ಶಿವಮೊಗ್ಗ: ರಾಜ್ಯದ ರೈತರಿಗೆ ಉಚಿತ ವಿದ್ಯುತ್ ನೀಡಿದ್ದು ಮಾಜಿ ಸಿಎಂ ಬಂಗಾರಪ್ಪನವರೇ ಹೊರತು ಯಡಿಯೂರಪ್ಪನವರಲ್ಲ. ಹಾಲಿ ಸಂಸದರು ಸುಳ್ಳು ಹೇಳುವ ಮೂಲಕ ಸುಳ್ಳಿನ ಸರದಾರರಾಗಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಆರೋಪಿಸಿದರು.
ನಗರದ ಶುಭಂ ಹೋಟೆಲ್ನಲ್ಲಿ ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದರು ಜನರ ಬಳಿ ಹೋಗದೇ ಮಾಧ್ಯಮದವರ ಬಳಿ ಬಂದು ತಮ್ಮ ವರದಿ ನೀಡುತ್ತಿದ್ದಾರೆ. ಸಂಸದರೇ ನೀವು ಕಳೆದ 15 ವರ್ಷಗಳಿಂದ ನೀವು ಅಧಿಕಾರ ಪಡೆದು ಏನು ಮಾಡಿದ್ರಿ ಎಂದು ಪ್ರಶ್ನಿಸಿದ ಅವರು, ರಾಘವೇಂದ್ರ ಸುಳ್ಳಿನ ಸರದಾರ ಎಂದು ಕುಟುಕಿದರು.
ಬಿಜೆಪಿಯ ದೊಡ್ಡ ಸಮಾವೇಶ ಮಾಡಬೇಕು, ಅದಕ್ಕೆ ಬೇಕಾದ್ರೆ ಜನರನ್ನು ನಾನೇ ಕಳುಹಿಸುತ್ತೇನೆ. ಅಲ್ಲಿ ಉಚಿತ ವಿದ್ಯುತ್ ನೀಡಿದ್ದು ಯಾರು ಅಂತ ಕೇಳಿದ್ರೆ ಅವರಿಗೆ ಗೊತ್ತಾಗುತ್ತದೆ. ರೈತರಿಗೆ ಉಚಿತ ವಿದ್ಯುತ್ ನೀಡಿದ್ದು ಬಂಗಾರಪ್ಪನವರು ಹೊರತು ಯಡಿಯೂರಪ್ಪನವರು ಅಲ್ಲ ಎಂದು ಅಪಾದಿಸಿದರು.
ಅಲ್ಲಪ್ಪ, ರಾಘವೇಂದ್ರ ಕಾಗೋಡು ತಿಮ್ಮಪ್ಪನವರು ಹಕ್ಕುಪತ್ರ ನೀಡಿದಾಗ ನೀವು ಹೊಗಳಿದಿರಿ. ಆದರೆ ಹಕ್ಕುಪತ್ರವನ್ನು ರದ್ದು ಮಾಡಿದ್ದು ನಿಮ್ಮದೇ ಸರ್ಕಾರ. ನಿಮ್ಮ ಕುಟುಂಬದವರನ್ನು ಬೀದಿಪಾಲು ಮಾಡಿದ್ದೆ, ನಿಮ್ಮದೇ ಪಕ್ಷ. ಈಶ್ವರಪ್ಪನವರು ರಾಘವೇಂದ್ರ ವಿರುದ್ದ ಹೇಳಿಕೆ ನೀಡುತ್ತಿರುವುದು ಸತ್ಯ ಎಂದರು.
ಏಪ್ರಿಲ್ 15ಕ್ಕೆ ಗೀತಾ ನಾಮಪತ್ರ ಸಲ್ಲಿಕೆ: ಏಪ್ರಿಲ್ 15ರಂದು ಗೀತಾ ಶಿವರಾಜ್ ಕುಮಾರ್ ನಾಮಪತ್ರ ಸಲ್ಲಿಕೆ ಮಾಡುವರು. ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಇಬ್ಬರಲ್ಲಿ ಒಬ್ಬರು ಬರುತ್ತಾರೆ. ಅಂದು ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಗಾಂಧಿ ಬಜಾರ್ಗೆ ಬೃಹತ್ ಮೆರವಣಿಗೆ ಮೂಲಕ ಬಂದು ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಲಾಗುವುದು. ಅಂದಿನಿಂದ ಅಂತಿಮ ಪ್ರಚಾರದ ದಿನದ ವರೆಗೆ ಜನರ ಬಳಿ ಮತಯಾಚಿಸಲಾಗುವುದು ಎಂದು ಮಾಹಿತಿ ನೀಡಿದರು.
ಇದನ್ನೂಓದಿ: ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಪರ ಮತಯಾಚಿಸಿದ ಶಾಸಕ ಎಸ್.ಆರ್ ವಿಶ್ವನಾಥ್, ನಟಿ ತಾರ - Lokshaba election