ಕಾರವಾರ: ಪ್ರತಿ ದಿನ ಆಳ ಸಮುದ್ರಕ್ಕೆ ಇಳಿದು ಮತ್ಸ್ಯ ಶಿಕಾರಿ ಮಾಡುವ ಕಡಲ ಮಕ್ಕಳಿಗೆ ಇನ್ನು ಎರಡು ತಿಂಗಳು ವನವಾಸದಂತೆ. ಸರ್ಕಾರ ಮಳೆಗಾಲ ಪ್ರಾರಂಭವಾದ ಹಿನ್ನೆಲೆಯಲ್ಲಿ ಎರಡು ತಿಂಗಳು ಮೀನುಗಾರಿಕೆ ಮಾಡುವುದಕ್ಕೆ ನಿಷೇಧ ಹೇರಿದೆ. ಹಾಗಾಗಿ ಇದೀಗ ಕಡಲ ನಗರಿ ಕಾರವಾರದಲ್ಲಿ ಕಡಲ ಮಕ್ಕಳು ತಮ್ಮ ತಮ್ಮ ಬೋಟ್ಗಳನ್ನು ಬಂದರಿಗೆ ತಂದು ಲಂಗರು ಹಾಕತೊಡಗಿದ್ದಾರೆ.
ಹೌದು, ಪ್ರತಿ ದಿನ ಮೀನುಗಳಿಗೆ ಬಲೆ ಬೀಸಿ ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುವ ಮೀನುಗಾರರಿಗೆ ಜೂನ್ ಮತ್ತು ಜುಲೈ ತಿಂಗಳು ಮಾತ್ರ ವನವಾಸ ಇದ್ದಂತೆ. ಸರ್ಕಾರ ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಮಳೆಗಾಲ ಜೊತೆಗೆ ಮೀನು ಮೊಟ್ಟೆ ಇಟ್ಟು ಸಂತತಿ ವೃದ್ಧಿ ಮಾಡುವ ಸಮಯ ಆಗಿರುವುದರಿಂದ ಮೀನುಗಾರಿಕೆ ಮೇಲೆ ನಿಷೇಧ ಹೇರುತ್ತದೆ. ಎರಡು ತಿಂಗಳುಗಳ ಕಾಲ ಯಾವುದೇ ಕಾರಣಕ್ಕೂ ಮೀನುಗಾರರು ಕಡಲಿಗೆ ಇಳಿಯುವಂತಿಲ್ಲ. ಈ ನಿಟ್ಟಿನಲ್ಲಿ ಇಂದಿನಿಂದಲೇ ಮೀನುಗಾರಿಕೆ ನಿಷೇಧದ ಅವಧಿ ಪ್ರಾರಂಭವಾಗಿದ್ದು, ಕಡಲ ನಗರಿ ಕಾರವಾರದಲ್ಲಿ ಬೈತಖೋಲ್ ಬಂದರಿನಲ್ಲಿ ಮೀನುಗಾರರು ಈ ವರ್ಷದ ತಮ್ಮ ಕಾಯಕವನ್ನು ನಿಲ್ಲಿಸಿದ್ದಾರೆ.
ಈಗಾಗಲೇ ಬಂದರಿಗೆ ನೂರಾರು ಮೀನುಗಾರರು ಬೋಟ್ಗಳನ್ನು ವಾಪಾಸ್ ತಂದು ಲಂಗರು ಹಾಕಿ ನಿಲ್ಲಿಸತೊಡಗಿದ್ದಾರೆ. ಕೇವಲ ಸಾಂಪ್ರದಾಯಿಕ ಮೀನುಗಾರರು ಮಾತ್ರ ಮೀನುಗಾರಿಕೆ ನಡೆಸಲು ಅವಕಾಶಗಳಿದ್ದು, ಯಾಂತ್ರೀಕೃತ ಬೋಟ್ ಬಳಸುವ ಮೀನುಗಾರರು ಯಾವುದೇ ಕಾರಣಕ್ಕೂ ಕಡಲಿಗೆ ಇಳಿಯದಂತೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ಬಂದರುಗಳಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಬೋಟ್ಗಳು ಮೀನುಗಾರಿಕೆಗೆ ಆಳಸಮುದ್ರಕ್ಕೆ ತೆರಳುತ್ತದೆ. ಮೀನುಗಾರಿಕೆಯನ್ನು ನಂಬಿ ಸುಮಾರು ಹತ್ತು ಸಾವಿರ ಜನರು ಜೀವನ ಸಾಗಿಸುತ್ತಿದ್ದಾರೆ. ಇನ್ನು ಮೀನುಗಾರಿಕೆಗೆ ನಿಷೇಧ ಇರುವ ವೇಳೆ ಮೀನುಗಾರರು ಬೋಟ್ಗಳನ್ನು ದಡಕ್ಕೆ ತಂದು ರಿಪೇರಿ ಕಾರ್ಯ ಮಾಡುವುದು, ಬಲೆಗಳನ್ನು ಸರಿಪಡಿಸಿಕೊಳ್ಳುವ ಕಾರ್ಯ ಮಾಡುತ್ತಾರೆ.
"ಅಲ್ಲದೇ ಬೋಟ್ಗಳಲ್ಲಿ ಹೊರ ರಾಜ್ಯದ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಎಲ್ಲರೂ ತಮ್ಮ ತಮ್ಮ ಊರಿನತ್ತ ಪ್ರಯಾಣ ಬೆಳೆಸುತ್ತಾರೆ. ಇನ್ನು ಈ ಬಾರಿ ಹತ್ತು ದಿನ ಮುಂಚಿತವಾಗಿಯೇ ಚಂಡಮಾರುತ ಎಂದು ಮೀನುಗಾರಿಕೆ ನಿಂತಿದೆ. ಎರಡು ತಿಂಗಳುಗಳ ಕಾಲ ಕೆಲಸ ಇಲ್ಲದ ಸಂದರ್ಭದಲ್ಲಿ ಸರ್ಕಾರ ಮೀನುಗಾರರ ನೆರವಿಗೆ ಬರಬೇಕು" ಎನ್ನುತ್ತಾರೆ ಬೋಟ್ ಮಾಲೀಕರು.
ಆಳಸಮುದ್ರ ಮೀನುಗಾರಿಕೆಗೆ ನಿಷೇಧ ಇರುವ ಹಿನ್ನೆಲೆ ಎರಡು ತಿಂಗಳು ದಡದಲ್ಲಿಯೇ ಏಂಡಿ ಬಲೆ ಹಾಕಿ ಮೀನುಗಾರಿಕೆ ಮಾಡುವ ಕೆಲಸವನ್ನು ಕೆಲ ಮೀನುಗಾರರು ಮಾಡುತ್ತಾರೆ. ಈ ಸಂದರ್ಭದಲ್ಲಿ ಮೀನು ಸಿಕ್ಕರೆ ಸ್ವಲ್ಪ ಹೊಟ್ಟೆ ತುಂಬಲಿದೆ ಎನ್ನುವುದು ಮೀನುಗಾರರ ಅಭಿಪ್ರಾಯ. ಒಟ್ಟಿನಲ್ಲಿ ಆಳಸಮುದ್ರದಲ್ಲಿ ಬೋಟ್ಗಳ ಸದ್ದು ನಿಂತಿದ್ದು ಮತ್ತೆ ಬೋಟ್ಗಳ ಸದ್ದು ಕೇಳಬೇಕಾದರೆ ಆಗಸ್ಟ್ ತಿಂಗಳವರೆಗೆ ಕಾಯುವುದು ಅನಿವಾರ್ಯವಾಗಿದೆ.
ಇದನ್ನೂ ಓದಿ: ಈ ಋತುವಿನ ಆಳಸಮುದ್ರ ಮೀನುಗಾರಿಕೆ ಇಂದಿಗೆ ಅಂತ್ಯ: ನಷ್ಟದಲ್ಲೇ ವೃತ್ತಿ ನಡೆಸಿದ ಕಡಲ ಮಕ್ಕಳು - Deep Sea Fishing