ಬೆಂಗಳೂರು: ನಗರದ ಪುರಭವನದಲ್ಲಿ ನಾಳೆ ಬೆಳಗ್ಗೆ 10.30ಕ್ಕೆ ಬಿಬಿಎಂಪಿ ಬಜೆಟ್ ಮಂಡನೆಯಾಗಲಿದೆ. ಸತತ ನಾಲ್ಕನೇ ಬಾರಿಯೂ ಅಧಿಕಾರಿಗಳೇ ಆಯವ್ಯಯ ಮಂಡಿಸಲಿದ್ದಾರೆ.
ಕಳೆದ ಮೂರು ಬಾರಿಯೂ ಬಿಬಿಎಂಪಿ ಹಣಕಾಸು ವಿಶೇಷ ಆಯುಕ್ತರು ಬಜೆಟ್ ಮಂಡಿಸಿದ್ದರು. ಮಾರ್ಚ್ ಮೊದಲ ವಾರದಲ್ಲಿ ಲೋಕಸಭೆ ಚುನಾವಣೆಯ ವೇಳಾಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿರುವುದರಿಂದ ನೀತಿಸಂಹಿತೆ ಜಾರಿಯಾದರೆ, ಬೇರೆಲ್ಲಾ ಸರ್ಕಾರಿ ಕಾರ್ಯಗಳು ವಿಳಂಬವಾಗುವ ಸಾಧ್ಯತೆಯಿರುವುದರಿಂದ ಬಜೆಟ್ ಮಂಡನೆಯಾಗಲಿದೆ. ಕಳೆದ ಸಾಲಿನಲ್ಲಿ 2023-24ನೇ ಸಾಲಿನಲ್ಲಿ 11,158 ಕೋಟಿ ರೂಪಾಯಿ ಆದಾಯ ಬರುವ ಅಂದಾಜಿನಂತೆ 11,157 ಕೋಟಿ ರುಪಾಯಿ ವೆಚ್ಚದ ಯೋಜನೆಗಳನ್ನು ಘೋಷಿಸಲಾಗಿತ್ತು.
ಈ ವರ್ಷ ಅತ್ಯಧಿಕ ಆದಾಯ ನಿರೀಕ್ಷೆಯ ಹಿನ್ನಲೆ ಬಜೆಟ್ ಗಾತ್ರವನ್ನು 12 ಸಾವಿರ ಕೋಟಿಯಿಂದ 13 ಸಾವಿರ ಕೋಟಿ ರೂಪಾಯಿಗೆ ಏರಿಕೆ ಮಾಡಲಾಗಿದೆ. ಹಸಿರು ಬೆಂಗಳೂರು, ರಸ್ತೆ ಅಭಿವೃದ್ಧಿಯಂತಹ ಕೆಲವು ಯೋಜನೆಗಳಿಗೆ ಅನುದಾನ ಘೋಷಣೆ ಆಗಲಿದೆ. ಮಳೆಗಾಲದಲ್ಲಿ ತೊಂದರೆ ಮಾಡುತ್ತಿರುವ ರಸ್ತೆ ಅಂಡರ್ಪಾಸ್ಗಳ ಸುಧಾರಣೆಗೆ ಹಣ ಹಂಚಿಕೆ ನಿರೀಕ್ಷೆ ಮಾಡಲಾಗಿದೆ. ಇದರ ಜತೆಗೆ ಸರ್ಕಾರದ ಬ್ರಾಂಡ್ ಬೆಂಗಳೂರು ಯೋಜನೆಗೆ 1500 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಅಂದಾಜಿಸಲಾಗಿದೆ.
ಬಜೆಟ್‌ನಲ್ಲಿ ನೀಡಬಹುದಾದ ಅನುದಾನಗಳು:
- ಇಂದಿರಾ ಕ್ಯಾಂಟೀನ್ಗೆ 200 ಕೋಟಿ ಅನುದಾನ
- ವಸತಿ ಯೋಜನೆಯಡಿ ಮಹಿಳೆಯರಿಗೆ ಹಾಸ್ಟೆಲ್ ನಿರ್ಮಾಣ
- ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಪಾಲಿಕೆಯಿಂದ ಎರಡು ಆ್ಯಂಬುಲೆನ್ಸ್
- ಬಿ ಖಾತಾ ಆಸ್ತಿಗಳಿಗೆ ಎ ಖಾತಾ ಭಾಗ್ಯ
- ಪ್ರವಾಹ ತಡೆಗೆ ಚರಂಡಿ ಅಭಿವೃದ್ಧಿಗಾಗಿ ಅನುದಾನ, ಕೆರೆಗಳಿಗೆ ತಡೆಗೋಡೆ, ಹೈಡೆನ್ಸಿಟಿ ಕಾರಿಡಾರ್ ಅಭಿವೃದ್ಧಿಗೆ ಅನುದಾನ
- ಪ್ರಮುಖ 74 ಜಂಕ್ಷನ್‌ಗಳ ಅಭಿವೃದ್ಧಿ
- ಟಿನ್ ಫ್ಯಾಕ್ಟರಿಯಿಂದ ಮೇಡಹಳ್ಳಿಯವರೆಗೆ 5 ಕಿ ಮೀ ಎಲಿವೇಟೆಡ್ ರಸ್ತೆ, ಪಾಲಿಕೆ ವ್ಯಾಪ್ತಿಯ 110 ಗ್ರಾಮಗಳಲ್ಲಿ ದುರಸ್ತಿಯಲ್ಲಿರುವ ರಸ್ತೆಗಳ ಪುನರ್‌ನಿರ್ಮಾಣ
- ಪ್ರತಿ ವಾರ್ಡ್‌ಗೆ ಕುಡಿಯುವ ನೀರಿಗೆ ಹೆಚ್ಚಿನ ಅನುದಾನ
- ಪ್ರತಿ ವಾರ್ಡ್‌ನಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕದ ಸ್ಥಾಪನೆ
- ಬೆಂಗಳೂರಿಗೆ ಪ್ರತ್ಯೇಕ ಆರೋಗ್ಯ ವ್ಯವಸ್ಥೆ ಜಾರಿ
- ಪಾಲಿಕೆಯ ಆಸ್ತಿ ರಕ್ಷಣೆಗೆ ಅನುದಾನ ಹಲವು ಸಂಘ-ಸಂಸ್ಥೆಗಳಿಗೆ ನೀಡಲಾಗುತ್ತಿದ್ದ ಅನುದಾನಗಳಿಗೆ ಬ್ರೇಕ್
- ಕೆಂಪೇಗೌಡ ಜಯಂತಿ, ಬೆಂಗಳೂರು ಕರಗ ಮಹೋತ್ಸವ, ಅಂಬೇಡ್ಕರ್ ಜಯಂತಿಗೆ ಅನುದಾನ
- ಪಾಲಿಕೆ ವ್ಯಾಪ್ತಿಯ ಹೊಸ 110 ಹಳ್ಳಿಗಳಿಗೆ ಕಾವೇರಿ ನೀರು ಸರಬರಾಜು
- ನಗರದ ನಾಲ್ಕೂ ಕಡೆ ತ್ಯಾಜ್ಯ ಸಂಸ್ಕರಣಾ ಘಟಕದ ಸ್ಥಾಪನೆ
- ಟ್ರಾಫಿಕ್ ಕಂಟ್ರೋಲ್ಗೆ ರಸ್ತೆಗಳ ಅಗಲೀಕರಣ
- ಪಾಲಿಕೆಯ ಕಲ್ಯಾಣ ಇಲಾಖೆಯಿಂದ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಅನುದಾನ
- ಬೀದಿಬದಿ ವ್ಯಾಪಾರಿಗಳಿಗೆ ಹೆಚ್ಚಿನ ಸೌಲಭ್ಯ
- ನೂತನ ಜಾಹಿರಾತು ನೀತಿ ಜಾರಿ
ಇದನ್ನೂ ಓದಿ: ಬಿಬಿಎಂಪಿ ಬಜೆಟ್: ಪೂರ್ವಭಾವಿ ಸಭೆ ನಡೆಸಿದ ಡಿಸಿಎಂ ಡಿ. ಕೆ ಶಿವಕುಮಾರ್