ಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಬೆಳಗಾವಿಯ ಸುವರ್ಣ ವಿಧಾನಸೌಧ ಮತ್ತೆ ಪಾಚಿಗಟ್ಟಿದೆ. ಇದು ಸುವರ್ಣ ವಿಧಾನಸೌಧವೋ..? ಹಸಿರು ಸೌಧವೋ..? ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಹೌದು, ಒಂದೆಡೆ ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳ ಸ್ಥಳಾಂತರ ಆಗಿಲ್ಲ. ಮತ್ತೊಂದೆಡೆ ಇದರ ನಿರ್ವಹಣೆಯನ್ನೇ ಮರೆತು ಸರ್ಕಾರ ಕೈಕಟ್ಟಿ ಕುಳಿತಂತೆ ಕಾಣುತ್ತಿದೆ. ಉತ್ತರಕರ್ನಾಟಕ ಭಾಗದ ಜನರಿಗೆ ಅನುಕೂಲ ಆಗಲಿ ಎಂದು 2012ರಲ್ಲಿ 500 ಕೋಟಿ ರೂ. ಖರ್ಚು ಮಾಡಿ ಇಲ್ಲಿ ಸೌಧವನ್ನು ನಿರ್ಮಿಸಲಾಗಿದೆ. ಅಲ್ಲದೇ ಪ್ರತಿವರ್ಷ ಇದರ ಸ್ವಚ್ಛತೆಗೆ 2 ಕೋಟಿ ರೂ. ಖರ್ಚು ಮಾಡಲಾಗುತ್ತದೆ. ಆದರೂ, ಇಲ್ಲಿ ಸ್ವಚ್ಛತೆ ಅಷ್ಟಕ್ಕಷ್ಟೇ. ಪ್ರತಿವರ್ಷವೂ ಮಳೆಗಾಲದಲ್ಲಿ ಸೌಧ ಪಾಚಿ ಗಟ್ಟುವುದು ಸಾಮಾನ್ಯವಾಗಿದೆ. ಇದೇ ರೀತಿ ಬೇಜವಾಬ್ದಾರಿ ಮುಂದುವರೆದರೆ ಮುಂದೊಂದು ದಿನ ಸೌಧ ಸಂಪೂರ್ಣವಾಗಿ ಹಾಳಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಈ ಭಾಗದ ಹೋರಾಟಗಾರರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿವರ್ಷವೂ ಸುವರ್ಣಸೌಧ ನಿರ್ವಹಣೆಗೆ 2 ಕೋಟಿ ರೂ. ಹಣವನ್ನು ಸರ್ಕಾರ ಬಿಡುಗಡೆಗೊಳಿಸುತ್ತದೆ. ಈ ಹಣ ಬಳಸಿ ಲೋಕೋಪಯೋಗಿ ಇಲಾಖೆ ಸುವರ್ಣಸೌಧವನ್ನು ನಿರ್ವಹಣೆ ಮಾಡುತ್ತದೆ. ಆದರೆ, ನಿರ್ವಹಣೆ ಕೊರತೆಯಿಂದ ಸೌಧದ ಕಂಬಗಳು, ಮೆಟ್ಟಿಲುಗಳು, ಮೇಲ್ಛಾವಣಿ, ಹೊರಗಿನ ಗೋಡೆಗಳಿಗೆ ಸಂಪೂರ್ಣ ಕಪ್ಪೆ ಮಾಂಸಗಟ್ಟಿದ್ದು, ಕಟ್ಟಡ ಹಸಿರು ಬಣ್ಣಕ್ಕೆ ತಿರುಗುತ್ತಿದೆ. ಶ್ವೇತವರ್ಣದಿಂದ ಪಳ ಪಳ ಹೊಳೆಯುತ್ತಿದ್ದ ಸೌಧ ಪಾಚಿಗಟ್ಟಿದೆ. ಆದರೆ ಬೆಂಗಳೂರಿನ ವಿಧಾನಸೌಧ ಮಾತ್ರ ನಿತ್ಯವೂ ಹೊಳೆಯುತ್ತದೆ. ಅಲ್ಲಿ ಆಗುತ್ತಿರುವ ನಿರ್ವಹಣೆ ಬೆಳಗಾವಿಯಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಅಧಿವೇಶನಕ್ಕೆ 2 ತಿಂಗಳು ಮಾತ್ರ ಬಾಕಿ: ಚಳಿಗಾಲ ಅಧಿವೇಶನ ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ನಡೆಯುವ ಸಾಧ್ಯತೆಯಿದೆ. ಅಧಿವೇಶನಕ್ಕೆ ಎರಡು ತಿಂಗಳು ಮಾತ್ರ ಬಾಕಿ ಇದ್ದರೂ, ಬೆಳಗಾವಿಯ ಸುವರ್ಣ ವಿಧಾನಸೌಧದ ಸ್ವಚ್ಛತೆಗೆ ಮುಂದಾಗದ ಅಧಿಕಾರಿಗಳ ನಡೆ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಸುವರ್ಣ ಸೌಧ, ಉದ್ಯಾನ ನಿರ್ವಹಣೆಗೆ ಬಿಡುಗಡೆಯಾಗುವ ಹಣ ಏನಾಗುತ್ತಿದೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷ ಅಶೋಕ ಚಂದರಗಿ ಈಟಿವಿ ಭಾರತ ಜೊತೆಗೆ ಮಾತನಾಡಿ, "ಬೆಂಗಳೂರಿನ ವಿಧಾನಸೌಧಕ್ಕೆ ಸಮಾನಾಂತರವಾಗಿ ಎರಡನೇ ರಾಜಧಾನಿ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ಉಳಿಯುತ್ತದೆ ಅಂತಾ ನಾವು ಅಂದುಕೊಂಡಿದ್ದೆವು. ಆದರೆ, ಅದು ಹುಸಿಯಾಗಿದೆ. ಭಾರಿ ಮಳೆಯಿಂದ ಸೌಧ ಪಾಚಿಗಟ್ಟಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾದರೂ ಅಲ್ಲಿನ ವಿಧಾನಸೌಧ ಪಾಚಿಗಟ್ಟಿದ್ದು ಒಂದು ದಿನವೂ ನಾವು ನೋಡಿಲ್ಲ. ಬಿಳಿ ಶಿಲೆಯಲ್ಲಿ ಅದು ಕಂಗೊಳಿಸುತ್ತದೆ. ಆದರೆ, ಇಲ್ಲಿ ಕಟ್ಟಡ ನಿರ್ಮಿಸಲು ಬಳಸಿರುವ ಕಲ್ಲು ಮತ್ತು ಕಾಮಗಾರಿ ಕಳಪೆ ಆಗಿದೆಯೋ? ಎಂಬುದನ್ನು ಸ್ಪಷ್ಟಪಡಿಸಬೇಕು" ಎಂದು ಆಗ್ರಹಿಸಿದರು.
ಕಚೇರಿಗಳನ್ನು ಸ್ಥಳಾಂತರಿಸಿ: "ಸುವರ್ಣ ವಿಧಾನಸೌಧ ಸದ್ಬಳಕೆ ಆಗಬೇಕಾದರೆ ಬೆಂಗಳೂರಿನಲ್ಲಿರುವ ರಾಜ್ಯ ಮಟ್ಟದ ಕಚೇರಿಗಳು ಇಲ್ಲಿಗೆ ಸ್ಥಳಾಂತರ ಆಗಬೇಕು. ಆದರೆ, ಅದು ಬಿಟ್ಟು ಜಿಲ್ಲಾ ಮಟ್ಟದ 23 ಕಚೇರಿಗಳನ್ನು ಸ್ಥಳಾಂತರಿಸಿ ಜಿಲ್ಲಾ ಮಟ್ಟಕ್ಕೆ ಸೀಮಿತಗೊಳಿಸಿದ್ದಾರೆ. ಈ ಮೂಲಕ ರಾಜಕಾರಣಿಗಳು ಸೌಧದ ಮರ್ಯಾದೆ ತೆಗೆಯುತ್ತಿದ್ದಾರೆ. ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಜನರ ಜೊತೆ ಇವರು ಚೆಲ್ಲಾಟ ಆಡುತ್ತಿದ್ದಾರೆ. ವರ್ಷದಲ್ಲಿ ಒಂದು ದಿನ ಬಂದು ಅಧಿವೇಶನ ಮಾಡಿ ಹೋಗುವುದಲ್ಲ. ಇದು ಅಧಿವೇಶನಕ್ಕೆ ಸೀಮಿತ ಆಗಬಾರದು. ಕೂಡಲೇ ಸಭಾಪತಿ ಮತ್ತು ಸಭಾಧ್ಯಕ್ಷರು ಈ ಭಾಗದ ಜನರು ಮತ್ತು ಜನಪ್ರತಿನಿಧಿಗಳ ಒಂದು ಸಮಿತಿ ರಚಿಸಬೇಕು. ಯಾವ ಕಚೇರಿಗಳನ್ನು ಸ್ಥಳಾಂತರಿಸಬೇಕು ಎಂಬುದನ್ನು ಚರ್ಚಿಸಿ ನಿರ್ಧರಿಸಲಿ" ಎಂದು ಅಶೋಕ ಚಂದರಗಿ ಒತ್ತಾಯಿಸಿದರು.
ಜಿಲ್ಲಾಧಿಕಾರಿ ಹೇಳುವುದೇನು?: ಈಟಿವಿ ಭಾರತ ಪ್ರತಿನಿಧಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರನ್ನು ಸಂಪರ್ಕಿಸಿದಾಗ, ಸುವರ್ಣ ವಿಧಾನಸೌಧ ಸ್ವಚ್ಛತೆಗೆ ಗುತ್ತಿಗೆದಾರನಿಗೆ ಸೂಚಿಸಿದ್ದೇನೆ. ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ತೊಡಕಾಗಿದೆ. ಮಳೆ ನಿಂತ ಕೂಡಲೇ ಸ್ವಚ್ಛತೆ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಶಕ್ತಿ ಯೋಜನೆ ಸೇರಿ ಎಲ್ಲ ಗ್ಯಾರಂಟಿಗಳೂ ನಮ್ಮ ಸರ್ಕಾರ ಇರುವವರೆಗೂ ಇರಲಿವೆ: ಸಿಎಂ ಸಿದ್ದರಾಮಯ್ಯ - CM Siddaramaiah