ಬೆಂಗಳೂರು: "ಈ ಉಪ ಚುನಾವಣೆಗೆ ಕಾರಣರಾದವರನ್ನು ಕೈಬಿಟ್ಟು ಬಿಜೆಪಿ- ಜೆಡಿಎಸ್ನಿಂದ ಎನ್‍ಡಿಎ ಅಭ್ಯರ್ಥಿಯಾಗಿ ರಂಗನಾಥ್ ಅವರನ್ನು ಗೆಲ್ಲಿಸಬೇಕು" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಮಲ್ಲೇಶ್ವರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, "ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು, ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಶಿಕ್ಷಣ ಕ್ಷೇತ್ರಕ್ಕೆ ಅನೇಕ ಕೊಡುಗೆಗಳನ್ನು ಕೊಡಲಾಗಿದೆ. ಇಂಥ ಪವಿತ್ರವಾದ ಶಿಕ್ಷಣ ಕ್ಷೇತ್ರಕ್ಕೆ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡುವ ಕರ್ತವ್ಯ ಪ್ರತಿಯೊಬ್ಬರಲ್ಲಿದೆ. ಅಂಥ ಯೋಗ್ಯ ಅಭ್ಯರ್ಥಿ- ಸೂಕ್ತ ಅಭ್ಯರ್ಥಿ ನಮ್ಮ ಎ.ಪಿ.ರಂಗನಾಥ್ ಅವರಾಗಿದ್ದಾರೆ. ಅವರಿಗೆ ಮತ ಕೊಟ್ಟು ಆಶೀರ್ವಾದ ಮಾಡಬೇಕು ಎಂದು ವಿನಂತಿಸಿದರು.
"ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಅಭ್ಯರ್ಥಿಯಾಗಿ ಎ.ಪಿ. ರಂಗನಾಥ್ ಅವರು ಕಣದಲ್ಲಿದ್ದಾರೆ. ನಾವು ಚುನಾವಣೆಯಲ್ಲಿ ಯಾರನ್ನೂ ಸೋಲಿಸಲು ಹೊರಟಿಲ್ಲ. ಎ.ಪಿ. ರಂಗನಾಥ್ ಅವರು ಒಬ್ಬ ಕ್ರಿಯಾಶೀಲ ರಾಜಕಾರಣಿ. ರಾಜಕಾರಣಿ ಎನ್ನುವುದಕ್ಕಿಂತ ಹೆಚ್ಚಾಗಿ ಸಮಾಜದಲ್ಲಿ ತಮ್ಮದೇ ಆದ ಸೇವೆ ಮಾಡುತ್ತಿದ್ದಾರೆ. ಖ್ಯಾತ ವಕೀಲರೂ ಆಗಿದ್ದಾರೆ" ಎಂದು ಹೇಳಿದರು.
![Vote solicitation for candidate AP Ranganath](https://etvbharatimages.akamaized.net/etvbharat/prod-images/10-02-2024/20716948_thumeg.jpg)
"ಈ ಉಪ ಚುನಾವಣೆಗೆ ಕಾರಣಕರ್ತರು ಯಾರು? ಎಷ್ಟು ಬಾರಿ ತಮ್ಮ ಪಕ್ಷವನ್ನು ಬದಲಿಸಿದ್ದಾರೆ? ಅಥವಾ ಅವರು ವಿಧಾನಪರಿಷತ್ ಸದಸ್ಯರಾಗಿ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ಕೊಡುಗೆ ಶೂನ್ಯವಾಗಿದೆ" ಎಂದು ನುಡಿದರು.
"ಈಶ್ವರಪ್ಪ ಅವರು ತಮ್ಮ ವಿರುದ್ಧ ಹಾಕಿದ್ದ ಕೇಸನ್ನು ಎದುರಿಸುತ್ತಾರೆ. ಆದರೆ, ತಾವೇನು ಹೇಳಿದ್ದಾರೆ ಎಂಬುದನ್ನು ಡಿ.ಕೆ.ಸುರೇಶ್ ಅವರು ನೆನಪು ಮಾಡಿಕೊಳ್ಳಲಿ" ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಲ್ಲೇಶ್ವರ ವಿದ್ಯಾಮಂದಿರ ಸ್ಕೂಲ್, ಎಂಎಲ್‍ಎ ಕಾಲೇಜಿನಲ್ಲಿ ಎನ್‍ಡಿಎ ಅಭ್ಯರ್ಥಿ ಎ.ಪಿ ರಂಗನಾಥ್ ಪರ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ, ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಜಿಲ್ಲಾಧ್ಯಕ್ಷ ಹರೀಶ್, ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಅವರು ಮತ ಯಾಚಿಸಿದರು.
ಇದನ್ನೂ ಓದಿ: ನಡ್ಡಾ ಜೊತೆ ವಿಜಯೇಂದ್ರ ಚರ್ಚೆ: ಇನ್ನೆರಡು ದಿನದಲ್ಲಿ ರಾಜ್ಯಸಭಾ ಅಭ್ಯರ್ಥಿ ಹೆಸರು ಪ್ರಕಟ?