ಬೆಳಗಾವಿ: ಬೀದಿ ನಾಯಿಗಳ ಕಾಟಕ್ಕೆ ಜಿಲ್ಲೆಯ ಜನ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಜಿಲ್ಲೆಯಲ್ಲಿ ನಾಯಿ ಕಡಿತಕ್ಕೆ ಒಳಗಾದವರ ಸಂಖ್ಯೆ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರದಿ ನೀಡಿದೆ.
ಕಳೆದ 16 ತಿಂಗಳಲ್ಲಿ ಒಟ್ಟು 44,417 ಜನರ ಮೇಲೆ ಬೀದಿ ನಾಯಿಗಳು ಡೆಡ್ಲಿ ಅಟ್ಯಾಕ್ ಮಾಡಿವೆ. 2023 ಜನವರಿಯಿಂದ ಡಿಸೆಂಬರ್‌ವರೆಗೆ 34,479 ನಾಯಿ ಕಡಿತ ಪ್ರಕರಣಗಳು ಬೆಳಕಿಗೆ ಬಂದಿವೆ. ಇನ್ನು 2024 ಜನವರಿಯಿಂದ ಏಪ್ರಿಲ್‌ವರೆಗೆ 9938 ಜನರಿಗೆ ನಾಯಿಗಳು ಕಚ್ಚಿ ಗಾಯಗೊಳಿಸಿವೆ. ಈ ಆಘಾತಕಾರಿ ಮಾಹಿತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಆರೋಗ್ಯ ಇಲಾಖೆಯಿಂದ ನಾಯಿ ಕಡಿಸಿಕೊಂಡವರಿಗೆ ಚಿಕಿತ್ಸೆ ನೀಡಬಹುದು. ಆದರೆ, ಬೀದಿ ನಾಯಿಗಳ ಹಾವಳಿ ತಡೆಗಟ್ಟುವುದು ಮಹಾನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಕ್ರಿಯವಾಗಿ ಕಾರ್ಯಾಚರಣೆ ಮಾಡಬೇಕಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದೇವೆ ಎಂದು ಹೇಳಿದ್ದಾರೆ.
ಮಕ್ಕಳು ಶಾಲೆಗೆ ಹೋಗುವಾಗ, ಆಟ ಆಡುವಾಗ, ಕೂಲಿ ಕಾರ್ಮಿಕರು ಕೆಲಸ ಮುಗಿಸಿ ಮನೆಗೆ ಮರಳುವಾಗ, ವಾಯು ವಿಹಾರಕ್ಕೆ ತೆರಳುವ ವಯೋವೃದ್ಧರನ್ನೇ ಗುರಿಯಾಗಿಸಿಕೊಂಡು ಬೀದಿ ನಾಯಿಗಳು ದಾಳಿ ಮಾಡುತ್ತಿರೋದು ಚಿಂತೆಗೀಡು ಮಾಡಿದೆ. ಕೆಲವೆಡೆ ಗುಂಪು ಗುಂಪಾಗಿ ಓಡಾಡುವ ನಾಯಿಗಳ ಕಂಡು ಜನ ಹೆದರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಮಹಾನಗರ ಪಾಲಿಕೆ, ಪುರಸಭೆ ಸೇರಿ ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಸ್ಥಿತಿಯಿದೆ. ಬೆಳಗಾವಿ ನಗರದಲ್ಲೇ ಅಂದಾಜು 15 ಸಾವಿರ ಬೀದಿ ನಾಯಿಗಳಿದ್ದು, ಬೆಳಗಾವಿ ಜಿಲ್ಲೆಯಲ್ಲಿ 77 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿವೆ.
ಎರಡು ವರ್ಷಗಳಿಂದ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದರೂ ಬೀದಿ ನಾಯಿಗಳ ನಿಯಂತ್ರಣಕ್ಕೆ ಮುಂದಾಗುತ್ತಿಲ್ಲ. ಅಲ್ಲದೇ ಬೀದಿ ನಾಯಿಗಳನ್ನು ನಿಯಂತ್ರಿಸುವಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಮಾಸಿಕ ಸಭೆಯಲ್ಲೂ ಸೂಚನೆ ನೀಡಲಾಗಿದೆ. ಆದರೂ ಬೀದಿ ನಾಯಿಗಳ ಹಾವಳಿ ನಿಯಂತ್ರಿಸದ ಅಧಿಕಾರಿಗಳಿಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ. ಬೀದಿ ನಾಯಿಗಳ ಹಾವಳಿ ನಿಯಂತ್ರಿಸದಿದ್ದರೆ ಹೈಕೋರ್ಟ್ ಮೊರೆ ಹೋಗುವುದಾಗಿ ಬೆಳಗಾವಿ ನ್ಯಾಯವಾದಿಗಳು ಜಿಲ್ಲಾಡಳಿತಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈಟಿವಿ ಭಾರತ ಜೊತೆಗೆ ಮಾತನಾಡಿದ ನ್ಯಾಯವಾದಿ ಅನ್ವರ್ ನದಾಫ್, ಕರ್ನಾಟಕ ಹೈಕೋರ್ಟ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಗತ್ಯಬಿದ್ದರೆ ಸ್ವಯಂ ರಕ್ಷಣೆ ದೃಷ್ಟಿಯಿಂದ ಬೀದಿನಾಯಿಗಳನ್ನು ಕೊಲ್ಲುವ ಹಕ್ಕುಗಳನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಿದೆ. ಆದರೆ, ಇವು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದ ಸ್ಥಳೀಯ ಸಂಸ್ಥೆಗಳಿಗೆ 15 ದಿನಗಳ ಕಾಲಾವಕಾಶ ನೀಡುತ್ತೇವೆ. ಅದಾದ ಬಳಿಕವೂ ಕ್ರಮ ಕೈಗೊಳ್ಳದಿದ್ದರೆ ಹೈಕೋರ್ಟ್ನಲ್ಲಿ ಇವರ ವಿರುದ್ಧ ಅರ್ಜಿ ಸಲ್ಲಿಸುತ್ತೇವೆ. ಮನುಷ್ಯನಿಗಿಂತ ಅಮೂಲ್ಯವಾದ ಪ್ರಾಣಿ ಮತ್ತೊಂದಿಲ್ಲ. ಮನುಷ್ಯರೇ ಇಲ್ಲ ಎಂದರೆ ಪ್ರಾಣಿಗಳನ್ನು ಸಾಕುವವರು ಯಾರು..? ಹಾಗಾಗಿ, ಮನುಷ್ಯನ ಜೀವಕ್ಕೆ ಕುತ್ತು ತರುವ ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡ ಮನ್ಸೂರ್ ಅಲಿಖಾನ್ ಮಾತನಾಡಿ, ದಿನೇ ದಿನೇ ಬೀದಿ ನಾಯಿಗಳ ಹಾವಳಿ ಬೆಳಗಾವಿಯಲ್ಲಿ ಹೆಚ್ಚಾಗುತ್ತಿದೆ. ಚಿಕ್ಕ ಮಕ್ಕಳು, ದೊಡ್ಡವರು ಎನ್ನದೇ ಸಿಕ್ಕ ಸಿಕ್ಕವರನ್ನೆಲ್ಲಾ ಕಚ್ಚುತ್ತಿವೆ. ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಹಾಗಾಗಿ, ಇನ್ಮುಂದೆ ನಾವೇ ನಾಯಿಗಳನ್ನು ಹಿಡಿದು ಪಾಲಿಕೆ ಆವರಣದಲ್ಲಿ ಬಿಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಒಟ್ಟಿನಲ್ಲಿ ಗಲ್ಲಿಗಳಲ್ಲಿ ಬೀದಿ ನಾಯಿಗಳು ಭಯ ಹುಟ್ಟಿಸುತ್ತಿವೆ. ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ನಾಯಿಗಳಿಗೆ ಇನ್ಮುಂದೆಯಾದ್ರೂ ಕಡಿವಾಣ ಹಾಕಿ, ಜನ ನೆಮ್ಮದಿಯಿಂದ ಓಡಾಡುವ ವ್ಯವಸ್ಥೆ ಮಾಡಲಿ ಎಂಬುದು ಎಲ್ಲರ ಒತ್ತಾಯವಾಗಿದೆ.
ಇದನ್ನೂ ಓದಿ: ಹೆಚ್ಚುತ್ತಿರುವ ನಾಯಿ ದಾಳಿ ಪ್ರಕರಣಗಳು: ರಕ್ಷಣೆಗೆ ವಹಿಸಿ ಈ ಎಲ್ಲ ಮುನ್ನೆಚ್ಚರಿಕೆ ಕ್ರಮಗಳು - Heavy cases of dog bites