ಬೆಳಗಾವಿ: ನಿರಂತರ ಕಲಿಕೆ, ಕಠಿಣ ಪರಿಶ್ರಮವಿದ್ದರೆ ಏನಾದರೂ ಸಾಧಿಸಬಹುದು ಎಂಬುದನ್ನು ಇಲ್ಲೋರ್ವ ವಿದ್ಯಾರ್ಥಿ ಸಾಬೀತುಪಡಿಸಿದ್ದಾರೆ. ಪಿಜಿ ನೀಟ್ ಪರೀಕ್ಷೆಯಲ್ಲಿ ಇಡೀ ದೇಶಕ್ಕೆ 9ನೇ ರ್ಯಾಂಕ್ಗಳಿಸಿರುವ ಪ್ರತಿಭಾನ್ವಿತ ವಿದ್ಯಾರ್ಥಿಯ ಯಶೋಗಾಥೆ ಇದು.
ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್)ಯ ವೈದ್ಯಕೀಯ ವಿದ್ಯಾರ್ಥಿ ಡಾ.ಶರಣಪ್ಪ ಶೀನಪ್ಪನವರ ರಾಷ್ಟ್ರಮಟ್ಟದ ಪಿಜಿ ನೀಟ್ ಪರೀಕ್ಷೆಯಲ್ಲಿ 9ನೇ ರ‍್ಯಾಂಕ್ ಗಳಿಸಿದ್ದಾರೆ. ಮೂಲತಃ ಗದಗ ಜಿಲ್ಲೆಯ ನರಗುಂದ ನಿವಾಸಿಯಾದ ಇವರ ತಂದೆ ತುಳಸಪ್ಪ ಶಿಕ್ಷಕ, ತಾಯಿ ಶಶಿಕಲಾ ಗೃಹಿಣಿ.
ಅಷ್ಟೇನೂ ಆರ್ಥಿಕವಾಗಿ ಮುಂದುವರಿದ ಕುಟುಂಬ ಇವರದ್ದಲ್ಲ. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರೂ ತಮ್ಮ ಪ್ರತಿಭೆಯ ಮೂಲಕವೇ ಸಾಧನೆಯ ಶಿಖರ ಏರುತ್ತಿದ್ದಾರೆ.
ಬಿಮ್ಸ್‌ನಲ್ಲಿ ಸರ್ಕಾರಿ ಕೋಟಾದಡಿ ಸೀಟು ಗಿಟ್ಟಿಸಿಕೊಂಡಿದ್ದ ಶರಣಪ್ಪ 2022ರಲ್ಲಿ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ್ದು, ಬಳಿಕ ಇಲ್ಲಿಯೇ 1 ವರ್ಷ ಇಂಟರ್ನ್‌ಶಿಫ್ ಮುಗಿಸಿದ್ದಾರೆ. ಮುಂದೆ ಉನ್ನತ ಶಿಕ್ಷಣ ಪಡೆಯಬೇಕೆಂಬ ಮಹದಾಸೆಯೊಂದಿಗೆ ಪಿಜಿ ನೀಟ್ ಪರೀಕ್ಷೆ ಬರೆದಿದ್ದರು. ಇದೇ ಆಗಸ್ಟ್ 22ರಂದು ಫಲಿತಾಂಶ ಪ್ರಕಟವಾಗಿದ್ದು, ಶರಣಪ್ಪ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
'ಈಟಿವಿ ಭಾರತ' ಜೊತೆ ಮಾತನಾಡಿದ ಡಾ.ಶರಣಪ್ಪ ಶೀನಪ್ಪನವರ, "9ನೇ ರ‍್ಯಾಂಕ್ ಬಂದಿದ್ದೇನೆ ಎಂಬುದನ್ನು ಮೊದಲು ನಾನು ನಂಬಿರಲಿಲ್ಲ. ನನಗೆ ತುಂಬಾ ಸಂತೋಷವಾಗುತ್ತಿದೆ. ಇಷ್ಟು ದೊಡ್ಡ ಸಾಧನೆ ಮಾಡಿದ್ದಕ್ಕೆ ತಂದೆ-ತಾಯಿ ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ. ಇಡೀ ದೇಶವೇ ಗುರುತಿಸುವ ಸಾಧನೆ ಮಾಡಬೇಕೆಂದು ಸದಾಕಾಲ ಪ್ರೋತ್ಸಾಹಿಸುತ್ತಿದ್ದ ತಂದೆ ತಾಯಿ, ಬೆನ್ನುತಟ್ಟಿ ಹುರಿದುಂಬಿಸಿದ ಶಿಕ್ಷಕರು, ಕಠಿಣ ಸಂದರ್ಭದಲ್ಲಿ ಧೈರ್ಯ ತುಂಬಿದ ನನ್ನ ಸೀನಿಯರ್ಸ್ ಮತ್ತು ಜೂನಿಯರ್ಸ್‌ಗೆ ಈ ಸಾಧನೆಯನ್ನು ಅರ್ಪಿಸುತ್ತೇನೆ" ಎಂದರು.
ನಿತ್ಯ 8-10 ಗಂಟೆ ಓದು: ನಿತ್ಯವೂ 8-10 ಗಂಟೆ ಓದುತ್ತಿದ್ದೆ. ಪರೀಕ್ಷೆ ಸಮೀಪಿಸುತ್ತಿದ್ದಂತೆ 12 ಗಂಟೆ ಕಠಿಣ ಅಭ್ಯಾಸ ಮಾಡುತ್ತಿದ್ದೆ. ದೃಢ ಸಂಕಲ್ಪದೊಂದಿಗೆ ಓದಿನಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಶ್ರದ್ಧೆಯಿಂದ ಓದಿದರೆ ಯಾವುದೂ ಅಸಾಧ್ಯವಲ್ಲ ಎಂದು ಡಾ.ಶರಣಪ್ಪ ತಮ್ಮ ಸಾಧನೆಯ ಹಿಂದಿನ ಪರಿಶ್ರಮವನ್ನು ವಿವರಿಸಿದರು.
ರೆಡಿಯೋಲಾಜಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಬಯಕೆ: ಎಂಡಿ ಮೆಡಿಸಿನ್ ಅಥವಾ ರೆಡಿಯೋಲಾಜಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಬಯಸಿದ್ದೇನೆ. ದೆಹಲಿಯ ಪ್ರತಿಷ್ಠಿತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಾದ ವರ್ಧಮಾನ ಮಹಾವೀರ ಮೆಡಿಕಲ್ ಕಾಲೇಜು ಮತ್ತು ಸಬ್ದರ್ಜಂಗ್ ಆಸ್ಪತ್ರೆ ಅಥವಾ ರಾಮ ಮನೋಹರ ಲೋಹಿಯಾ ಆಸ್ಪತ್ರೆಯೊಂದರಲ್ಲಿ ಸ್ನಾತಕೋತ್ತರ ಅಧ್ಯಯನಕ್ಕೆ ಪ್ರವೇಶ ಪಡೆಯುವ ಇಚ್ಛೆ ಹೊಂದಿದ್ದೇನೆ ಎಂದು ಅವರು ತಿಳಿಸಿದರು.
ಸಮಾಜಕ್ಕೆ ಉತ್ತಮ ವೈದ್ಯನಾಗುವ ಮಹದಾಸೆ ಹೊಂದಿದ್ದೇನೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ವೈದ್ಯರ ಅವಶ್ಯಕತೆಯಿದ್ದು, ಇಲ್ಲಿಯ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುತ್ತೇನೆ. ನಮ್ಮ ಗುರಿ ಏನೇ ಇರಲಿ. ಆದರೆ, ಕೊನೆಗೆ ನಾವೆಲ್ಲ ದೇಶಕ್ಕೆ ಉತ್ತಮ ಪ್ರಜೆಯಾಗಬೇಕು ಎಂದು ಡಾ.ಶರಣಪ್ಪ ಹೇಳಿದರು.
ಸರ್ಕಾರಿ ಶಾಲೆ, ಕನ್ನಡ ಮಾಧ್ಯಮ ಎಂಬ ಕೀಳರಿಮೆ ಬೇಡ: ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೇನೆ, ಕನ್ನಡ ಮಾಧ್ಯಮ ಎಂದು ಯಾರೂ ಕೀಳರಿಮೆ ಭಾವನೆ ಇಟ್ಟುಕೊಳ್ಳಬಾರದು. ನಾನು 1ರಿಂದ 10ನೇ ತರಗತಿ ವ್ಯಾಸಂಗ ಮಾಡಿದ್ದು ನರಗುಂದ ಸರ್ಕಾರಿ ಶಾಲೆಯಲ್ಲಿ. ಅದರಲ್ಲೂ ಕನ್ನಡ ಮಾಧ್ಯಮದಲ್ಲೇ ಓದಿದ್ದೇನೆ. ಹಾಗಾಗಿ, ಸಾಧನೆ ಮಾಡಲು ಹೊರಟವರಿಗೆ ಇದ್ಯಾವುದು ಅಡ್ಡಿಯಾಗುವುದಿಲ್ಲ. ಸರ್ಕಾರಿ ಶಾಲೆಯಲ್ಲಿ ಓದಿದವರೂ ಕೂಡ ದೊಡ್ಡ ಸಾಧನೆ ಮಾಡಿದ್ದಾರೆ. ಇದೇ ನನಗೆ ಪ್ರೇರಣೆ ಎಂದರು.
ಡಾ.ಶರಣಪ್ಪ ಅವರ ತಂದೆ-ತಾಯಿಗೆ ಮೂವರು ಮಕ್ಕಳು. ಪುತ್ರಿ ಡಾ.ಸೌಮ್ಯ ಸ್ತ್ರೀರೋಗ ವಿಭಾಗದಲ್ಲಿ ಸ್ನಾತಕೋತ್ತರ ಪಡೆಯುತ್ತಿದ್ದರೆ, ಕಿರಿಯ ಪುತ್ರ ನಿರಂಜನ ಅಂತಿಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಈಗ ಡಾ.ಶರಣಪ್ಪ ಕೂಡ ಪಿಜಿ ನೀಟ್ ಪರೀಕ್ಷೆಯಲ್ಲಿ 9ನೇ ರ್ಯಾಂಕ್ಗಳಿಸಿದ್ದಾರೆ.
ಅತ್ಯಂತ ಕಠಿಣವಾಗಿರುವ ಪಿಜಿ ನೀಟ್ ಪರೀಕ್ಷೆಯಲ್ಲಿ 9ನೇ ರ್ಯಾಂಕ್ಗಳಿಸಿರುವ ನಮ್ಮ ವಿದ್ಯಾರ್ಥಿ ಡಾ. ಶರಣಪ್ಪ ಶೀನಪ್ಪನವರ ನಮ್ಮ ಹೆಮ್ಮೆ. ಇದು ಬಿಮ್ಸ್ ಸಾಧನೆಗೆ ಹಿಡಿದ ಕೈಗನ್ನಡಿ. ಇಲ್ಲಿಯ ಶಿಕ್ಷಣ ವ್ಯವಸ್ಥೆ, ಶಿಕ್ಷಕರು ಹಾಗೂ ಅವರ ಶ್ರಮದ ಅನಾವರಣಕ್ಕೆ ಈ ಸಾಧನೆ ಸಾಕ್ಷಿ. ಸಂಸ್ಥೆಯ ಎಲ್ಲ ಸಿಬ್ಬಂದಿಯ ಪರವಾಗಿ ವಿದ್ಯಾರ್ಥಿಗೆ ಅಭಿನಂದನೆಗಳು. ಈ ಮೂಲಕ ಸಮಾಜದಲ್ಲಿ ಒಳ್ಳೆಯ ವೈದ್ಯನಾಗಿ ತನ್ನ ಸೇವೆಯನ್ನು ಸಲ್ಲಿಸಲಿ ಎಂದು ಬಿಮ್ಸ್ ನಿರ್ದೇಶಕ ಡಾ.ಅಶೋಕ ಕುಮಾರ ಶೆಟ್ಟಿ ಸಂತಸ ವ್ಯಕ್ತಪಡಿಸಿದರು.