ಬೆಳಗಾವಿ: ವಿಶೇಷ ವಿಮಾನದ ಮೂಲಕ ಇಂದು ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆಗಮಿಸಿದ್ದು, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದೆ ಮಂಗಲ ಅಂಗಡಿ ಸೇರಿದಂತೆ ಪಕ್ಷದ ನಾಯಕರು ಬರಮಾಡಿಕೊಂಡರು.
ವಿಮಾನ ನಿಲ್ದಾಣದಿಂದ ನಡ್ಡಾ ಚಿಕ್ಕೋಡಿಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಲಿದ್ದಾರೆ. ಚಿಕ್ಕೋಡಿಯಲ್ಲಿ ಆಯೋಜಿಸಿರುವ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗುವರು. ನಂತರ ಬೆಳಗಾವಿಯಲ್ಲಿ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡು, ಬುದ್ಧಿಜೀವಿಗಳ ಜೊತೆಗೆ ಸಂವಾದ ನಡೆಸಲಿದ್ದಾರೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೇಸರಿ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಬೆಳಗಾವಿಯಿಂದಲೇ ಚುನಾವಣಾ ತಂತ್ರಗಾರಿಕೆ ಹೆಣೆಯಲು ಪಕ್ಷ ಸಜ್ಜಾಗಿದೆ. ಬೆಳಗಾವಿ, ಚಿಕ್ಕೋಡಿ ಸೇರಿ ನಾಲ್ಕು ಲೋಕಸಭಾ ಕ್ಷೇತ್ರಗಳನ್ನೇ ನಡ್ಡಾ ಟಾರ್ಗೆಟ್ ಮಾಡಿದ್ದಾರೆ. ಈಗಾಗಲೇ ಬೆಳಗಾವಿ, ಚಿಕ್ಕೋಡಿ ಕ್ಷೇತ್ರದ ಆಕಾಂಕ್ಷಿಗಳ ಪಟ್ಟಿಯನ್ನು ನಡ್ಡಾ ಪಡೆದಿದ್ದಾರೆ. ಒಂದೊಂದು ಕ್ಷೇತ್ರಕ್ಕೆ ತಲಾ ಮೂವರು ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯ ಬಿಜೆಪಿ ಹೈಕಮಾಂಡ್‌ಗೆ ರವಾನಿಸಿದೆ.
ಬೆಳಗ್ಗೆ 11ಕ್ಕೆ ಚಿಕ್ಕೋಡಿಯಲ್ಲಿ ಬೂತ್ ಮಟ್ಟದ ಸಮಾವೇಶ ನಡೆಸಿ ನಡ್ಡಾ ಬೆಳಗಾವಿಗೆ ಮರಳಲಿದ್ದಾರೆ. ಬಳಿಕ ಖಾಸಗಿ ಹೋಟೆಲ್‌ನಲ್ಲಿ ಕೋರ್ ಕಮಿಟಿ ಸಭೆ ಮುಗಿಸಿ ಪ್ರಬುದ್ಧರ ಸಭೆ ನಡೆಸುವರು. ಈ ಮಧ್ಯೆ ಮಧ್ಯಾಹ್ನ ಸಂಸದೆ ಮಂಗಲಾ ಅಂಗಡಿ ಮನೆಗೆ ಜೆ.ಪಿ.ನಡ್ಡಾ ಭೇಟಿ ನೀಡಲಿದ್ದಾರೆ. ಇದರಿಂದ ಈ ಬಾರಿ ಬೆಳಗಾವಿ ಬಿಜೆಪಿ ಟಿಕೆಟ್ ಅಂಗಡಿ ಕುಟುಂಬಕ್ಕೆ ಒಲಿಯುತ್ತಾ? ಹೊಸಬರಿಗೆ ಚಾನ್ಸ್ ಸಿಗುತ್ತಾ? ಎಂಬ ಕುತೂಹಲ ಮೂಡಿದ್ದು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲೂ ಎದೆಬಡಿತ ಜೋರಾಗಿದೆ.
ನಾಸಿರ್ ಹುಸೇನ್ ಪ್ರಕರಣ- ಉಪರಾಷ್ಟ್ರಪತಿಗೆ ಪತ್ರ: "ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣದಲ್ಲಿ ನಾಸಿರ್ ಹುಸೇನ್ ಅವರ ಹೆಸರನ್ನೇ ಕೈಬಿಟ್ಟಿದ್ದಾರೆ. ನಾಸಿರ್ ಹುಸೇನ್ ಅವರನ್ನು ನಾಲ್ಕನೇ ಅಪರಾಧಿಯನ್ನಾಗಿ ಮಾಡಬೇಕು. ಕಾನೂನು ಪ್ರಕಾರ ಪ್ರಕರಣ ದಾಖಲಿಸಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಅವರು ಪ್ರಮಾಣ ವಚನ ಸ್ವೀಕರಿಸಬಾರದು. ಬಿಜೆಪಿ ಇವತ್ತೇ ಉಪರಾಷ್ಟ್ರಪತಿಗಳಿಗೆ ಪತ್ರ ಬರೆಯಲಿದೆ" ಎಂದು ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಬಿಜೆಪಿಯ ನಿರಂತರ ಹೋರಾಟದ ಪ್ರತಿಫಲವಾಗಿ ನಿನ್ನೆ ಮೂವರನ್ನು ಬಂಧಿಸಲಾಗಿದೆ. ರಾಜ್ಯ ಸರ್ಕಾರ ಎಫ್ಎಸ್ಎಲ್ ವರದಿಯನ್ನು ಇನ್ನು ಬಹಿರಂಗಗೊಳಿಸಿಲ್ಲ. ಖಾಸಗಿ ಎಫ್ಎಸ್ಎಲ್ ವರದಿ ಬರದಿದ್ದರೆ ದೇಶದ್ರೋಹಿಗಳನ್ನು ಬಂಧಿಸಲು ಮೀನಮೇಷ ಎನಿಸುತ್ತಿತ್ತು. ಸರ್ಕಾರದ ಎಫ್ಎಸ್ಎಲ್ ವರದಿಯನ್ನು ಸರ್ಕಾರ ಯಾಕೆ ಬಹಿರಂಗೊಳಿಸಿಲ್ಲ? ಇದನ್ನು ಸರ್ಕಾರ ತಿಳಿಸಬೇಕು" ಎಂದು ಒತ್ತಾಯಿಸಿದರು.
"ನಾಸೀರ್ ಹುಸೇನ್ ಪ್ರಕರಣದಲ್ಲಿ ನಿರ್ದೋಷಿಯಾಗಿ ಹೊರಬರುವವರೆಗೆ ಪ್ರಮಾಣವಚನ ಸ್ವೀಕಾರ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು. ಪೊಲೀಸರ ಮೇಲೆ ಸರ್ಕಾರ ಒತ್ತಡ ಹಾಕ್ತಿದೆ. ಎಫ್ಎಸ್ಎಲ್ ವರದಿಯನ್ನು ಯಾಕೆ ಬಹಿರಂಗಗೊಳಿಸುತ್ತಿಲ್ಲ?. ಪಾಕಿಸ್ತಾನ ಜಿಂದಾಬಾದ್ ಎಂದು ಯಾರೇ ಕೂಗಿದರೂ ಸಹ ಅವರು ದ್ರೋಹಿಗಳೇ. ಅಲ್ಲಿ ಜಾತಿ ಧರ್ಮ ಹಿಂದೂ ಮುಸ್ಲಿಂ ಅಂತ ಯಾವುದೂ ಬರಲ್ಲ" ಎಂದು ವಿಜಯೇಂದ್ರ ಹೇಳಿದರು.
ಪಾಕ್ ಪರ ಘೋಷಣೆ-ಕ್ಷಮೆ ಕೇಳುವಂತೆ ಬೊಮ್ಮಾಯಿ ಆಗ್ರಹ: "ಮಾಧ್ಯಮಗಳಲ್ಲಿ ಪಾಕ್ ಪರ ಘೋಷಣೆ ಸ್ಪಷ್ಟವಾಗಿತ್ತು. ಜವಾಬ್ದಾರಿ ಮರೆತು ಕೆಲ ಸಚಿವರು ದೇಶದ್ರೋಹಿಗಳ ಪರ ನಿಂತಿದ್ದು ದುರ್ದೈವ. ಇವರ ನಡೆ ಆತಂತಕ್ಕೆ ಕಾರಣವಾಗಿದೆ. ಎಫ್ಎಸ್ಎಲ್ ವರದಿ ಬಂದು ನಾಲ್ಕು ದಿನಗಳು ಕಳೆದಿದೆ. ಎರಡು ದಿನಗಳ ಹಿಂದೆ NIA ಎಫ್ಐಆರ್ ಮಾಡಿಕೊಂಡಿದ್ದಕ್ಕೆ ಮೂವರ ಬಂಧನವಾಗಿದೆ. ಮಾಧ್ಯಮಗಳೇ ಇದನ್ನು ಪ್ರಚೋದಿಸುತ್ತಿವೆ ಎಂದು ಸರ್ಕಾರ ದೂರಿತ್ತು. ಪತ್ರಕರ್ತರನ್ನು ಗುರಿ ಮಾಡಿಕೊಂಡು ಮಾತನಾಡಿದ್ದರು. ಪಾಕ್ ಪರ ಘೋಷಣೆ ಕೂಗಿದವರ ಸಮರ್ಥನೆ ಮಾಡಿಕೊಂಡವರು ಕ್ಷಮೆ ಕೇಳಬೇಕು" ಎಂದು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.
ಅಮ್ಮಾಜೇಶ್ವರಿ ಏತನೀರಾವರಿ ಯೋಜನೆಗೆ ಎರಡನೇ ಬಾರಿಗೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, "ಸರ್ಕಾರ ಆಡಳಿತಕ್ಕೆ ಬಂದು 9 ತಿಂಗಳುಗಳು ಕಳೆದರೂ ಯಾವುದೇ ಹೊಸ ಯೋಜನೆ ರೂಪಿಸಿಲ್ಲ. ನೀರಾವರಿ ಯೋಜನೆಗಳನ್ನು ನಿರ್ಲಕ್ಷ್ಯ ಮಾಡಿದೆ. ಹಳೆಯ ಯೋಜನೆಗೆ ಮತ್ತೆ ಚಾಲನೆ ನೀಡುತ್ತಿದ್ದಾರೆ. ಅಧಿಕಾರಿಗಳು ಮಿಸ್ ಗೈಡ್ ಮಾಡುತ್ತಿದ್ದು, ಸಿಎಂ ಇದನ್ನು ಪರಿಶೀಲಿಸಿ ಕ್ರಮ ವಹಿಸಬೇಕು" ಎಂದರು.
ಬೆಳಗಾವಿಯಲ್ಲೇ ಬಿಜೆಪಿ- ಜೆಡಿಎಸ್ ಮೈತ್ರಿಯ ಸೀಟು ಹಂಚಿಕೆ ಬಗ್ಗೆ ಚರ್ಚೆ ಆಗುತ್ತಾ ಎಂಬ ಪ್ರಶ್ನೆಗೆ, "ಬೆಳಗಾವಿಯಲ್ಲಿ ಈ ಬಗ್ಗೆ ಯಾವುದೇ ಚರ್ಚೆ ಆಗಲ್ಲ, ದೆಹಲಿಯಲ್ಲಿ ಆಗಲಿದೆ" ಎಂದು ಹೇಳಿದರು.
ಇದೇ ವೇಳೆ ತಾವು ಹಾವೇರಿಯಿಂದ ಸ್ಪರ್ಧಿಸುತ್ತಿರಾ? ಎಂಬುದಕ್ಕೆ, "ನಾನು ಈಗಾಗಲೇ ಈ ಬಗ್ಗೆ ನನ್ನ ಅಭಿಪ್ರಾಯ ಹೇಳಿದ್ದೇನೆ" ಎಂದು ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: ನಾಳೆ ಬೆಳಗಾವಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ : ಕೋರ್ ಕಮಿಟಿ ಸಭೆಯಲ್ಲಿ ಭಾಗಿ