ಬೆಳಗಾವಿ: ನೀತಿ ಸಂಹಿತೆ ಉಲ್ಲಂಘಿಸಿ ಅಂಗನವಾಡಿ ಕಾರ್ಯಕರ್ತೆಯರ ಜತೆಗೆ ಸಭೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಅಂಗನವಾಡಿ ಕಾರ್ಯಕರ್ತೆಯರ ಜತೆಗೆ ಸಭೆ ಮಾಡಿಲ್ಲ. ಕಾರ್ಯಕರ್ತೆಯರಿಗೆ ಇತ್ತೀಚೆಗೆ ಕೆಲಸದ ಒತ್ತಡ ಜಾಸ್ತಿ ಆಗುತ್ತಿದೆ. ಈಗ ಬಿಎಲ್ಒ ಆಗಿ ಕೆಲಸ ಮಾಡ್ತಿದ್ದಾರೆ. ಬಿಎಲ್ಒ ಆಗಲು ನಮಗೆ ತೊಂದರೆ ಆಗ್ತಿದೆ ಅಂತಾ ಹೇಳಲು ಬಂದಿದ್ದರು. ಆದರೆ, ಅವರಿಗೆ ಇಂದು ಬುದ್ಧಿ ಹೇಳಿ ಕೆಲಸ ಮಾಡುವಂತೆ ಸೂಚಿಸಿರುವುದಾಗಿ ಹೇಳಿದ್ರು.
ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ ಚುನಾವಣಾ ಅಧಿಕಾರಿಗಳು, ಪ್ಲೇಯಿಂಗ್ ಸ್ಕ್ವಾಡ್ ಸಿಬ್ಬಂದಿ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ಸಭೆ ನಡೆದ ಬಗ್ಗೆ ಸಾಕ್ಷಿಗಾಗಿ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಆಗಿದೆಯಾ ಅಥವಾ ಇಲ್ಲವಾ ಎಂಬ ಬಗ್ಗೆ ಪರಿಶೀಲಿಸುವುದಾಗಿ ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾಹಿತಿ ನೀಡಿದ್ದಾರೆ.
ಚುನಾವಣೆ ವೇಳೆ ದೂರು ನೀಡುವುದು ಸರ್ವೆ ಸಾಮಾನ್ಯ. ದೂರು ಕೊಡಲಿ, ಓರ್ವ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ನಾನು ನಿಯಮ ಉಲ್ಲಂಘಿಸಿಲ್ಲ. ನಾನು ದೇಶದ ಕಾನೂನಿಗೆ ಗೌರವ ಕೊಡುತ್ತೇನೆ. ನನಗೆ ಇದು ಐದನೇ ಚುನಾವಣೆ. ನನಗೆ ಚುನಾವಣೆ ಎದುರಿಸುವುದು ಹೇಗೆ ಎಂಬುದು ಗೊತ್ತು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಇಂದು ಸಂಜೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಣೆ ಆಗುವ ಮಾಹಿತಿ ಇದೆ. ಹೈಕಮಾಂಡ್ ತೀರ್ಮಾನವೇ ಅಂತಿಮ. ಕ್ಷೇತ್ರದಲ್ಲಿ ಪ್ರಚಾರ ಕೆಲಸ ಶುರು ಮಾಡಿ ಅಂತಾ ಹೇಳಿದ್ದು, ಆ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಈ ಬಾರಿ ಬೆಳಗಾವಿ ಲೋಕಸಭೆ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳುತ್ತೇವೆ. ಬೆಳಗಾವಿ, ಚಿಕ್ಕೋಡಿ, ಕೆನರಾ ಲೋಕಸಭೆ ಗೆಲ್ಲಲು ತಂತ್ರಗಾರಿಕೆ ಮಾಡಿಕೊಂಡು ಓಡಾಡುತ್ತಿದ್ದೇವೆ. ಬರಗಾಲದ ಸಂಕಷ್ಟದಲ್ಲೂ ಮಹಿಳೆಯರು ಖುಷಿಯಲ್ಲಿದ್ದಾರೆ. ಹಾಗಾಗಿ ಈ ಬಾರಿ ನಮ್ಮ ಕೈ ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಿಯಾಂಕಾ, ಮೃಣಾಲ್ ಸ್ಪರ್ಧೆ ಮಾಡ್ತೇನಿ ಅಂತಾ ಹೇಳಿರಲಿಲ್ಲ. ಜಿಲ್ಲೆಯ ಮುಖಂಡರ ಸಾಮೂಹಿಕ ನಿರ್ಧಾರ ಮತ್ತು ಒಪ್ಪಿಗೆ ಸೂಚಿಸಿದ್ದರಿಂದ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಸಚಿವೆ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದರು.
ಇದನ್ನೂಓದಿ:ಹಾವೇರಿ ಬಿಜೆಪಿ ಅಭ್ಯರ್ಥಿ ಬದಲಾವಣೆ ಬಗ್ಗೆ ಗೊತ್ತಿಲ್ಲ, ನನಗೆ ಬೆಳಗಾವಿ ಟಿಕೆಟ್ ಸಿಕ್ಕೇ ಸಿಗುತ್ತೆ: ಶೆಟ್ಟರ್