ಶಿರಸಿ: ಪರಿಷತ್ ಸದಸ್ಯ ಸಿಟಿ ರವಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ನಡುವೆ ನಡೆದಿದೆ ಎನ್ನಲಾದ ಸಂಘರ್ಷದ ಪ್ರಕರಣವನ್ನು ವಿಧಾನ ಪರಿಷತ್ತಿನ ನೀತಿ ನಿರೂಪಣಾ ಸಮಿತಿಗೆ ನೀಡಲಾಗಿದೆ. ಅವರು ವಿಡಿಯೋ ಸೇರಿದಂತೆ ಇತರ ದಾಖಲೆಗಳನ್ನು ಪರಿಶೀಲಿಸಿ ವರದಿ ನೀಡಿದ ಬಳಿಕ ಮುಂದಿನ ತಿರ್ಮಾನ ಕೈಗೊಳ್ಳಲಾಗುತ್ತದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಶಿರಸಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಷತ್ ಉಪ ಸಭಾಪತಿಗಳು ಆ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಅದರಲ್ಲಿ ಸಿಟಿ ರವಿಯೂ ಸದಸ್ಯರಾಗಿದ್ದರು. ಅವರನ್ನು ಈಗ ಹೊರಗೆ ಇಡಲಾಗಿದೆ. ಸಮಿತಿಯ ತಂಡ ಸದನದ ಆಡಿಯೋ, ವಿಡಿಯೋ ಹಾಗೂ ಇತರ ಸಾಕ್ಷ್ಯ ಪರಿಶೀಲನೆ ಮಾಡಲಿದ್ದಾರೆ. ಮಾಧ್ಯಮದವರೂ ಸಹ ವಿಡಿಯೋ ನೀಡಿದ್ದಾರೆ. ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅಲ್ಲಿಂದ ವರದಿ ಬಂದ ನಂತರದಲ್ಲಿ ಪ್ರಕರಣದ ಮುಂದಿನ ತಿರ್ಮಾನ ಕೈಗೊಳ್ಳಲಾಗುವುದು ಎಂದರು.
ದೂರು- ಪ್ರತಿದೂರು ದಾಖಲಾಗಿವೆ: ಮೊದಲಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಿಟಿ ರವಿ ವಿರುದ್ಧ ಅವಾಚ್ಯ ಪದ ಬಳಸಿದ ಕುರಿತು ದೂರು ದಾಖಲಿಸಿದ್ದರು. ಬಳಿಕ ಸಿಟಿ ರವಿಯವರೂ ಸಹ ಪ್ರತಿ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಈಗಾಗಲೇ ಸಮಿತಿಗೆ ಸತ್ಯಾಸತ್ಯತೆ ಪರಿಶೀಲನೆಗೆ ತಿಳಿಸಲಾಗಿದೆ. ಅಲ್ಲಿನ ವರದಿ ಆಧರಿಸಿ ಮುಂದಿನ ಕ್ರಮ ಆಗಲಿದೆ ಎಂದ ಹೊರಟ್ಟಿ, ಸಭಾಪತಿಗಳು ನ್ಯಾಯಾಧೀಶರ ಸ್ಥಾನದಲ್ಲಿ ಕುಳಿತುಕೊಂಡಂತೆ. ಅವರು ಪಕ್ಷಪಾತ ಮಾಡಬಾರದು. ಸಿಟಿ ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣದಲ್ಲಿ ನಾನು ತೆಗೆದುಕೊಂಡ ನಿರ್ಧಾರವನ್ನು ಬಿಹಾರದ ಶಾಸಕರ ಸಭೆಯಲ್ಲೂ ಶ್ಲಾಘಿಸಲಾಗಿದೆ. ನಿರ್ಧಾರವು ನೂರಕ್ಕೆ ನೂರರಷ್ಟು ಸರಿಯಿದೆ. ಯಾರೇ ನಿರ್ಧಾರ ತಪ್ಪು ಎಂದರೂ ಅದು ಅವರ ಅಭಿಪ್ರಾಯ ಎಂದು ಪ್ರತಿಕ್ರಿಯಿಸಿದರು.
ಇದೇನು ಖಾಯಂ ಕುರ್ಚಿಯಲ್ಲ: ಸಭಾಪತಿ ಎನ್ನುವುದು ಖಾಯಂ ಕುರ್ಚಿಯಲ್ಲ. ಮೂರು ಬಾರಿ ಸಭಾಪತಿಯಾಗಿದ್ದೇನೆ. ಈಗ ನಾಲ್ಕು ವರ್ಷಗಳಿಂದ ಸಭಾಪತಿಯಾಗಿದ್ದೇನೆ. ಸರ್ಕಾರಗಳು ಬದಲಾದಾಗ ಸಭಾಪತಿಗಳನ್ನು ಇಳಿಸುವುದು ಕೆಟ್ಟ ಸಂಪ್ರದಾಯ. ಅದು ನಮ್ಮ ರಾಜ್ಯದಲ್ಲೂ ರೂಡಿಯಲ್ಲಿದೆ. ಆದರೆ, ಇಲ್ಲಿಯವರೆಗೆ ನನ್ನ ಮೇಲೆ ಯಾವ ಪಕ್ಷದಿಂದಲೂ ಒಂದೇ ಒಂದು ಆರೋಪವೂ ಬಂದಿಲ್ಲ ಎಂದು ಕಾಂಗ್ರೆಸ್ನವರು ಸಭಾಪತಿ ಸ್ಥಾನದಿಂದ ಹೊರಟ್ಟಿ ಅವರನ್ನು ಇಳಿಸಬಹುದೇ ? ಎಂಬ ಪ್ರಶ್ನೆಗೆ ಉತ್ತರಿಸಿದರು.
ಇದನ್ನೂ ಓದಿ: ಹೊರಟ್ಟಿ ಕಾನೂನು ಚೌಕಟ್ಟಿನಲ್ಲಿ ತೀರ್ಪು ಕೊಡುತ್ತಾರೆ, ನಾವೂ ತನಿಖೆ ಮಾಡುತ್ತೇವೆ: ಜಿ.ಪರಮೇಶ್ವರ್ - MINISTER G PARAMESHWAR