ಬೆಳಗಾವಿ: ಸ್ಕೂಟಿ ಡಿಕ್ಕಿಯಲ್ಲಿ ಇಟ್ಟಿದ್ದ 1.40 ಲಕ್ಷ ಹಣವನ್ನು ಹಾಡಹಗಲೇ ವ್ಯಕ್ತಿಯೊಬ್ಬನು ದೋಚಿಕೊಂಡು ಪರಾರಿಯಾಗಿರುವ ಘಟನೆ ಬೆಳಗಾವಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆದಿದೆ. ಈ ಘಟನೆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವ್ಯಾಪಾರಿ ರಾಜು ಡಿಕೋಸ್ಟಾ ಎಂಬುವರು ಹಣ ಕಳೆದುಕೊಂಡಿದ್ದು, ಜಿಲ್ಲಾ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ರಾಜದೀಪ್ ಟ್ರೇಡರ್ಸ್ ಅಂಗಡಿ ಮುಂಭಾಗದಲ್ಲಿ ಇಂದು ಬೆಳಗ್ಗೆ 10.45ರ ಸುಮಾರಿಗೆ ಈ ಕಳ್ಳತನ ನಡೆದಿದೆ. ಎಪಿಎಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಿಸಿಟಿವಿ ಪರಿಶೀಲನೆ ಮಾಡಿದ್ದು ತನಿಖೆ ಮುಂದುವರಿಸಿದ್ದಾರೆ.
ಪ್ರತಿದಿನದಂತೆ ವ್ಯಾಪಾರಿ ರಾಜು ಡಿಕೋಸ್ಟಾ ಅವರು ರಾಜದೀಪ್ ಟ್ರೇಡರ್ಸ್ ಅಂಗಡಿಗೆ ಬಂದಿದ್ದರು. ಈ ವೇಳೆ ಅವರು ಸ್ಕೂಟಿಯನ್ನು ಹೊರಗೆ ನಿಲ್ಲಿಸಿ ಒಳಗೆ ಹೋಗಿದ್ದನ್ನು ಅರಿತ ಚಾಲಾಕಿಯು ತಕ್ಷಣ ಸ್ಕೂಟಿಯ ಡಿಕ್ಕಿ ಓಪನ್ ಮಾಡಿ ಕವರ್ನಲ್ಲಿದ್ದ ಹಣವನ್ನು ತೆಗೆದುಕೊಂಡು ತನ್ನ ಸ್ಕೂಟಿ ಮೂಲಕ ಪರಾರಿಯಾಗಿದ್ದಾನೆ.
ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಣ ಕಳೆದುಕೊಂಡ ರಾಜು ಡಿಕೋಸ್ಟಾ ಮಾತನಾಡಿ, ರಾಜದೀಪ ಟ್ರೇಡರ್ಸ್ ಅಂಗಡಿಯಲ್ಲಿ ಕಳೆದ 20 ವರ್ಷಗಳಿಂದ ಉಳ್ಳಾಗಡ್ಡಿ, ಆಲೂಗಡ್ಡೆ ಖರೀದಿ ಮಾಡುತ್ತಿದ್ದೇವೆ. ಅದರೆ ಬಾಕಿ ಬಿಲ್ ತುಂಬಲು ಇವತ್ತು ಬಂದಿದ್ದೆವು. ಈ ವೇಳೆ ವ್ಯಕ್ತಿಯೊಬ್ಬನು 1.40 ಲಕ್ಷ ಹಣ ಕದ್ದು ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ. ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಇದನ್ನೂಓದಿ:ರೌಡಿಶೀಟರ್ನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಂದ ದುಷ್ಕರ್ಮಿಗಳು: ಹಳೆ ದ್ವೇಷ ಶಂಕೆ