ಬೆಳಗಾವಿ: ಇಬ್ಬರು ಮಕ್ಕಳು ಆಟ ಆಡುತ್ತಿರುವಾಗ ಬೀದಿ ನಾಯಿಗಳು ಏಕಾಎಕಿ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಬೆಳಗಾವಿ ನ್ಯೂ ಗಾಂಧಿ ನಗರದಲ್ಲಿ ನಡೆದಿದೆ. ಸಣ್ಣ ಮಕ್ಕಳನ್ನು ಗುರಿಯಾಗಿಸಿಕೊಂಡು ಬೀದಿ ನಾಯಿಗಳು ದಾಳಿ ಮಾಡಿದ್ದು, ಒಬ್ಬ ಬಾಲಕನಿಗೆ ತೀವ್ರ ಗಾಯಗಳಾಗಿವೆ. ಬಾಲಕನ ಕಪಾಳು ಮತ್ತು ಬೆನ್ನು ಸೇರಿ ದೇಹದ ವಿವಿಧ ಭಾಗದಲ್ಲಿ ಬೀದಿನಾಯಿಗಳು ಕಚ್ಚಿ ತೀವ್ರವಾಗಿ ಗಾಯಗೊಳಿಸಿವೆ.
ಅದೇ ರೀತಿ ಮತ್ತೊಬ್ಬ ಬಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇಬ್ಬರು ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಬೀದಿ ನಾಯಿಗಳ ಹಾವಳಿ ತಡೆಯಲು ವಿಫಲವಾಗಿರುವ ಮಹಾನಗರ ಪಾಲಿಕೆ ವಿರುದ್ದ ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ನ್ಯೂ ಗಾಂಧಿನಗರ, ಉಜ್ವಲ್ ನಗರ ಸೇರಿ ವಿವಿಧೆಡೆ ಒಂದೂವರೆ ತಿಂಗಳ ಹಿಂದೆ ಹತ್ತಕ್ಕಿಂತ ಹೆಚ್ಚು ಜನರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಎಲ್ಲೆಂದರಲ್ಲಿ ಗುಂಪು ಗುಂಪಾಗಿ ಬೀದಿ ನಾಯಿಗಳು ಓಡಾಡುತ್ತಿವೆ. ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಬೀದಿ ನಾಯಿಗಳನ್ನು ಹಿಡಿಯುವಂತೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಮನ್ಸೂರ್, ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ 15 ಜನರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಗಾಯಗೊಳಿಸಿವೆ. ಆಗ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ, ಈ ವರೆಗೆ ಒಂದು ನಾಯಿಯನ್ನು ಪಾಲಿಕೆಯವರು ಹಿಡಿದಿಲ್ಲ. ಅವರ ನಿರ್ಲಕ್ಷ್ಯದಿಂದ ಈಗ ಮತ್ತೆ ಸಣ್ಣ ಮಕ್ಕಳಿಗೆ ಕಚ್ಚಿವೆ. ಇದೇ ರೀತಿ ಪಾಲಿಕೆ ಅಧಿಕಾರಿಗಳು ಇನ್ನು ಮುಂದೆಯೂ ಕ್ರಮ ಕೈಗೊಳ್ಳದಿದ್ದರೆ, ಬೀದಿ ನಾಯಿಗಳನ್ನು ಹಿಡಿದು ಪಾಲಿಕೆ ಆವರಣದಲ್ಲಿ ಬಿಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬೀದಿ ನಾಯಿ ಹಾವಳಿಗೆ 1.10 ಕೋಟಿ ಮೀಸಲು:ಬೆಳಗಾವಿಯಲ್ಲಿ ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಮಹಾನಗರ ಪಾಲಿಕೆಯು ಬಜೆಟ್ನಲ್ಲಿ 1.10 ಕೋಟಿ ಅನುದಾನವನ್ನು ಮೀಸಲಿಟ್ಟಿದೆ. ಇಷ್ಟು ದೊಡ್ಡ ಮಟ್ಟದ ಹಣ ಮೀಸಲಿಟ್ಟರೂ ಕೂಡ ಪಾಲಿಕೆಯವರು ಏನು ಮಾಡುತ್ತಿದ್ದಾರೆ? ಈ ವರೆಗೆ ಬೀದಿನಾಯಿಗಳನ್ನು ಎಷ್ಟು ಹಿಡಿದಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.