ಬೆಳಗಾವಿ: ಬೆಳಗಾವಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಇದೇ ಮೊದಲ ಬಾರಿ ಇಂದು ಬೆಳಗಾವಿಯಲ್ಲಿ ಮತ ಚಲಾಯಿಸಿದರು. ಇದಕ್ಕೂ ಮುನ್ನ ಶೆಟ್ಟರ್ ತಮ್ಮ ತವರು ಕ್ಷೇತ್ರ ಹುಬ್ಬಳ್ಳಿಯಲ್ಲೇ ಮತ ಚಲಾಯಿಸುತ್ತಿದ್ದರು. ಆದರೆ, ಬೆಳಗಾವಿ ಅಭ್ಯರ್ಥಿಯಾದ ಬಳಿಕ ತಮ್ಮ ಮತವನ್ನು ಅಲ್ಲಿಗೆ ವರ್ಗಾಯಿಸಿಕೊಂಡಿದ್ದಾರೆ.
ಸೊಸೆ ಶ್ರದ್ಧಾ ಶೆಟ್ಟರ್, ಸಂಸದೆ ಮಂಗಲ ಅಂಗಡಿ ಅವರ ಜೊತೆಗೆ ವಿಶ್ವೇಶ್ವರಯ್ಯ ನಗರದ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆ ಸಂಖ್ಯೆ 26ರ ಮತಗಟ್ಟೆಗೆ ಆಗಮಿಸಿದ ಶೆಟ್ಟರ್, ಸರತಿ ಸಾಲಿನಲ್ಲಿ ನಿಂತು ಮತ ಹಾಕಿದರು. ಮತಗಟ್ಟೆಯಿಂದ ಹೊರಬಂದ ಬಳಿಕ ವಿಜಯದ ಸಂಕೇತ ಪ್ರದರ್ಶಿಸಿದರು.
ಮತ ಹಾಕಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶೆಟ್ಟರ್, "ಅಧಿಕ ಸಂಖ್ಯೆಯಲ್ಲಿ ಜನರು ಆಗಮಿಸಿ ಮತ ಚಲಾಯಿಸುತ್ತಿದ್ದಾರೆ. ಮತದಾನದ ಮಹತ್ವದ ಬಗ್ಗೆ ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿದೆ. ಆದರೆ ಕೆಲ ಪಕ್ಷಗಳು ಕಳೆದ ಎರಡು ದಿನಗಳಿಂದ ಹಣ ಹಂಚುವುದು ಬಿಟ್ಟರೆ, ಮತದಾರರನ್ನು ಮನವೊಲಿಸುವ ಕೆಲಸ ಮಾಡಲಿಲ್ಲ. ಹಣದ ಹಂಚಿಕೆ ಮೇಲೆಯೇ ಗೆಲ್ಲುವ ಭ್ರಮೆಯಲ್ಲಿದ್ದಾರೆ. ಆದರೆ, ಮತದಾರರು ಅವರನ್ನು ತಿರಸ್ಕರಿಸಿ, ಸೂಕ್ತ ಉತ್ತರ ಕೊಡುತ್ತಾರೆ. ಹಣ ಮತ್ತು ಅಧಿಕಾರದ ಬಲದ ಮೇಲೆ ಪ್ರಜಾತಂತ್ರ ವ್ಯವಸ್ಥೆ ನಡೆಯುವುದಿಲ್ಲ" ಎಂದು ತಿರುಗೇಟು ಕೊಟ್ಟರು.
"ನಿಮ್ಮ ಸಾಧನೆ ಮತ್ತು ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಿಳಿಸಬೇಕಿತ್ತು. ಆದರೆ, ಸೋಲಿನ ಭೀತಿ ಮತ್ತು ಹತಾಶೆಯಿಂದ ಹಣ ಹಂಚಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಒಂದು ದೂರು ಕೊಟ್ಟಿದ್ದೇವೆ. ಸಂಬಂಧಿಸಿದ ಅಧಿಕಾರಿಗಳು ಗಂಭೀರ ಕ್ರಮ ತೆಗೆದುಕೊಳ್ಳಬೇಕಿದೆ" ಎಂದು ಶೆಟ್ಟರ್ ಆಗ್ರಹಿಸಿದರು.
"ಕಳೆದ ಒಂದು ತಿಂಗಳಿನಿಂದ ಬೆಳಗಾವಿಯಲ್ಲಿ ಪ್ರಚಾರ ಮಾಡುತ್ತಿದ್ದೇನೆ. ನಮಗೆ ದಿನದಿಂದ ದಿನಕ್ಕೆ ಬೆಂಬಲ ಹೆಚ್ಚಾಗುತ್ತಿದೆ. ಅಲ್ಲದೇ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗಬೇಕೆನ್ನುವ ಇಚ್ಛೆ ಜನರದ್ದು. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಜನರು ಆಗಮಿಸುತ್ತಿದ್ದಾರೆ. ಇನ್ನೂ ಜಿಲ್ಲೆಯಲ್ಲಿ ಬಿಸಿಲಿನ ಆರ್ಭಟ ಜೋರಾಗಿದೆ. ಹಾಗಾಗಿ, ಬೇಗ ಬೇಗನೇ ಆಗಮಿಸಿ ಮತ ಚಲಾಯಿಸಿ" ಎಂದು ಶೆಟ್ಟರ್ ಕೋರಿದರು.
ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಡಿಕೆಶಿ ಆಡಿಯೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, "ಆ ರೀತಿ ಆರೋಪ ಕೇಳಿ ಬಂದಿದೆ. ಆದರೆ, ಡಿಕೆಶಿ ಅದನ್ನು ಅಲ್ಲಗಳೆದಿದ್ದಾರೆ. ಈ ಪ್ರಕರಣದಲ್ಲಿ ಡಿಕೆಶಿ ಹೆಸರು ಮೊದಲಿನಿಂದಲೂ ಕೇಳಿ ಬರುತ್ತಿದೆ. ಎಸ್ಐಟಿ ತನಿಖೆಯಿಂದ ನ್ಯಾಯ ಸಿಗುವುದಿಲ್ಲ ಎಂದು ಜೆಡಿಎಸ್ ನಾಯಕರು ಹೇಳುತ್ತಿದ್ದಾರೆ. ಹಾಗಾಗಿ, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು. ಈ ಚುನಾವಣೆಗೂ, ಪ್ರಜ್ವಲ್ ರೇವಣ್ಣ ಪ್ರಕರಣ ಮತ್ತು ಡಿಕೆಶಿ ಆಡಿಯೋ ವೈರಲ್ ವಿಚಾರಗಳಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಯಾವುದೇ ಪರಿಣಾಮವೂ ಬೀರುವುದಿಲ್ಲ" ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ ವಿಚಾರಣಾಧೀನ ಕೈದಿ ಆತ್ಮಹತ್ಯೆ - Undertrial Prisoner Suicide
ಸಂಸದೆ ಮಂಗಲ ಅಂಗಡಿ ಮಾತನಾಡಿ, "ಎಲ್ಲೆಡೆ ಮತದಾನ ಚೆನ್ನಾಗಿ ನಡೆಯುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆ ಆರೂವರೆ ಸಮಯಕ್ಕೆ ಬಂದು ಜನರು ಸರತಿ ಸಾಲಿನಲ್ಲಿ ನಿಂತಿದ್ದರು ಎಂದು ಕಾರ್ಯಕರ್ತರು ತಿಳಿಸಿದ್ದಾರೆ. ನಮ್ಮ ಯಜಮಾನರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಮತ್ತು ಎರಡು ಬಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಶೆಟ್ಟರ್ ಅವರು ಬೆಳಗಾವಿಯಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹಾಗಾಗಿ, ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಮತದಾನ - Pralhad Joshi Casts Vote
ಶ್ರದ್ಧಾ ಶೆಟ್ಟರ್ ಮಾತನಾಡಿ, ಇಡೀ ಕ್ಷೇತ್ರದಲ್ಲಿ ಬಿಜೆಪಿಗೆ ಉತ್ತಮ ಸ್ಪಂದನೆಯಿದೆ. ಎಲ್ಲಾ ಚುನಾವಣೆಗಳನ್ನು ಹಣದ ಮೇಲೆ ಗೆಲ್ಲಲು ಆಗುವುದಿಲ್ಲ. ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂದು ಇಡೀ ದೇಶದ ಜನರು ಬಯಸಿದ್ದಾರೆ. ನಾವೂ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಇವೆಲ್ಲವೂ ವರ್ಕ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.