ಬೆಳಗಾವಿ: ಕ್ರಿಮಿನಾಶಕ ಮಿಶ್ರಿತ ನೀರು ಸೇವಿಸಿ ನಡು ರಸ್ತೆಯಲ್ಲೇ ಎರಡು ಹಸು, ಎಮ್ಮೆ, ಐದು ಆಡುಗಳು ಸಾವಿಗೀಡಾಗಿರುವ ಘಟನೆ ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಸಂತಿ ಬಸ್ತವಾಡ ಗ್ರಾಮದ ಯಲ್ಲಪ್ಪ ಚಿನಗುಪ್ಪಿ ಎಂಬುವರಿಗೆ ಸೇರಿದ ಎರಡು ಹಸುಗಳು, ಎಮ್ಮೆ, ಐದು ಆಡುಗಳು ಸಾವನ್ನಪ್ಪಿದ್ದು ಮೇಯಿಸಲು ಹೋದಾಗ ಕ್ರಿಮಿನಾಶಕ ನೀರು ಸೇವನೆ ಮಾಡಿವೆ. ಪಕ್ಕದ ಜಮೀನಿನ ಮಾಲೀಕ ಕಬ್ಬಿನ ಹೊಲಕ್ಕೆ ಔಷಧ ಸಿಂಪಡಿಸಲು ನೀರಿನಲ್ಲಿ ಕ್ರಿಮಿನಾಶಕ ಬೆರೆಸಿ ಇಟ್ಟಿದ್ದರು. ಬಿಸಿಲಿನ ಬೇಗೆಗೆ ಬಸವಳಿದಿದ್ದ ಹಸು, ಎಮ್ಮೆ ಹಾಗೂ ಆಡುಗಳು ಅದೇ ಕ್ರಿಮಿನಾಶಕ ಮಿಶ್ರಿತ ನೀರನ್ನು ಸೇವನೆ ಮಾಡಿವೆ. ಕ್ರಿಮಿನಾಶಕ ಮಿಶ್ರಿತ ನೀರು ಸೇವನೆ ಮಾಡ್ತಿದ್ದಂತೆ ಒದ್ದಾಡಿ ನಡು ರಸ್ತೆಯಲ್ಲೇ ಪ್ರಾಣಬಿಟ್ಟಿವೆ.
ಲಕ್ಷಾಂತರ ರೂ. ಮೌಲ್ಯದ ಹಸು, ಎಮ್ಮೆ, ಆಡುಗಳನ್ನು ಕಳೆದುಕೊಂಡು ರೈತ ಕಂಗಾಲಾಗಿದ್ದು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿ ಈ ದುರ್ಘಟನೆ ನಡೆದಿದೆ.
ಮಾಲೀಕನಿಗೆ ಧೈರ್ಯ ತುಂಬಿದ ಮೃಣಾಲ್ ಹೆಬ್ಬಾಳ್ಕರ್ : ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಸ್ಥಳಕ್ಕೆ ಭೇಟಿ ನೀಡಿ, ಜಾನುವಾರುಗಳ ಮಾಲೀಕರಿಂದ ಮಾಹಿತಿ ಪಡೆದು, ಅವರಿಗೆ ಧೈರ್ಯ ತುಂಬಿದರು. ಈ ವೇಳೆ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಜೊತೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ, ನಿಯಮಾನುಸಾರ ಜಾನುವಾರುಗಳ ಮಾಲೀಕರಿಗೆ ನೆರವು ನೀಡುವಂತೆ ಕೋರಿದರು.
ಇದೇ ವೇಳೆ ಕ್ಷೇತ್ರದ ಶಾಸಕಿ ಆಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ಕರೆ ಮಾಡಿ ಮಾಹಿತಿ ನೀಡಿದ ಮೃಣಾಲ್, ಸರ್ಕಾರದಿಂದ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಿದ್ದಾರೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ:ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಆರು ಮಂದಿ ಸಾವು; ದಾಂಡೇಲಿಯಲ್ಲಿ ದುರಂತ - Kali River Tragedy