ಮಂಗಳೂರು: ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹೆರಿಗೆಯಾದ ಮಹಿಳೆಯೊಬ್ಬರ ಮಗು ಅದಲು ಬದಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಬಂದರು ಠಾಣೆಯಲ್ಲಿ ದೂರು ದಾಖಲಾಗಿದೆ.
ಆ. 18ರಂದು ಹೆರಿಗೆಯಾಗಿದ್ದರೂ ಎರಡು ದಿನಗಳ ಕಾಲ ಸೂಕ್ತ ಮಾಹಿತಿ ನೀಡದೆ ವೈದ್ಯಾಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಮಗುವಿಗೆ ಅನ್ಯಾಯವಾಗಿರುವ ಬಗ್ಗೆ ಸಂಶಯವಿದ್ದು, ಈ ಬಗ್ಗೆ ಉನ್ನತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಮಗುವಿನ ಪೋಷಕರು ದೂರು ನೀಡಿದ್ದಾರೆ.
ಪಾಣೆಮಂಗಳೂರಿನ ನಿವಾಸಿ ಹಾಗೂ ಸಂತ್ರಸ್ತೆ ಭವ್ಯಾ ಪೊಲೀಸರಿಗೆ ದೂರು ನೀಡಿರುವುದಲ್ಲದೆ, ಅವರ ಪರವಾಗಿ ಸಹೋದರ ಸಂತೋಷ್ ಕುಮಾರ್ ಅವರು ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.
ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಭವ್ಯಾ, ತಮ್ಮ ಎರಡನೇ ಹೆರಿಗೆಗಾಗಿ ಚೆಕ್ ಅಪ್ಗಾಗಿ ಬಂಟ್ವಾಳದ ಸರ್ಕಾರಿ ಆಸ್ಪತ್ರೆಗೆ ಆ.17ರಂದು ತೆರಳಿದ್ದರು. ಅಲ್ಲಿ ಮಹಿಳಾ ವೈದ್ಯರಿಲ್ಲದ ಕಾರಣ ಲೇಡಿಗೋಶನ್ ಆಸ್ಪತ್ರೆಗೆ ಆ.18 ರಂದು ರಾತ್ರಿ ದಾಖಲಿಸಲಾಗಿತ್ತು. ಬೆಳಗ್ಗೆ 9.50ರ ಸುಮಾರಿಗೆ ಭವ್ಯ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
"ಆ ವೇಳೆ ಆಸ್ಪತ್ರೆಯ ವೈದ್ಯರು ಮಗು ನಾರ್ಮಲ್ ಆಗಿದೆ ಎಂದು ತಿಳಿಸಿದ್ದರು. ಮಗುವಿಗೆ ಉಸಿರಾಟದ ತೊಂದರೆ ಇರುವುದಾಗಿ ಹೇಳಿ ಮಗುವನ್ನು ಎನ್‌ಐಸಿಯುಗೆ ದಾಖಲಿಸಲಾಗಿತ್ತು. ಆ ಬಳಿಕ ಮಂಗಳವಾರ ಸಂಜೆ ಬಂದು ಮಗುವಿಗೆ ಒಂದು ಕಣ್ಣಿನ ಸಮಸ್ಯೆ ಇದೆ ಹೇಳಿದ್ದಾರೆ. ಇದರಿಂದ ಆಘಾತವಾಗಿದೆ. ಈ ಬಗ್ಗೆ ವೈದ್ಯರು ಹಾಗೂ ಮೇಲಾಧಿಕಾರಿಗಳು ಕಾರಣ ನೀಡದೆ ನುಣುಚಿಕೊಳ್ಳುತ್ತಿದ್ದಾರೆ. ವೈದ್ಯಕೀಯ ವರದಿಗಳನ್ನು ಸಂಶಯಗಳಿಗೆ ನೀಡದಿರುವುದು ಕಾರಣವಾಗಿದ್ದು, ಮಗುವಿಗೆ ಅನ್ಯಾಯವಾಗಿದೆ. ಮಗು ನನ್ನದೆ ಎಂಬ ಬಗ್ಗೆ ಸಂಶಯವಿದೆ. ಈ ಬಗ್ಗೆ ತನಿಖೆ ನಡೆಸಬೇಕು" ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಪ್ರಕರಣ ದಾಖಲಾಗಿದೆ.
ಲೇಡಿಗೋಷನ್ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್. ಸ್ಪಷ್ಟನೆ : "ಆ.18 ರಂದು ರಾತ್ರಿ ಹೆರಿಗೆಗಾಗಿ ಬಂದವರಿಗೆ ಬೆಳಗ್ಗೆ 9.58ಕ್ಕೆ ಸಹಜ ಹೆರಿಗೆ ಆಗಿತ್ತು. ಮಗುವಿನ ಲಿಂಗವನ್ನೂ ತಾಯಿಗೆ ತಿಳಿಸಲಾಗಿತ್ತು. ಆದರೆ ಮಗು ಅಳುತ್ತಿದ್ದರೂ ಉಸಿರಾಟದಲ್ಲಿ ತೊಂದರೆ ಕಂಡುಬಂದ ಹಿನ್ನೆಲೆಯಲ್ಲಿ ಮಕ್ಕಳ ತಜ್ಞ ವೈದ್ಯರು ಸ್ಪಂದಿಸಿ ನವಜಾತ ಶಿಶು ತೀವ್ರ ನಿಗಾ ಘಟಕ (ಎನ್ ಐಸಿಯು)ಕ್ಕೆ ಶಿಫ್ಟ್ ಮಾಡಲಾಗಿತ್ತು".
"ತಜ್ಞ ವೈದ್ಯರು ಮಗುವಿಗೆ ಕೃತಕ ಉಸಿರಾಟ ಒದಗಿಸಲು ಸಿಪ್ಯಾಪ್ ಎಂಬ ವ್ಯವಸ್ಥೆ ಅಳವಡಿಸಿ ಉಸಿರಾಟದ ವ್ಯವಸ್ಥೆಯನ್ನು ಸರಿಪಡಿಸಲು ಆದ್ಯತೆ ನೀಡಿದ್ದರು. ಮಗುವಿನಲ್ಲಿ ಇಂತಹ ಸಮಸ್ಯೆಗಳು ಕಾಣಿಸಿಕೊಂಡಾಗ ಅದು ಪರಿಹಾರದ ಬಳಿಕವಷ್ಟೇ ಮಗುವಿನ ಸಂಪೂರ್ಣ ತಪಾಸಣೆ ನಡೆಸಲಾಗುತ್ತದೆ. ಹೀಗಾಗಿ ಆ.19 ರಂದು ಮಗುವಿನ ಉಸಿರಾಟದಲ್ಲಿ ಸುಧಾರಣೆ ಕಂಡುಬಂದಿದ್ದು, ಆ ದಿನ ರಾತ್ರಿ ಮಕ್ಕಳ ತಜ್ಞ ವೈದ್ಯರು ಉಳಿದ ನ್ಯೂನತೆಯನ್ನು ಕಂಡುಹಿಡಿಯುವ ವೇಳೆ ಕಣ್ಣು ಗಡ್ಡೆ ಒಳಗೆ ಹೋಗಿರುವ ರೀತಿ ಕಂಡು ಬಂದಿದೆ".
"ಅದನ್ನು ಅವರು ನಿರ್ಧಾರ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮಕ್ಕಳ ಕಣ್ಣಿನ ತಜ್ಞರ ಅಭಿಪ್ರಾಯ ಪಡೆಯಲು ನಿರ್ಧರಿಸಿ ಆ.20 ರಂದು ಬೆಳಗ್ಗೆ ಈ ಬಗ್ಗೆ ಮಗುವಿನ ಪೋಷಕರಿಗೆ ಈ ವಿಷಯ ತಿಳಿಸಲಾಗಿದೆ. ಬಳಿಕ ಮಕ್ಕಳ ಕಣ್ಣಿನ ತಜ್ಞರು ಅಲ್ಟ್ರಾಸೌಂಡ್ ತಪಾಸಣೆ ನಡೆಸಿದಾಗ ಮಗುವಿನ ಕಣ್ಣು ಗುಡ್ಡೆ ಜನನದ ವೇಳೆಯೇ ಇಲ್ಲದಿರುವುದು ಕಂಡು ಬಂದಿದೆ. ಸಂಜೆ ಪೋಷಕರಿಗೆ ತಿಳಿಸಿದಾಗ ಅವರು ಆತಂಕಕ್ಕೊಳಗಾಗಿದ್ದಾರೆ. ಈ ವಿಷಯ ತಿಳಿಸಲು ವಿಳಂಬ ಮಾಡಲಾಗಿದೆ ಎಂದು ಆಸ್ಪತ್ರೆ ವಿರುದ್ಧ ಆರೋಪ ಮಾಡಿದ್ದಾರೆ. ಈ ಪ್ರಕರಣದಲ್ಲಿ ನಮ್ಮ ವೃತ್ತಿ ಧರ್ಮಕ್ಕೆ ಅಪಚಾರ ಆಗದ ರೀತಿಯಲ್ಲಿ ನಾವು ಕೆಲಸ ಮಾಡಿದ್ದೇವೆ" ಎಂದು ಆಸ್ಪತ್ರೆ ಅಧೀಕ್ಷಕರು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಮಗುವಿನ ತಂದೆ ನಾಗರಾಜ್ "ಹೆರಿಗೆ ಸಮಯದಲ್ಲಿ ವಿದೇಶದಲ್ಲಿದ್ದೆ. ಹೆರಿಗೆಯಾದಾಗ ತಾಯಿಗೆ ಮಗುವನ್ನು ತೋರಿಸಿದ್ದಾರೆ. ಮಗು ಅಳಲಿಲ್ಲ ಎಂದು ಎನ್ಐಸಿಯುಗೆ ಕರೆದುಕೊಂಡು ಹೋದರು. ಸ್ತನ ಪಾನ ಮಾಡಲು ಅವಕಾಶ ಕೊಡಲಿಲ್ಲ. ಮೂರು ದಿನಕ್ಕೆ ಕಣ್ಣಿಗೆ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ. ಅದೇ ದಿನ ಸಂಜೆ ಮಗುವಿಗೆ ಕಣ್ಣು ಇಲ್ಲ ಎಂದು ಹೇಳಿದ್ದಾರೆ. ಈಗ ನಾವು ಕೊಟ್ಟ ಸ್ಕ್ಯಾನಿಂಗ್ ರಿಪೋರ್ಟ್ ಇಲ್ಲ ಎನ್ನುತ್ತಿದ್ದಾರೆ. ಮಗು ಅದಲು ಬದಲು ಮಾಡಿದ್ದಾರೆ. ಅದು ನನ್ನ ಮಗುವೆ ಅಲ್ಲ. ನಾಲ್ಕನೇ ದಿನಕ್ಕೆ ಮಗುವಿಗೆ ಕಣ್ಣು ಇಲ್ಲ ಎಂದು ಹೇಳುತ್ತಿದ್ದಾರೆ. ಇದರಲ್ಲಿ ಮೋಸ ಆಗಿದೆ. ನಮಗೆ ನ್ಯಾಯ ಬೇಕು" ಎಂದು ಒತ್ತಾಯಿಸಿದ್ದಾರೆ.