ಮೈಸೂರು : ಗೌರಿ-ಗಣೇಶ ಹಬ್ಬವನ್ನ ನಾಡಿನಾದ್ಯಂತ ಅದ್ಧೂರಿಯಾಗಿ ಆಚರಿಸುತ್ತಾರೆ. ಈ ಆಚರಣೆಗೆ ಮಾರುಕಟ್ಟೆಯಲ್ಲಿ ವಿವಿಧ ವಸ್ತುಗಳನ್ನ ಖರೀದಿಸುವುದು ವಾಡಿಕೆ. ಅದರಲ್ಲೂ ಗೌರಿ ಹಬ್ಬದ ದಿನ ಮದುವೆಯಾದ ತಮ್ಮ ಹೆಣ್ಣು ಮಕ್ಕಳಿಗೆ ತವರಿನ ಕಡೆಯಿಂದ ಬಾಗಿನ ಕೊಡುವುದು ವಾಡಿಕೆ. ಇಂತಹ ಬಾಗಿನದ ಸಂದರ್ಭದಲ್ಲಿ ಹೊಸದಾಗಿ ಮದುವೆಯಾದ ಮಗಳಿಗೆ ತಂದೆ-ತಾಯಿ ತವರು ಮನೆಯಿಂದ ಮಗಳ ಗಂಡನ ಮನೆಗೆ ಹೋಗಿ ಬಿದಿರಿನ ಮೊರದಲ್ಲಿ ಬಾಗಿನ ಕೊಡುತ್ತಾರೆ. ಇಂತಹ ಬಿದಿರಿನ ಮೊರಕ್ಕೆ ಈ ಹಬ್ಬದ ವೇಳೆ ತುಂಬಾ ಬೇಡಿಕೆಯಿದೆ. ಆದರೆ ಇದನ್ನ ತಯಾರಿಸುವ ಕುಟುಂಬದವರ ಬದುಕಿಗೆ ನೆಲೆ ಇಲ್ಲದಂತಾಗಿದೆ.
ಈ ಬಗ್ಗೆ ಬಿದಿರಿನ ಮೊರ ತಯಾರಕ ಸಿದ್ದರಾಜು ಮಾತನಾಡಿ, 'ಮಡಿಕೇರಿಯಿಂದ ಬಿದಿರು ತರಿಸಬೇಕು, ಅದನ್ನು ಬ್ಲಾಕ್ ಅಲ್ಲಿ ಮಾರಬೇಕು. ಅದರಿಂದ ನಮಗೂ ಏನು ಲಾಭ ಸಿಗಲ್ಲ. ಒಂದು ಜತೆ ಬಿದಿರಿನ ಮೊರಕ್ಕೆ 150 ರಿಂದ 200 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತದೆ. ನಮಗೆ ಮಾಮೂಲಿ ರೇಟ್ನಲ್ಲಿ 100 ರೂ. ಸಿಗುತ್ತೆ. ಈಗ ಕಾವೇರಿ ನದಿ ತುಂಬಿ ಹರಿಯುತ್ತಿರುವುದರಿಂದ ಅಲ್ಲಿಂದ ಬಿದಿರು ತರಲು ಹಿಂಸೆಯಾಗುತ್ತೆ. ಅದರಿಂದಾಗಿ ನಮಗೆ ರೇಟ್ ಜಾಸ್ತಿಯಾಗುತ್ತೆ. ಇಲ್ಲಿಯೂ ದುಬಾರಿಯಾಗುತ್ತೆ. ಇದರಲ್ಲಿ ನಮಗೆ ಏನೂ ಸಿಗಲ್ಲ. ಮಳೆಬಂದು ಮಡಿಕೇರಿ, ಭಾಗಮಂಡಲದಲ್ಲಿ ಮುಚ್ಚಿಹೋದ್ರೆ ನಮಗೆ ಅದೂ ಇಲ್ಲದಂತಾಗುತ್ತೆ. ಆದರೂ ಕುಲ ಕಸುಬನ್ನು ಬಿಡಬಾರದು ಎಂದು ಇದನ್ನು ಮಾಡಿಕೊಂಡು ಬಂದಿದ್ದೇವೆ' ಎಂದಿದ್ದಾರೆ.
ಈ ಕುರಿತು ಮೊರ ತಯಾರಕರಾದ ನಿಂಗಮ್ಮ ಅವರು ಮಾತನಾಡಿ, 'ಈಗ ಒಂದು ತಿಂಗಳಲ್ಲಿ ವ್ಯಾಪಾರ ಚೆನ್ನಾಗಿ ಆಗುತ್ತೆ. ನಂತರದ ತಿಂಗಳಲ್ಲಿ ಅಷ್ಟೇನೂ ವ್ಯಾಪಾರ ಆಗಲ್ಲ. ಯಾವ ಸರ್ಕಾರ ಬಂದ್ರೂ ನಮಗೆ ಸೌಲಭ್ಯವಿಲ್ಲ. ಬಾಗಿನ ಕೊಡುವವರು ಇದನ್ನ ತೆಗೆದುಕೊಂಡು ಹೋಗ್ತಾರೆ. ನಮಗೆ ತುಂಬಾ ಕಷ್ಟ ಇದೆ. ಆದರೆ ಈ ಕಸುಬನ್ನು ಬಿಡುವ ಹಾಗಿಲ್ಲ. ಗೌರಿ ಹಬ್ಬದ ಸಮಯದಲ್ಲಿ ಪರವಾಗಿಲ್ಲ, ಆದ್ರೆ ಬೇರೆ ದಿನಗಳಲ್ಲಿ ಊಟಕ್ಕೂ ಬಡ್ಡಿ ಸಾಲ ಮಾಡಬೇಕಾಗಿದೆ' ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಪ್ಲಾಸ್ಟಿಕ್ ಮೊರದ ಪೈಪೋಟಿ : ಹಿಂದಿನ ಕಾಲದಲ್ಲಿ ಪ್ರತಿಯೊಂದು ಮನೆಯಲ್ಲೂ ಬಿದಿರಿನ ಮೊರ ಇರುತ್ತಿತ್ತು. ಮನೆಯಲ್ಲಿ ಆಹಾರ ಪದಾರ್ಥಗಳನ್ನ ಸಂಸ್ಕರಿಸಲು ಇದೇ ಬಿದಿರಿನ ಮೊರವನ್ನು ಉಪಯೋಗಿಸುತ್ತಿದ್ದರು. ಪ್ರತಿಯೊಂದು ಮನೆಯಲ್ಲೂ ಬಿದಿರಿನ ಮೊರ ಇರುತ್ತಿತ್ತು. ಜತೆಗೆ ರೈತರು ತಮ್ಮ ದವಸ-ಧಾನ್ಯಗಳನ್ನ ಸಂಸ್ಕರಣೆ ಮಾಡಲು ಇದೇ ಮೊರ ಬಳಸುತ್ತಿದ್ದರು. ಆದರೆ, ಇತ್ತೀಚಿಗೆ ಮಾರುಕಟ್ಟೆಗಳಲ್ಲಿ ಕಡಿಮೆ ದರದಲ್ಲಿ ಪ್ಲಾಸ್ಟಿಕ್ ಮೊರಗಳು ಬಂದಿವೆ. ಇದರಿಂದಾಗಿ ದುಬಾರಿ ಬೆಲೆಯ ಬಿದಿರಿನ ಮೊರಕ್ಕೆ ಬೇಡಿಕೆ ಕಡಿಮೆಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ : ಉತ್ತಮ ಮುಂಗಾರು: ಮಾರುಕಟ್ಟೆಯಲ್ಲಿ ವಹಿವಾಟು ಜೋರು, ಹುಬ್ಬಳ್ಳಿಯಲ್ಲಿ ಕಳೆಗಟ್ಟಿದ ಗಣೇಶೋತ್ಸವ ಸಂಭ್ರಮ - Ganesha festival