ವಿಶಿಷ್ಟ ಚೇತನ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ಹಣ ಪಡೆದು ಆರೋಪಿ ನಾಪತ್ತೆ: ದೂರು - crime news - CRIME NEWS
ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿರುವ ಕುರಿತು ವಿಶಿಷ್ಟ ಚೇತನ ಮಹಿಳೆ ಆರೋಪಿ ವಿರುದ್ಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Published : Mar 27, 2024, 10:44 PM IST
ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ವೆಸಗಿ ಲಕ್ಷಾಂತರ ರೂಪಾಯಿ ವಂಚಿಸಿರುವ ಕುರಿತು ವಿಶಿಷ್ಟ ಚೇತನ ಮಹಿಳೆ ಆರೋಪದ ಮೇಲೆ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆಗೊಳಗಾದ ಯುವತಿ ನೀಡಿದ ದೂರಿನ ಮೇರೆಗೆ ಆರೋಪಿ ಸುರೇಂದ್ರಮೂರ್ತಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆ ತಾಯಿ ಜೊತೆ ವಾಸವಾಗಿದ್ದು, 2018ರಲ್ಲಿ ಸುರೇಂದ್ರಮೂರ್ತಿ ಪರಿಚಯವಾಗಿತ್ತು. ಕಾಲಕ್ರಮೇಣ ಸ್ನೇಹ ಪ್ರೀತಿಗೆ ತಿರುಗಿತ್ತು. ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಈ ಮಧ್ಯೆ ಹೊಸ ಕಂಪನಿಯೊಂದು ಆರಂಭಿಸುತ್ತಿದ್ದು, ಹಣಕಾಸಿನ ನೆರವು ಬೇಕಿದೆ ಎಂದು ಹಣ ಕೇಳಿದ್ದನು. ಹಣ ಕೊಡಲು ನಿರಾಕರಿಸಿದರೂ ಹೇಗಾದರೂ ಹಣ ಹೊಂದಿಸಿ ಕೊಡುವಂತೆ ಒತ್ತಾಯಿಸಿದ್ದ. ಹೊಸ ಕಂಫನಿ ಆರಂಭಗೊಂಡ ಬಳಿಕ ಕಂಪನಿ ಪಾಲುದಾರಿಕೆ ಕೊಡುವುದಾಗಿ ನಂಬಿಸಿದ್ದ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ.
ಹಣ ನೀಡುವಂತೆ ತನಗೆ ನಿರಂತರ ಒತ್ತಡ ಹೇರಿದ್ದರಿಂದ ತನ್ನ ಭವಿಷ್ಯಕ್ಕಾಗಿ ಕೂಡಿಟ್ಟಿದ್ದ ಹಣ, ಒಡವೆ ಹಾಗೂ ತಾಯಿ ಬಳಿಯಿದ್ದ ಆಭರಣಗಳನ್ನು ಗಿರವಿ ಇಟ್ಟು ಹಣ ಕೊಟ್ಟಿದ್ದೆ. ಅಲ್ಲದೇ ಸ್ನೇಹಿತರು - ಸಂಬಂಧಿಕರಿಂದ ಸಾಲ ತೆಗೆದುಕೊಂಡು ಸುಮಾರು 57 ಲಕ್ಷದ ವರೆಗೆ ಹಣ ನೀಡಿದ್ದೆ. 9 ಲಕ್ಷ ವಾಪಸ್ ನೀಡಿರುವುದು ಹೊರತುಪಡಿಸಿದರೆ 46 ಲಕ್ಷ ಹಣ ನೀಡದೆ ವಂಚಿಸಿದ್ದ. ಈ ನಡುವೆಯೂ ಲೈಂಗಿಕವಾಗಿ ಬಳಸಿಕೊಂಡಿದ್ದ. ಸಾಲ ನೀಡುವ ಬಗ್ಗೆ ಪ್ರಶ್ನಿಸಿದರೆ ಸಬೂಬು ಹೇಳಿಕೊಂಡು ಬಂದಿದ್ದ. ಮದುವೆ ಬಗ್ಗೆ ಪ್ರಸ್ತಾಪಿಸಿದರೆ ಕಾಲು ಇಲ್ಲದವಳು. ನಿನ್ನನ್ನ ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿ ಮೊಬೈಲ್ ನಂಬರ್ ಬ್ಲ್ಯಾಕ್ ಮಾಡಿ ನಾಪತ್ತೆಯಾಗಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವಂಚನೆ ಪ್ರಕರಣ ಬಗ್ಗೆ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಕಾಂತ್, ವಂಚನೆ ಸಂಬಂಧ ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 2018ರಿಂದ ಆರೋಪಿಯೊಂದಿಗೆ ಯುವತಿ ಸಂಪರ್ಕದಲ್ಲಿದ್ದು ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸದ್ಯ ಆರೋಪಿ ನಾಪತ್ತೆಯಾಗಿದ್ದು, ಆತನ ಪತ್ತೆ ಕಾರ್ಯ ನಡೆಸುತ್ತಿರುವುದಾಗಿ ಡಿಸಿಪಿ ತಿಳಿಸಿದ್ದಾರೆ.
ಇದನ್ನೂಓದಿ:ಹುಕ್ಕಾ ಸೇವನೆ ಆರೋಪದಡಿ ಬಿಗ್ ಬಾಸ್ ವಿನ್ನರ್ ಮುನಾವರ್ ಫಾರುಕಿ ಸೇರಿ 14 ಮಂದಿ ಪೊಲೀಸ್ ವಶಕ್ಕೆ - Munawar Faruqui