ಬೆಂಗಳೂರು: ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡುವಂತೆ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದ ರಾಜ್ಯ ಸರ್ಕಾರಕ್ಕೆ ಇಂದು ಹೈಕೋರ್ಟ್ ನಿವೃತ್ತ ನ್ಯಾ ಬಿ ವೀರಪ್ಪ ಅವರು ವರದಿ ಸಲ್ಲಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಿ ವೀರಪ್ಪ ನೇತೃತ್ವದ ನಿಯೋಗ ಇಂದು ವರದಿ ಸಲ್ಲಿಸಿತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಪಿಎಸ್ಐ ನೇಮಕಾತಿ ಹಗರಣವನ್ನ ಕಳೆದ ವರ್ಷ ಜುಲೈನಲ್ಲಿ ನ್ಯಾಯಾಂಗ ತನಿಖೆಗೆ ರಾಜ್ಯ ಸರ್ಕಾರ ಒಪ್ಪಿಸಿತ್ತು.
ಆರು ತಿಂಗಳ ಬಳಿಕ ನ್ಯಾಯಾಲಯದಿಂದ ತನಿಖೆ ನಡೆಸಿ ಇದೀಗ ಸರ್ಕಾರಕ್ಕೆ ವರದಿ ಸಲ್ಲಿಸಿದೆ. 471 ಪುಟಗಳ ವರದಿ ಇದಾಗಿದ್ದು, 28 ಮಂದಿ ಹೇಳಿಕೆಗಳು ಹಾಗೂ 325 ಮಹತ್ವದ ದಾಖಲಾತಿಗಳನ್ನ ವರದಿಯಲ್ಲಿ ಅಡಕಗೊಳಿಸಲಾಗಿದೆ. ಹಗರಣದಿಂದಾಗಿ ಬಡ ಹಾಗೂ ಪ್ರತಿಭಾನ್ವಿತ ಆಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಭವಿಷ್ಯದಲ್ಲಿ ಪಾರದರ್ಶಕವಾಗಿ ಪರೀಕ್ಷೆ ಹೇಗೆ ನಡೆಸಬೇಕು ? ಈ ಹಿಂದೆ ಪೊಲೀಸ್ ನೇಮಕಾತಿ ಮಾಡಿದ ಯಡವಟ್ಟುಗಳೇನು ? ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ.
2021ರಲ್ಲಿ ನೇಮಕಾತಿ ವಿಭಾಗದಿಂದ 545 ಮಂದಿ ಪಿಎಸ್ಐ ಪರೀಕ್ಷೆಗೆ 54 ಸಾವಿರ ಉದ್ಯೋಗಾಂಕ್ಷಿಗಳು ರಾಜ್ಯದ 93 ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದರು. ಸಿಐಡಿ ನೇಮಕಾತಿ ವಿಭಾಗದ ಸ್ಟ್ರಾಂಗ್ ರೂಮ್‌ನಲ್ಲಿ ಒಎಂಆರ್ ಶೀಟ್ ತಿದ್ದುಪಡಿಯಾಗಿತ್ತು. ತಾತ್ಕಾಲಿಕವಾಗಿ ನೇಮಕವಾಗಿದ್ದ 50 ಅಭ್ಯರ್ಥಿಗಳು ಹಣ ನೀಡಿ ಅಕ್ರಮವಾಗಿ ಹುದ್ದೆ ಗಿಟ್ಟಿಸಿಕೊಂಡಿದ್ದರು.
ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಸಮಾಜಕ್ಕೆ ತಪ್ಪು ಸಂದೇಶ: ಕಳೆದ ನವೆಂಬರ್ ನಲ್ಲಿ ಸಿಐಡಿ ಪ್ರಧಾನ ಕಚೇರಿಗೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಹೈಕೋರ್ಟ್ ನಿವೃತ್ತ ನ್ಯಾ.ಬಿ.ವೀರಪ್ಪ ಅವರು, ಸ್ಟ್ರಾಂಗ್ ರೂಮ್ ಭೇಟಿ ಮಾಡಿ ಪರಿಶೀಲಿಸಲಾಗಿದ್ದು ಇನ್ನಷ್ಟು ಸುಧಾರಣೆಯಾಗಬೇಕಿದೆ. ನೇಮಕಾತಿಯಲ್ಲಿ ಇರುವ ಲೋಪದೋಷ ಬಗ್ಗೆ ಸರಿಪಡಿಸುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗುವುದು. ದೇಶ ಕಾಯುವ ಸೈನಿಕ ರೀತಿಯಲ್ಲಿ ಪೊಲೀಸರು ಸಹ ಕಾರ್ಯನಿರ್ವಹಿಸುತ್ತಾರೆ. ಪೊಲೀಸ್ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮವಾದರೆ ಸಮಾಜಕ್ಕೆ ತಪ್ಪು ಸಂದೇಶ ರವಾನಿಸದಂತೆ ಆಗಲಿದೆ. ಭವಿಷ್ಯದಲ್ಲಿ ಅಕ್ರಮಗಳು ಆಗದಂತೆ ತಡೆಯಬೇಕಿದೆ ಎಂದು ತಿಳಿಸಿದ್ದರು.
ಇದನ್ನೂಓದಿ:ಮರ ನೆಡಲು ನೀಡಿದ ಜಮೀನು ಸಾರ್ವಜನಿಕರಿಗೆ ಮಂಜೂರು ಮಾಡಿದಂತಾಗುವುದಿಲ್ಲ: ಹೈಕೋರ್ಟ್