ಕುರಿತು ಸ್ಥಳೀಯರು ಸಂಜಯ ನಗರ ಠಾಣೆಗೆ ಮಾಹಿತಿ ನೀಡಿದ್ದು ಎರಡೂ ಮನೆಯವರನ್ನು ಠಾಣೆಗೆ ಕರೆಯಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: ಕಾರವಾರ: ಅವ್ಯವಹಾರ ಪ್ರಶ್ನಿಸಿದ ಮಹಿಳೆ ಮೇಲೆ ಹಲ್ಲೆ ಆರೋಪ