ಬೆಳಗಾವಿ: ಎಂಇಎಸ್ ಮುಖಂಡರಿಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ನೀತಿಪಾಠ ಮಾಡುವುದರ ಜೊತೆಗೆ ಯಾವುದೇ ಕಾರಣಕ್ಕೂ ಕರಾಳ ದಿನಾಚರಣೆಗೆ ಅನುಮತಿ ನೀಡಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಕನ್ನಡ ರಾಜ್ಯೋತ್ಸವಕ್ಕೆ ಪ್ರತಿಯಾಗಿ ಕರಾಳ ದಿನಾಚರಣೆಗೆ ಅವಕಾಶ ಕೋರಿ ಜಿಲ್ಲಾಧಿಕಾರಿ ಬಳಿ ಎಂಇಎಸ್ ಮುಖಂಡರು ಬಂದಿದ್ದರು. ಈ ವೇಳೆ ಜಿಲ್ಲಾಧಿಕಾರಿ ಕಡ್ಡಿ ಮುರಿದಂತೆ ಮಾತಾಡಿದ್ದು, ಜೊತೆಗೆ ಬುದ್ಧಿವಾದವನ್ನೂ ಹೇಳಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟಿಸುವ ಹಕ್ಕಿದೆ. ನವೆಂಬರ್ 1 ಬಿಟ್ಟು ಪರ್ಯಾಯ ದಿನ ಪ್ರತಿಭಟನೆ ಮಾಡಲು ಅವಕಾಶ ಕೊಡುತ್ತೇನೆ. ಆದರೆ, ಯಾವುದೇ ರೀತಿಯಲ್ಲಿ ಕರ್ನಾಟಕದ ಐಕ್ಯತೆಗೆ ಧಕ್ಕೆ ತರುವ ಹೋರಾಟ, ಪ್ರತಿಭಟನೆಗೆ ಅವಕಾಶವಿಲ್ಲ ಎಂದು ತಿಳಿಸಿದರು.
ನ.1ರಂದೇ ಕರಾಳ ದಿನಕ್ಕೆ ಅನುಮತಿ ನೀಡುವಂತೆ ಪಟ್ಟು: ಬೆಳಗಾವಿಯಲ್ಲಿ ಗಣೇಶೋತ್ಸವ, ಈದ್ ಮಿಲಾದ್ ಹಬ್ಬವನ್ನು ಸಾಮರಸ್ಯದಿಂದ ಆಚರಿಸಿದ್ದೇವೆ. ಹಾಗೆಯೇ ನೀವೂ ರಾಜ್ಯೋತ್ಸವ ದಿನ ಬಿಟ್ಟು ಬೇರೆ ದಿನ ಹೋರಾಟ ಮಾಡಬೇಕು ಎಂದ ಜಿಲ್ಲಾಧಿಕಾರಿಗಳ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಎಂಇಎಸ್ ಮುಖಂಡರು, ಕರ್ನಾಟಕ ರಾಜ್ಯೋತ್ಸವದ ಪೂರ್ವದಿಂದ ನಮ್ಮ ಹೋರಾಟವಿದೆ. ಹೀಗಾಗಿ ನವೆಂಬರ್ 1ರಂದೇ ಕರಾಳ ದಿನಕ್ಕೆ ಅನುಮತಿ ನೀಡುವಂತೆ ಪಟ್ಟುಹಿಡಿದರು.
ನಿಮ್ಮೆಲ್ಲರ ಭಾವನೆಗಳನ್ನು ನಾನು ಗೌರವಿಸುವೆ. ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವೆಲ್ಲ ಬದ್ಧ ಇರಬೇಕು. ಬೆಳಗಾವಿಯಲ್ಲಿ ಭಾಷಾ ಸಾಮರಸ್ಯ ಕಾಪಾಡುವುದು ಮುಖ್ಯ. ಪ್ರತಿ ರಾಜ್ಯೋತ್ಸವ ದಿನ ಬೆಳಗಾವಿ ಜಿಲ್ಲೆಯಲ್ಲಿ 2 ಸಾವಿರ ಕೇಸ್ ದಾಖಲಾಗುತ್ತವೆ. ನನಗೆ ಜಿಲ್ಲಾಧಿಕಾರಿಯಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯಿದೆ. ನಿಮ್ಮ ಮನವಿ ಸ್ವೀಕಾರ ಮಾಡಿದ್ದೇನೆ. ಆದರೆ, ಜಿಲ್ಲಾಧಿಕಾರಿಯಾಗಿ ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ನೀವು ಬದ್ಧರಾಗಿರಲೇಬೇಕು ಎಂದರು.
ಗಡಿ ವಿವಾದ ಸುಪ್ರೀಂ ಕೋರ್ಟ್ನಲ್ಲಿದೆ ಎಂದ ಎಂಇಎಸ್ ಮುಖಂಡರಿಗೆ, ಕಾನೂನು ಸುವ್ಯವಸ್ಥೆ ಹಾಳಾದರೆ ಸುಪ್ರೀಂ ಕೋರ್ಟ್ ನನ್ನನ್ನು ಕರೆಸುತ್ತದೆ ಎಂದು ಜಿಲ್ಲಾಧಿಕಾರಿಗಳು ಪ್ರತ್ಯುತ್ತರ ನೀಡಿದರು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ನ.1ರಂದು ನಾವೆಲ್ಲಾ ಹೆಮ್ಮೆಯಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸುವ ವೇಳೆ ಕರಾಳ ದಿನ ಆಚರಿಸಲು ಬಿಡುವುದಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಜಿಲ್ಲಾಡಳಿತದ ಜವಾಬ್ದಾರಿ. ಆದರೆ, ಶಾಂತಿಯುತ ಪ್ರತಿಭಟನೆಗೆ ಅನುಮತಿ ನೀಡುವಂತೆ ಎಂಇಎಸ್ ಮುಖಂಡರು ಕೇಳಿಕೊಂಡಿದ್ದಾರೆ. ಈ ಬಗ್ಗೆ ನಾವು ತೆಗೆದುಕೊಳ್ಳುವ ನಿರ್ಧಾರಕ್ಕೆ ನೀವು ಬದ್ಧ ಇರುವಂತೆ ತಿಳಿಸಿದ್ದೇವೆ ಎಂದರು.
ಇದನ್ನೂ ಓದಿ: ಮತ್ತೆ ಎಂಇಎಸ್ ಉದ್ಧಟತನ: ಏಳು ಬೇಡಿಕೆ ಈಡೇರಿಸುವಂತೆ ಮಹಾರಾಷ್ಟ್ರ ಮಂತ್ರಿಗೆ ಮನವಿ