ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ಸುಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ರಾಮಸ್ಮರಣೆ ಮಾಡುತ್ತಾ ರಾಮಭಕ್ತಿ ಮೆರೆಯುತ್ತಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಾಫಿ ಕನೆಕ್ಷನ್ಸ್ ಓವನ್ ಫ್ರೆಷ್ ಕಾಫಿ ಶಾಪ್‌ನಲ್ಲಿ ಕಪ್ ಕಾಫಿಯಲ್ಲಿ ರಾಮ ಮಂದಿರ ಚಿತ್ರಿಸುತ್ತಿದ್ದಾರೆ.
ಇದಕ್ಕೆ ಹದಿನೈದು ದಿನಗಳಿಂದ ಪೂರ್ವಸಿದ್ಧತೆಯೂ ನಡೆದಿದೆ. ಕಪ್‌ನಲ್ಲಿರುವ ಕಾಫಿಯಲ್ಲಿ ರಾಮಮಂದಿರ ಮೂಡಿಸಲೆಂದೇ ಜಾತಿ, ಧರ್ಮ ಭೇದವಿಲ್ಲದೆ ಸಿಬ್ಬಂದಿಯಲ್ಲಿ ಕಲಾಸಕ್ತರನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗಿದೆ. ಪ್ರತಿದಿನ ಕಪ್ ಕಾಫಿಯಲ್ಲಿ ರಾಮಮಂದಿರ ಮೂಡಿಸಿ ಕಾಫಿಯನ್ನು ಪ್ರದರ್ಶನಕ್ಕಿಡಲಾಗಿದೆ. ರಾತ್ರಿ ಅದನ್ನು ಶುದ್ಧ ಸ್ಥಳದಲ್ಲಿ ಹಾಕಿ ಅಲ್ಲಿ ಗಿಡವೊಂದನ್ನು ನೆಡಲು ಕಾಫಿ ಶಾಪ್ ಮುಂದಾಗಿದೆ.

ಕಾಫಿ ಕನೆಕ್ಷನ್ಸ್ ಐಯ್ಯಂಗಾರ್ಸ್ ಓವನ್ ಫ್ರೆಷ್ ಕಾಫಿ ಶಾಪ್ ಸಂಸ್ಥಾಪಕ ಜೆ.ಕೆ.ಪ್ರಮೋದ್ ಈ ಕುರಿತು ಮಾತನಾಡಿ, "ವಿಶ್ವಕ್ಕೆ ಕೆಲವು ದಿಕ್ಸೂಚಿಗಳಿರುತ್ತವೆ. ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾಗುತ್ತಿರುವುದೂ ಇಂತಹ ದಿಕ್ಸೂಚಿಗಳಲ್ಲಿ ಒಂದು. ರಾಮ ಒಂದು ಆತ್ಮವಿದ್ದಂತೆ. ಅದು ಕೇವಲ ಒಂದು ಧರ್ಮಕ್ಕೆ ಸೀಮಿತವಾಗಬಾರದು. ಈ ಹಿನ್ನೆಲೆಯಲ್ಲಿ ರಾಮನ ಕುರಿತು ಜನರಲ್ಲಿ ಅರಿವು ಮೂಡಿಸಲು ನಮ್ಮ ಕೆಫೆಯಲ್ಲಿ ಸಣ್ಣ ಪ್ರಯತ್ನ ಮಾಡಲಾಗಿದೆ" ಎಂದು ಹೇಳಿದರು.
"ಯಾರಿಗೆ ಕಲೆ, ಸಾಹಿತ್ಯದಲ್ಲಿ ಆಸಕ್ತಿ ಇದೆಯೋ ಅಂತಹ ನಾಲ್ವರನ್ನು ಆಯ್ಕೆ ಮಾಡಿ, ದಿನದಲ್ಲಿ ಎರಡು ಗಂಟೆ ಕಾಲ ತಮ್ಮ ತರಬೇತಿ ಮುಗಿಯುವವರೆಗೆ ಉಪವಾಸವಿದ್ದು, ಮಡಿಯಿಂದಲೇ ಕಾಫಿ ಕಪ್‌ನಲ್ಲಿ ರಾಮಮಂದಿರದ ಮಾದರಿ ಮೂಡಿಸುವುದನ್ನು ಅಭ್ಯಾಸ ಮಾಡಿಸಲಾಗಿತ್ತು. ವಿಶೇಷವೆಂದರೆ, ಈ ಕಾರ್ಯದಲ್ಲಿ ಹಿಂದುಗಳಷ್ಟೇ ಅಲ್ಲ, ಕ್ರಿಶ್ಚಿಯನ್, ಮುಸ್ಲಿಂ ಧರ್ಮದ ಸಿಬ್ಬಂದಿಗಳೂ ಭಾಗಿಯಾಗಿದ್ದಾರೆ" ಎಂದು ತಿಳಿಸಿದರು.
"ರಾಮ ಪ್ರತಿಷ್ಠಾಪನೆಯ ದಿನ ನಮ್ಮ ಕಾಫಿ ಶಾಪ್‌ಗೆ ಬರುವ ಗ್ರಾಹಕರಿಂದ ರಾಮನಾಮ ಜಪ ಮಾಡಿಸಲಾಗುವುದು. ರಾಮನಿಗೆ ಪ್ರಿಯವಾದ ಹಣ್ಣಿನ ರಸವನ್ನು ಸಹ ನೀಡಲಾಗುವುದು. ಸಂಜೆಯ ವೇಳೆ ಗ್ರಾಹಕರೊಂದಿಗೆ ರಾಮ ಭಜನೆ, ಮಂತ್ರಾಕ್ಷತೆ ವಿತರಣೆ, ದೀಪ ಬೆಳಗಿಸುವ ಮೂಲಕ ಆಚರಿಸಲಾಗುವುದು. ಎಲ್ಲರ ಮನಸಿನಲ್ಲಿ ಸಹಬಾಳ್ವೆ, ವಿಶ್ವ ಭಾತೃತ್ವ ಹಾಗೂ ನಾವೆಲ್ಲರೂ ಒಂದೇ ಎನ್ನುವ ಭಾವನೆ ಮೂಡಬೇಕು. ಜನರಲ್ಲಿ ರಾಮನ ಕುರಿತು ಅರಿವು ಮೂಡಿಸಲು ನಮ್ಮ ಸಣ್ಣ ಪ್ರಯತ್ನವಾಗಿದೆ. ವಿಶೇಷ ರಾಮ ಮಂದಿರದ ಚಿತ್ರವಿರುವ ಕೇಕ್ ಸಹ ಗ್ರಾಹಕರಿಗಾಗಿ ತಯಾರಿಸಲಾಗಿದೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಕುಂದಾನಗರಿ ಬಾನಂಗಳದಲ್ಲಿ ಚಿತ್ತಾರ ಮೂಡಿಸಿದ ಶ್ರೀರಾಮನ ಗಾಳಿಪಟ