ಬೆಂಗಳೂರು : ಕೆ.ಆರ್.ಪುರಂ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮಗನಿಂದಲೇ ತಾಯಿಯ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಆರೋಪಿ ಅಪ್ರಾಪ್ತ ಮಗನನ್ನ ಬಂಧಿಸಿದ್ದ ಪೊಲೀಸರಿಗೆ ತನಿಖೆ ವೇಳೆ ತಂದೆಯೂ ಹತ್ಯೆಯಲ್ಲಿ ಭಾಗಿಯಾಗಿದ್ದ ಎಂಬ ಅಂಶ ತಿಳಿದು ಬಂದಿದೆ. ಕೃತ್ಯಕ್ಕೆ ಬಳಸಲಾಗಿದ್ದ ಕಬ್ಬಿಣದ ರಾಡ್ನಲ್ಲಿ ಎರಡು ವಿಭಿನ್ನ ಫಿಂಗರ್ ಪ್ರಿಂಟ್ ಪತ್ತೆಯಾಗಿದ್ದು, ತಂದೆ - ಮಗ ಇಬ್ಬರೂ ಸೇರಿಕೊಂಡು ಕೃತ್ಯ ಎಸಗಿರುವುದು ತಿಳಿದು ಬಂದಿದೆ. ಆದ್ದರಿಂದ ಆರೋಪಿ ಚಂದ್ರಪ್ಪನನ್ನ ಪೊಲೀಸರು ಬಂಧಿಸಿದ್ದಾರೆ.
ಫೆಬ್ರವರಿ 2ರಂದು ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಹತ್ಯೆ ನಡೆದಿತ್ತು. ತಿಂಡಿ ವಿಚಾರವಾಗಿ ನಡೆದ ಗಲಾಟೆಯಲ್ಲಿ ತಾಯಿ ನೇತ್ರಾವತಿ (40) ಅವರನ್ನ ರಾಡ್‌ನಿಂದ ಹೊಡೆದು ಕೊಲೆ ಮಾಡಿರುವುದಾಗಿ ಮಗ ಠಾಣೆಗೆ ಕರೆ ಮಾಡಿದ್ದ. ಬಳಿಕ ಮಗನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ, ತನಿಖೆ ವೇಳೆ ಹತ್ಯೆಗೆ ಬಳಸಲಾಗಿದ್ದ ರಾಡ್ ಮೇಲೆ 2 ರೀತಿಯ ಫಿಂಗರ್ ಪ್ರಿಂಟ್ಗಳು ಪತ್ತೆಯಾಗಿವೆ. ಇದರಿಂದ ಅನುಮಾನಗೊಂಡ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿ ರಾಡ್ನ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ಗೆ ಕಳುಹಿಸಿದಾಗ ರಾಡ್ ಮೇಲೆ ತಂದೆ ಮತ್ತು ಮಗನ ಫಿಂಗರ್ ಪ್ರಿಂಟ್ ಇರುವುದು ಗೊತ್ತಾಗಿದೆ. ತಕ್ಷಣ ನೇತ್ರಾಳ ಗಂಡ ಚಂದ್ರಪ್ಪನನ್ನು ಕೆ.ಆರ್. ಪುರಂ ಪೊಲೀಸರು ಬಂಧಿಸಿದ್ದಾರೆ.
ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಹತ್ಯೆ: ವಿಚಾರಣೆ ವೇಳೆ ಪತ್ನಿಯ ಹತ್ಯೆಗೆ ಕಾರಣವನ್ನ ಆರೋಪಿ ಚಂದ್ರಪ್ಪ ಬಾಯ್ಬಿಟ್ಟಿದ್ದಾನೆ. ವಿವಾಹೇತರ ಸಂಬಂಧ ಹಾಗೂ ಮದ್ಯಪಾನದ ಅಭ್ಯಾಸ ಹೊಂದಿದ್ದ ನೇತ್ರಾ ಒಮ್ಮೊಮ್ಮೆ ಎರಡ್ಮೂರು ದಿನಗಳು ಕಳೆದರೂ ಮನೆಗೆ ಬರುತ್ತಿರಲಿಲ್ಲ. ಇದರಿಂದ ನಾವು ತಂದೆ - ಮಗ ಉಪವಾಸ ಇರಬೇಕಿತ್ತು. ಪ್ರಶ್ನಿಸಿದರೆ ನಮ್ಮೊಂದಿಗೆ ಜಗಳ ಮಾಡುತ್ತಿದ್ದಳು. ಆದ್ದರಿಂದ ಮಗನ ಜೊತೆ ಸೇರಿ ಹತ್ಯೆಗೆ ನಿರ್ಧಾರ ಮಾಡಿದೆ ಎಂದು ಚಂದ್ರಪ್ಪ ಬಾಯ್ಬಿಟ್ಟಿದ್ದಾನೆ.
ಅಪ್ಪನನ್ನ ರಕ್ಷಿಸಲು ಶರಣಾಗಿದ್ದ ಮಗ: ತಂದೆ - ಮಗ ಸೇರಿಕೊಂಡು ತಾಯಿಯ ಕೊಲೆ ಮಾಡಿದ್ದರು. ಬಳಿಕ ತಂದೆಯನ್ನ ರಕ್ಷಿಸಲು ಆರೋಪವನ್ನ ಅಪ್ರಾಪ್ತ ಮಗ ತನ್ನ ಮೇಲೆಯೇ ಹಾಕಿಕೊಂಡಿದ್ದ. ಆದ್ದರಿಂದಲೇ ತಂದೆ ಕೈಯಲಿದ್ದ ರಾಡ್‌ನಿಂದ ತಾನೂ ಒಂದೆರಡು ಏಟು ಹೊಡೆದಿದ್ದ. ನೇತ್ರಾ ಸತ್ತಿರುವುದು ಖಚಿತವಾದ ಬಳಿಕ ಚಂದ್ರಪ್ಪ ಅಲ್ಲಿಂದ ಪರಾರಿಯಾದರೆ, ಅಪ್ರಾಪ್ತ ಮಗ ಪೊಲೀಸರಿಗೆ ಶರಣಾಗಿದ್ದ ಎಂಬ ಮಾಹಿತಿ ತನಿಖೆಯಿಂದ ತಿಳಿದು ಬಂದಿದೆ. ಸದ್ಯ ಮಗನೊಂದಿಗೆ ಅಪ್ಪನನ್ನ ಸಹ ಕೆ.ಆರ್.ಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಓದಿ: ಕಳ್ಳನನ್ನು ಪತ್ತೆ ಹಚ್ಚಿ ಹಿಡಿದುಕೊಟ್ಟ ಗೂಗಲ್ ಮ್ಯಾಪ್; ಹೇಗಿತ್ತು ಗೊತ್ತಾ ಆ ಕಾರ್ಯಾಚರಣೆ?