ರಾಮನಗರ: ಕೃಷಿ ಕೂಡ ಈಗ ಒಂದು ಉದ್ಯಮವೇ. ಉದ್ಯೋಗಿಗಳಾಗುವುದಕ್ಕಿಂತ ಹತ್ತಾರು ಜನರಿಗೆ ಉದ್ಯೋಗ ನೀಡುವ ಉದ್ದಿಮೆದಾರರಾಗುವುದು ನಿಮ್ಮ ಗುರಿಯಾಗಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಕನಕಪುರದ ಕರಿಯಪ್ಪ ಕೃಷಿ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ನಮ್ಮ ಜಿಲ್ಲೆ ಹಾಲು ಹಾಗೂ ರೇಷ್ಮೆ ಉತ್ಪಾದನೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಇದರ ಜತೆಗೆ ಬೆಂಗಳೂರಿನ ಸುತ್ತಮುತ್ತಲ ಪ್ರದೇಶದಲ್ಲಿ ಹೂ ಬೆಳೆ ಬೆಳೆಯುವುದರಿಂದ ಆರ್ಥಿಕವಾಗಿ ಪ್ರಗತಿ ಸಾಧಿಸಬಹುದು. ಕೇವಲ ಇಂಜಿನಿಯರ್ ಆಗುವುದಷ್ಟೇ ನಿಮ್ಮ ಗುರಿಯಾಗುವುದು ಬೇಡ. ಹತ್ತಾರು ಜನರಿಗೆ ಉದ್ಯೋಗ ಸೃಷ್ಟಿಸುವಂತೆ ನೀವು ಬೆಳೆಯಬೇಕು. ಸ್ವಯಂ ಉದ್ಯೋಗವೇ ಶ್ರೇಷ್ಠ ಉದ್ಯೋಗವಾಗಿದೆ. ಆ ನಿಟ್ಟಿನಲ್ಲಿ ನೀವು ಗಮನಹರಿಸಿ ಎಂದರು.
ಕನಕಪುರದಲ್ಲಿ ನಾವು ಸ್ಥಾಪಿಸಿರುವ ಹಾಲಿನ ಡೈರಿ ದೇಶಕ್ಕೆ ಮಾದರಿ ಸಂಸ್ಥೆ. ಅಮೂಲ್ ಜತೆಗೆ ಸ್ಪರ್ಧೆ ಮಾಡುವ ಸಂಸ್ಥೆ. ನಂದಿನಿ ತುಪ್ಪ ತಿರುಪತಿ ಲಡ್ಡು ಪ್ರಸಾದಕ್ಕೆ ರವಾನೆಯಾಗುತ್ತಿದೆ. ನಮ್ಮ ತಾಲೂಕು ಸಿಲ್ಕ್ ಹಾಗೂ ಮಿಲ್ಕ್ ಉತ್ಪಾದನೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಬೆಂಗಳೂರಿನಿಂದ ರಾಜೀವ್ ಗಾಂಧಿ ವಿವಿಯನ್ನು ಬೆಂಗಳೂರು ದಕ್ಷಿಣಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ನಾವೇ ಅವಕಾಶಗಳನ್ನು ಹುಡುಕಿಕೊಳ್ಳಬೇಕು ಎಂದು ಇಂದಿರಾ ಗಾಂಧಿ ಅವರು ಹೇಳಿದ್ದಾರೆ. ನಾವು ಅವಕಾಶಗಳನ್ನು ಸೃಷ್ಟಿಸಬೇಕು. ಈಗಿನ ಕಾಲದಲ್ಲಿ ಮಕ್ಕಳು ತಮ್ಮ ಕೈಯಲ್ಲಿರುವ ಮೊಬೈಲ್ನಲ್ಲಿ ವಿಶ್ವದ ಮಾಹಿತಿ ಹೊಂದಿದ್ದಾರೆ ಎಂದು ಹೇಳಿದರು.
ಇಡೀ ಕಾರ್ಯಕ್ರಮವನ್ನು ಮಕ್ಕಳೇ ನಡೆಸಬೇಕು: ಈಗಿನ ಕಾಲದಲ್ಲಿ ಯಾವುದೇ ಶಿಕ್ಷಕರು ತಾವು ಮಕ್ಕಳಿಗಿಂತ ಬುದ್ಧಿವಂತರು ಎಂದು ಭಾವಿಸಿದರೆ ಅದು ತಪ್ಪು. ಇನ್ನು ಮುಂದೆ ಶಾಲಾ ಕಾಲೇಜುಗಳಲ್ಲಿ ಯಾವುದೇ ಕಾರ್ಯಕ್ರಮವಾದರೂ ಶಿಕ್ಷಕರು ವೇದಿಕೆ ಮೇಲೆ ಇರಬಾರದು. ಇಡೀ ಕಾರ್ಯಕ್ರಮವನ್ನು ಮಕ್ಕಳೇ ನಡೆಸಬೇಕು. ಅವರೇ ಸ್ವಾಗತ ಭಾಷಣ ಮಾಡಬೇಕು. ಇದರಿಂದ ಅವರಲ್ಲಿನ ಪ್ರತಿಭೆ ಅನಾವರಣವಾಗುತ್ತದೆ. ಅವರಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ. ನಾಯಕರನ್ನು ಬೆಳೆಸುವವನೇ ನಿಜವಾದ ನಾಯಕ ಎಂದರು.
ನಾನು ಎಲ್ಲೇ ಹೋದರೂ ಮಕ್ಕಳಿಂದಲೇ ಕಾರ್ಯಕ್ರಮ ಮಾಡಿಸುವಂತೆ ತಿಳಿಸಿದ್ದೇನೆ. ಮಕ್ಕಳ ದಿನಾಚರಣೆಯಂದು ವಿಧಾನಸೌಧದಲ್ಲಿ ಸಂವಾದ ಕಾರ್ಯಕ್ರಮ ಮಾಡಿದ್ದೆ. ಆಗ ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ಸರ್ಕಾರವೇ ಅಚ್ಚರಿಪಟ್ಟಿತು. ನೀವು ಮಹಿಳೆಯರಿಗೆ ಮಾತ್ರ ಉಚಿತ ಬಸ್ ಪ್ರಯಾಣ ನೀಡಿದ್ದೀರಿ. ಹೀಗಾಗಿ ನಮ್ಮ ತಾಯಿ ಎಲ್ಲಿಗೆ ಹೋದರೂ ನನ್ನ ಸಹೋದರಿಯರನ್ನು ಕರೆದುಕೊಂಡು ಹೋಗುತ್ತಾರೆ. ನನ್ನನ್ನು ಮನೆಯಲ್ಲೇ ಬಿಟ್ಟು ಹೋಗುತ್ತಾರೆ. ನಮ್ಮ ಕಥೆ ಏನು ಎಂದು ಕೇಳಿದ. ಆತ ಕೇಳಿದ್ದರಲಿ ಯಾವುದೇ ತಪ್ಪಿಲ್ಲ. ಈಗಿನ ಮಕ್ಕಳ ಆಲೋಚನಾ ಶಕ್ತಿಗೆ ಆತನ ಪ್ರಶ್ನೆ ಸಾಕ್ಷಿಯಾಗಿತ್ತು ಎಂದು ಹೇಳಿದರು.
ನರೇಗಾ ಯೋಜನೆ ಮೂಲಕ ನಿಮ್ಮ ಜಮೀನಿನಲ್ಲಿ ನೀವು ಕೆಲಸ ಮಾಡಿಕೊಳ್ಳಲು, ಕೊಟ್ಟಿಗೆ, ಕುರಿ, ಕೋಳಿ ಶೆಡ್ ಕಟ್ಟಿಕೊಳ್ಳಲು ಅನುದಾನ ನೀಡಲಾಗುತ್ತದೆ. ಇವುಗಳನ್ನು ನೀವು ಬಳಸಿಕೊಳ್ಳಬೇಕು. ಮಹಾತ್ಮ ಗಾಂಧಿ ಅವರು ದೇಶದ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಲು 1924ರಲ್ಲಿ ಕಾಂಗ್ರೆಸ್ ಅಧಿವೇಶನದಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಶತಮಾನೋತ್ಸವ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಗಾಂಧಿ ಅವರ ತತ್ವ ಆದರ್ಶ ಪಾಲಿಸುತ್ತಿದ್ದ ಕರಿಯಪ್ಪನವರ ಹೆಸರಲ್ಲಿ ಕೃಷಿ ಕಾಲೇಜು ಆರಂಭವಾಗುತ್ತಿರುವುದು ಸಂತೋಷವಾಗಿದೆ ಎಂದರು.
ಇದನ್ನೂ ಓದಿ: ಯುವನಿಧಿ ಫಲಾನುಭವಿಗಳ ಉದ್ಯೋಗ ಸ್ಥಿತಿಯ ದತ್ತಾಂಶ ಹಂಚಲು EPFO ನಿರಾಕರಣೆ: ರಾಜ್ಯ ಸರ್ಕಾರಕ್ಕೆ ತಲೆನೋವು