ಬೆಳಗಾವಿ: ನಗರದ ಖಾಸಗಿ ಕಂಪನಿ ಖಾತೆಗೆ ಜಮೆಗೊಳಿಸಬೇಕಿದ್ದ 32.08 ಲಕ್ಷ ರೂ. ಲಪಟಾಯಿಸಿ, ತಮ್ಮ ಖಾತೆಗೆ ಜಮೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಮಾಳ ಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಪ್ರದೀಪ್ ರಾಮದುಲಾರೆ ಸಿಂಗ್(30), ಸಂಜಯಕುಮಾರ್ ಯಾಧವ್(43) ಹಾಗೂ ಬಿಹಾರದ ಕಮಲೇಶ್ ಯೋಗೇಂದ್ರ ಠಾಕೂರ್(49) ಬಂಧಿತ ಆರೋಪಿಗಳು.
ಬೆಳಗಾವಿಯ ಆಟೋ ನಗರದಲ್ಲಿರುವ ಟಿಸಿಐ ಕಂಪನಿಯಲ್ಲಿ ಆರೋಪಿಗಳಾದ ಪ್ರದೀಪ್ ಮತ್ತು ಕಮಲೇಶ್ ಕಾರ್ಯ ನಿರ್ವಹಿಸುತ್ತಿದ್ದರು. 2022ರ ಫೆ.22ರಿಂದ 2023ರ ಮಾ.31ರ ಅವಧಿಯಲ್ಲಿ ಪ್ರದೀಪ್ 32.08 ಲಕ್ಷ ರೂ. ಹಣವನ್ನು ಕಂಪನಿ ಖಾತೆ ಬದಲು, ತಮ್ಮ ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿದ್ದರು. ಈ ಕೃತ್ಯದಲ್ಲಿ ಇದೇ ಕಂಪನಿಯ ಬೆಳಗಾವಿ ಶಾಖೆಯ ಸಂಜಯಕುಮಾರ್, ಹೊಸಪೇಟೆ ಶಾಖೆಯ ಸೌರಭ ಮಿಶ್ರಾ ಮತ್ತು ಕಲಬುರಗಿ ಶಾಖೆಯ ದೇವೇಂದ್ರ ದಾಲಬೀರ ಕೂಡ ಸಹಾಯ ಮಾಡಿದ್ದರು. ಆ ಬಳಿಕ ಎಲ್ಲರೂ ತಲೆ ಮರೆಸಿಕೊಂಡಿದ್ದರು.
ಹಣ ವಂಚನೆ ಸಂಬಂಧ ಬೆಂಗಳೂರಿನ ಲವಕೇಶಕುಮಾರ್ ಲಕ್ಷ್ಮಿನಾರಾಯಣಸ್ವಾಮಿ ಸಾಹು 2024ರ ಏ.4ರಂದು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಗಳ ಪತ್ತೆಗಾಗಿ ಇನ್ಸ್ಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ಅವರು, ಸಬ್ ಇನ್ಸ್ಪೆಕ್ಟರ್ ಶ್ರೀಶೈಲ ಹುಳಗೇರಿ ಮತ್ತು ಶಿವಾಜಿ ಚವ್ಹಾಣ ಅವರನ್ನು ಒಳಗೊಂಡ ತಂಡ ರಚಿಸಿ, ಉತ್ತರಪ್ರದೇಶ ಮತ್ತು ಬಿಹಾರಗೆ ಕಳುಹಿಸಿ ಕೊಟ್ಟಿದ್ದರು. ಈ ತಂಡವು ಅಲ್ಲಿಂದ ಬೆಳಗಾವಿಗೆ ಮೂವರು ಆರೋಪಿಗಳನ್ನು ಗುರುವಾರ ಕರೆ ತಂದು, ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ.
ಸದ್ಯ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಅದೇ ರೀತಿ ಪರಾರಿಯಾಗಿರುವ ಇನ್ನಿಬ್ಬರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ.
ಇದನ್ನೂ ಓದಿ: ಮೈಸೂರು: ಪೊಲೀಸರ ಮಿಂಚಿನ ಕಾರ್ಯಾಚರಣೆ, ಮಕ್ಕಳ ಕಳ್ಳರ ಬಂಧನ - Child kidnap case