ಬೆಳಗಾವಿ: ಸಿಎಂ, ಡಿಸಿಎಂ ಹಾಗು ಸಚಿವ ಸ್ಥಾನಕ್ಕಿಂತ ನಮಗೆ ಮೀಸಲಾತಿಯೇ ಮುಖ್ಯ. ನಮಗೆ 2ಎ ಮೀಸಲಾತಿ ಕೊಟ್ಟು ಸರ್ಕಾರ ಪುಣ್ಯ ಕಟ್ಟಿಕೊಳ್ಳಲಿ ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡುವಂತೆ ಒಕ್ಕಲಿಗ ಸ್ವಾಮೀಜಿ ನೀಡಿದ ಹೇಳಿಕೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.
ಸ್ವಾಮೀಜಿಗಳಾಗಿ ನಾವು ರಿಕ್ವೆಸ್ಟ್ ಮಾಡೋದು ಬೇಡ. ಅವರೇನಾದರೂ ನಮ್ಮನ್ನು ಕೇಳಿದ್ರೆ ನಮ್ಮ ನಿಲುವು ಉತ್ತರ ಕರ್ನಾಟಕ ಆಗಿರುತ್ತದೆ. ಅದರಲ್ಲೂ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಕೊಡುವಂತೆ ಕೇಳಬಹುದು. ಆದರೆ, ಅದಕ್ಕಿಂತಲೂ ಹೆಚ್ಚಾಗಿ ನಮಗೆ 2ಎ ಮೀಸಲಾತಿ ಮುಖ್ಯ ಎಂದು ಸ್ಪಷ್ಟಪಡಿಸಿದರು.
ಧರ್ಮ ಮತ್ತು ಜಾತಿ ಮೀಸಲಾತಿ ಹೋರಾಟ ಬೇರೆ, ಬೇರೆ: ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ಬಗ್ಗೆ 'ಲಿಂಗಾಯತ ಪ್ರತ್ಯೇಕ ಧರ್ಮ' ಎಂದು ನಾನು ಹೇಳೋಕೆ ಹೋಗಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಜಾಮದಾರ್ ಹೆಚ್ಚು ಕಾಳಜಿ ವಹಿಸಿದ್ದಾರೆ. ನಾನು ನಮ್ಮ ಮನೆಯೊಳಗಿನ ಹೋರಾಟ ಮಾಡುತ್ತಿದ್ದೇನೆ. ಧರ್ಮ ಮತ್ತು ಜಾತಿ ಮೀಸಲಾತಿ ಹೋರಾಟ ಬೇರೆ, ಬೇರೆ ಎಂದು ಹೇಳಿದರು.
ಸ್ವಾಮೀಜಿ ಲಿಂಗಾಯತ ಧರ್ಮದ ಹೋರಾಟದಿಂದ ವಿಮುಖರಾದರೇ ಎಂಬ ಪ್ರಶ್ನೆಗೆ, 2018ರ ನಂತರ ಮತ್ತೆ ಧರ್ಮದ ಹೋರಾಟ ಆರಂಭವಾಗಿಲ್ಲ. ಪಂಚಮಸಾಲಿ ಮೀಸಲಾತಿ ಸಿಕ್ಕ ಬಳಿಕ ಧರ್ಮದ ಹೋರಾಟಕ್ಕೆ ನಾನೇ ನೇತೃತ್ವ ವಹಿಸಿಕೊಳ್ಳುತ್ತೇನೆ. ನಮ್ಮ ಪಂಚಮಸಾಲಿ ಬಾಂಧವರು ಧರ್ಮದ ಹೋರಾಟ ಮಾಡುತ್ತಿದ್ದೀರಿ. ಸಮಾಜದ ಹೋರಾಟ ಯಾವಾಗ ಆರಂಭಿಸುತ್ತೀರಿ ಎಂದು ಕೇಳಿಕೊಂಡಿದ್ದರು. ಹಾಗಾಗಿ, ಮನೆಯೊಳಗಿನ ಮಕ್ಕಳಿಗೆ ನ್ಯಾಯ ಕೊಡಿಸಿದ ಬಳಿಕ ಊರಿನ ಮಕ್ಕಳಿಗೆ ನ್ಯಾಯ ಕೊಡಿಸಲು ಹೋರಾಟ ಮಾಡುತ್ತೇನೆ. ಮನೆ ಗೆದ್ದು ಮಾರು ಗೆಲ್ಲು ಎನ್ನುವಂತೆ ಮೀಸಲಾತಿ ಹೋರಾಟ ಕೈಗೊಂಡಿದ್ದೇವೆ ಎಂದರು.
2ಎ ಮೀಸಲಾತಿಗಾಗಿ ಪಂಚಮಸಾಲಿ ಶಾಸಕರ ಮನೆಗೆ ಹೋಗಿ ಮೀಸಲಾತಿ ಆಗ್ರಹ ಪತ್ರ ಚಳುವಳಿ ಆರಂಭಿಸಿದ್ದೇವೆ. ನಾವು ಕರ್ನಾಟಕದಲ್ಲಿರುವ ಶಾಸಕರ ಮನೆಗೆ ಪಂಚಮಸಾಲಿ ಆಗ್ರಹ ಪತ್ರ ಅಂತ ಚಳುವಳಿ ಮಾಡ್ತಿದ್ದೇವೆ. ಈಗಾಗಲೇ ವಿನಯ್ ಕುಲಕರ್ಣಿಯವರ ಮನೆಗೆ ಹೋಗಿ ಒತ್ತಾಯ ಮಾಡಿದ್ದು, ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತು ಕೊಟ್ಟ ನಂತರವೇ ಅಲ್ಲಿಂದ ಹೊರ ಬಂದಿದ್ದೇವೆ. ಬೆಳಗಾವಿ ಜಿಲ್ಲೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಬಾಬಾಸಾಹೇಬ ಪಾಟೀಲ್, ರಾಜು ಕಾಗೆ, ಗಣೇಶ ಹುಕ್ಕೇರಿ ಅವರ ಮನೆಗೂ ಹೋಗಲಿದ್ದೇವೆ. ಪಕ್ಷಾತೀತವಾಗಿ ಎಲ್ಲರೂ ಸದನದಲ್ಲಿ ಹೋರಾಟ ಮಾಡಲು ಮುಂದಾಗಬೇಕು. ಸರ್ಕಾರ ಇದಕ್ಕೆ ಕಿವಿಗೊಡಲಿಲ್ಲ ಎಂದಾದರೆ ಮತ್ತೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಇದನ್ನೂ ಓದಿ: ಸಿಎಂ ಕುರ್ಚಿ ಮೇಲೆ ಟವೆಲ್ ಹಾಕಿದವರಿಂದಲೇ ಮುಡಾ ಹಗರಣ ಬಯಲು: ಹೆಚ್‌ಡಿಕೆ - H D Kumaraswamy