ಚಾಮರಾಜನಗರ: ದೇಶದ ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯಕ್ಕೆ ಗ್ರೀನ್ ಟ್ಯಾಕ್ಸ್ನಿಂದಲೇ ಭರಪೂರ ಆದಾಯ ಬಂದಿದೆ. ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ ಗ್ರೀನ್ ಟ್ಯಾಕ್ಸ್ (ಹಸಿರು ತೆರಿಗೆ) ಮೂಲಕ ಕಳೆದ 10 ತಿಂಗಳಲ್ಲಿ 4.5 ಕೋಟಿ ರೂ. ಸಂಗ್ರಹವಾಗಿದ್ದು ಅರಣ್ಯ ಇಲಾಖೆಯ ವೇತನ ನಿರ್ವಹಣೆಗೆ ಸಹಕಾರಿಯಾಗಿದೆ.
ಬಂಡೀಪುರವು ತಮಿಳುನಾಡು ಮತ್ತು ಕೇರಳ ಗಡಿಯನ್ನು ಹಂಚಿಕೊಂಡಿದ್ದು ಬಂಡೀಪುರ ಅಭಯಾರಣ್ಯದ ಮೂಲಕ ತಮಿಳುನಾಡು ಹಾಗೂ ಕೇರಳಕ್ಕೆ ತೆರಳುವ ಕಾರು, ಲಾರಿ ಸೇರಿದಂತೆ ಎಲ್ಲಾ ವಾಹನಗಳಿಂದ 20 ರೂ. ಟ್ಯಾಕ್ಸ್ ಸಂಗ್ರಹ ಮಾಡಲಾಗುತ್ತಿದೆ.
ಇದನ್ನೂ ಓದಿ: ಚಾಮರಾಜನಗರ: ಕಾಡಂಚಿನ ಜನರಿಗೆ ಅರಣ್ಯ ಇಲಾಖೆಯಿಂದ ಆಂಬ್ಯುಲೆನ್ಸ್ ಸೇವೆ
ಕಳೆದ ಏಪ್ರಿಲ್ನಲ್ಲಿ ಆರಂಭಗೊಂಡ ಈ ಗ್ರೀನ್ ಟ್ಯಾಕ್ಸ್ ಇದೀಗ ಹತ್ತು ತಿಂಗಳ ಅವಧಿಯಲ್ಲಿ 4.5 ಕೋಟಿ ರೂ ಸಂಗ್ರಹವಾಗಿದೆ. ಈ ಕುರಿತು, ಬಂಡೀಪುರ ಸಿಎಫ್ಒ ರಮೇಶ್ ಕುಮಾರ್ ಪ್ರತಿಕ್ರಿಯಿಸಿ, ಗ್ರೀನ್ ಟ್ಯಾಕ್ಸ್ ಮೂಲಕ ವಸೂಲಿ ಮಾಡುವ ಹಣವನ್ನು ಅರಣ್ಯ ಇಲಾಖೆಯ ಸುಮಾರು 500ಕ್ಕೂ ಹೆಚ್ಚು ಮುಂಚೂಣಿ ಸಿಬ್ಬಂದಿಗಳ ವೇತನಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಮೂಲಕ ರಾಜ್ಯ ಸರ್ಕಾರದಿಂದ ಸಿಬ್ಬಂದಿಯ ವೇತನಕ್ಕೆ ಕಾಯಬೇಕಾದ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.
ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ಸ್ಥಳೀಯ ನೋಂದಣಿ ವಾಹನಗಳಿಗೆ ರಿಯಾಯಿತಿ ನೀಡಲಾಗಿದ್ದು, ಹೊರ ಜಿಲ್ಲೆ ಹಾಗೂ ಅಂತರರಾಜ್ಯ ವಾಹನಗಳಿಂದ ಮಾತ್ರ ಸುಂಕ ವಸೂಲಿ ಮಾಡಲಾಗುತ್ತಿದೆ. ಇದು ಸ್ಥಳೀಯರ ಸಂಚಾರಕ್ಕೆ ಹೆಚ್ಚು ಅನುಕೂಲವಾಗಿದೆ.
ಇದನ್ನೂ ಓದಿ: ಆನೆಗಳು ಮನುಷ್ಯನ ಮೇಲೆ ಏಕಾಏಕಿ ದಾಳಿಯನ್ನ ಏಕೆ ಮಾಡುತ್ತವೆ ?: ವನ್ಯಜೀವಿ ತಜ್ಞರ ಸಂದರ್ಶನ