ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪಾಲಿಕೆಯಿಂದ ಶುಭ ಸುದ್ದಿ ಸಿಕ್ಕಿದ್ದು, ಅವರುಗಳ ಶೈಕ್ಷಣಿಕ ಪ್ರವಾಸ, ವಾರ್ಷಿಕೋತ್ಸವ, ಸಾಮಗ್ರಿಗಳು ಸೇರಿದಂತೆ ಇತರ ಖರ್ಚು ವೆಚ್ಚಕ್ಕೆ ಹಣ ಬಿಡುಗಡೆ ಮಾಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲಾ, ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 8 ರಿಂದ 10 ನೇ ತರಗತಿ, ದ್ವಿತೀಯ ಪಿಯುಸಿ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ 2023-24ನೇ ಸಾಲಿನ ಶೈಕ್ಷಣಿಕ ಪ್ರವಾಸ, ಶಾಲಾ ಕಾಲೇಜುಗಳ ವಾರ್ಷಿಕೋತ್ಸವ, ಪ್ರಶ್ನೆ ಪತ್ರಿಕೆ ಮುದ್ರಣಕ್ಕೆ ತಗುಲುವ ವೆಚ್ಚ ಸೇರಿದಂತೆ ಹಲವು ಖರ್ಚು ವೆಚ್ಚವನ್ನು ಪಾಲಿಕೆಯ ವತಿಯಿಂದ ಈಗಾಗಲೇ ಶಾಲಾ ಕಾಲೇಜುಗಳಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬ್ಯಾಂಕ್ ಖಾತೆಗೆ ಬಿಬಿಎಂಪಿ ವಿಶೇಷ ಆಯುಕ್ತೆ (ಶಿಕ್ಷಣ ಇಲಾಖೆ) ಪ್ರೀತಿ ಗೆಹ್ಲೋಟ್ ಹಣ ವರ್ಗಾಯಿಸಿದ್ದಾರೆ.
ಬಿಬಿಎಂಪಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಶಾಲಾ ಕಾಲೇಜು ಶೈಕ್ಷಣಿಕ ಪ್ರವಾಸ, ವಾರ್ಷಿಕೋತ್ಸವ, ಸಾಮಗ್ರಿಗಳು ಸೇರಿದಂತೆ ಇತರ ವೆಚ್ಚಗಳಿಗೆ ಹಣ ಬಿಡುಗಡೆ ಮಾಡಿದ್ದಾರೆ. ಶಾಲಾ ಶೈಕ್ಷಣಿಕ ಪ್ರವಾಸ ಸೇರಿದಂತೆ ಒಟ್ಟು 1,83,81,820 ರೂಪಾಯಿ ಹಣ ಬಿಡುಗಡೆಯಾಗಿದೆ. ಇಂದಿನಿಂದ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸವನ್ನು ಎರಡು ದಿನದ ಮಟ್ಟಿಗೆ ಹೋಗಿ ಬರಲು ಪ್ರಾಂಶುಪಾಲರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಸದ ನಿಯಮಗಳು: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸಕ್ಕೆ ತೆರಳುವ ಮೂರು ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸಿ ಶಿಕ್ಷಣ ಇಲಾಖೆ ವಿಶೇಷ ಆಯುಕ್ತರಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ವಿದ್ಯಾರ್ಥಿನಿಯರು ಹೋಗುವ ಮಹಿಳಾ ಶಿಕ್ಷಕಿ ಅಥವಾ ಉಪನ್ಯಾಸಕಿಯರು ಭಾಗವಹಿಸಬೇಕು. ಶಿಕ್ಷಕರ ತಂಡಗಳನ್ನು ರಚಿಸಬೇಕು ಹಾಗೂ ನೀರಿನ ಸ್ಥಳಗಳಲ್ಲಿ ಎಚ್ಚರಿಕೆ ವಹಿಸಬೇಕು. ನಿಗದಿತ ಸಮಯದೊಳಗೆ ತಮ್ಮ ಪ್ರವಾಸ ಮುಗಿಸಬೇಕು ಹಾಗೂ ಪೋಷಕರಿಂದ ಒಪ್ಪಿಗೆ ಪಡೆದ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಬೇಕು ಎನ್ನುವ ಕೆಲ ನಿಯಮಗಳನ್ನು ಜಾರಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹಣ ನಿಗದಿ: ಪ್ರವಾಸಕ್ಕಾಗಿ ಪ್ರಾಥಮಿಕ ಶಾಲೆಯ ತಲಾ ಒಬ್ಬ ವಿದ್ಯಾರ್ಥಿಗೆ 1,000 ರೂಪಾಯಿ ಹಣ ನಿಗದಿ ಮಾಡಲಾಗಿದೆ, ಪ್ರೌಢಶಾಲೆಯಲ್ಲಿ ಓದುತ್ತಿರುವುದು 1200 ರೂ. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ 1500 ರೂ. ಹಾಗೂ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ 1500 ರೂ. ಹಣ ನಿಗದಿಗೊಳಿಸಲಾಗಿದೆ.
ಇದನ್ನೂ ಓದಿ: ಒಕ್ಕಲಿಗರಿಗೆ ಮೀಸಲಾತಿ ಕಡಿಮೆ ಮಾಡಿ ಮುಸ್ಲಿಮರಿಗೆ ಕೊಟ್ಟಿದ್ದು ನಾನು: ಹೆಚ್ ಡಿ ದೇವೇಗೌಡ