ಬೆಳಗಾವಿ: ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ಮಂದಿರದಲ್ಲಿ ಇಂದು ಬಾಲರಾಮನ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ಶತಮಾನಗಳಿಂದ ಕೋಟ್ಯಂತರ ಭಕ್ತರು ಕಂಡಿದ್ದ ಕನಸು ಇದೀಗ ಸಾಕಾರಗೊಳ್ಳುತ್ತಿದೆ. ಇಡೀ ವಿಶ್ವದ ಚಿತ್ತ ಭಾರತದತ್ತ ನೆಟ್ಟಿದೆ. ಈ ಅಮೃತ ಘಳಿಗೆಯನ್ನು ಕಣ್ತುಂಬಿಕೊಳ್ಳಲು ಜನ ಕಾತುರರಾಗಿದ್ದಾರೆ. ಬೆಳಗಾವಿಯಂತೂ ಶ್ರೀರಾಮನನ್ನು ಸ್ವಾಗತಿಸಲು ಸಂಪೂರ್ಣ ಕೇಸರಿಮಯವಾಗಿ, ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದೆ.
ನಗರದ ಗಲ್ಲಿ, ಬೀದಿಗಳಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಕೇಸರಿ ಧ್ವಜಗಳು, ತೋರಣಗಳು ಹಾಗೂ ಶ್ರೀರಾಮನ ಬೃಹತ್ ಕಟೌಟ್ಗಳು ರಾರಾಜಿಸುತ್ತಿವೆ. ಅಲ್ಲಲ್ಲಿ ಪ್ರಭು ಶ್ರೀರಾಮನ ಕುರಿತ ಭಕ್ತಿ ಗೀತೆಗಳು ಮೊಳಗುತ್ತಿವೆ. ರಾಮ ಭಕ್ತರು, ವಿಶ್ವ ಹಿಂದೂ ಪರಿಷತ್, ಭಜರಂಗದಳ, ಹಿಂದೂ ಸಂಘಟನೆಗಳ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಹಬ್ಬ ಆಚರಿಸಲು ಸಿದ್ಧರಾಗಿದ್ದಾರೆ. ಜಿಲ್ಲೆಯಾದ್ಯಂತ ಇರುವ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಚವಾಟ್ ಗಲ್ಲಿ, ಬಡಕಲ್ ಗಲ್ಲಿ, ಶೆಟ್ಟಿ ಗಲ್ಲಿ, ಖಡಕ್ ಗಲ್ಲಿ, ಕಾಕತಿವೇಸ್ ಹೀಗೆ ನಗರದ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಕೇಸರಿ ಧ್ವಜಗಳು ಹಾರಾಡುತ್ತಿವೆ. ಎಲ್ಲಿ ನೋಡಿದರೂ ರಾಮಾಂಜನೇಯರ ಜಪಗಳೊಂದಿಗೆ, ಜೈ ಶ್ರೀರಾಮ್ ಘೋಷಣೆಗಳು ಸಾಮಾನ್ಯವಾಗಿವೆ. ಮನೆಗಳ ಮುಂದೆಯೂ ರಾಮನ ಭಾವಚಿತ್ರ ಅಳವಡಿಸಿ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಹಲವು ಪ್ರಮುಖ ವೃತ್ತಗಳಲ್ಲಿ ಶ್ರೀರಾಮನ ಚರಿತ್ರೆ ಸಾರುವ ದೃಶ್ಯಾವಳಿಗಳ ಪ್ರಸಾರಕ್ಕಾಗಿ ಬೃಹತ್ ಗಾತ್ರದ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ.
ಮೆಣಸಿ ಗಲ್ಲಿಯ ಕಲಾವಿದ ಮಹಾಂತೇಶ ಪುರಾಣಿಕ ಅವರು ತಮ್ಮ ಕುಂಚದಲ್ಲಿ ಕೇಸರಿ ಬಟ್ಟೆಗಳ ಮೇಲೆ ಶ್ರೀರಾಮನ ಮತ್ತು ಹನುಮನ ಭಾವಚಿತ್ರಗಳನ್ನು ಬಿಡಿಸಿದ್ದಾರೆ. ವಿವಿಧ ಭಾಷೆಗಳಲ್ಲಿ ಜೈ ಶ್ರೀರಾಮ್ ಸೇರಿದಂತೆ ಹಲವಾರು ಘೋಷವಾಕ್ಯಗಳನ್ನು ಬಿಡಿಸಿ ಗಮನ ಸೆಳೆಯುತ್ತಿದ್ದಾರೆ. ಬಹುತೇಕರು ಯಂತ್ರದ ಮೇಲೆಯೇ ರಾಮನ ಭಾವಚಿತ್ರ ಹಾಗೂ ಘೋಷವಾಕ್ಯಗಳನ್ನು ಮುದ್ರಿಸುತ್ತಿದ್ದರೆ, ಇವರು ಮಾತ್ರ ಇನ್ನೂ ಪೇಂಟ್ ಬ್ರಶ್ ಬಳಸಿ ಬರೆಯುತ್ತಿದ್ದು, ಅವರಿಂದ ತಯಾರಾದ ಧ್ವಜಗಳು, ಬೃಹತ್ ಗಾತ್ರದ ಕೇಸರಿ ಬಟ್ಟೆಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಯಂತ್ರದಿಂದ ತಯಾರಾಗುವ ಧ್ವಜಗಳಿಗಿಂತಲೂ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದು ರಾಮನಗಾಗಿ ತಮ್ಮದೊಂದು ಅಳಿಲು ಸೇವೆ ಎಂದು 'ಈಟಿವಿ ಭಾರತ' ಜೊತೆಗೆ ಮಾತನಾಡಿ ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬೆಣ್ಣೆನಗರಿಯಲ್ಲಿ ಶ್ರೀ ರಾಮನ ಶಿವ ಧನಸ್ಸು ರೂಪಕ ತಯಾರಿಸಿದ ಭಕ್ತ; ಸೆಲ್ಫಿಗೆ ಮುಗಿಬಿದ್ದ ಜನ