ಶಿವಮೊಗ್ಗ: ಬಿಜೆಪಿಯಿಂದ ಉಚ್ಚಾಟಿಸಿದ್ದಕ್ಕೆ ಕೆ.ಎಸ್. ಈಶ್ವರಪ್ಪ ಸಹ ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ.
ಈ ಬಗ್ಗೆ ನಗರದಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಈಶ್ವರಪ್ಪರನ್ನು ಉಳಿಸಿಕೊಳ್ಳಬೇಕೆಂದು ಸಾಕಷ್ಟು ಪ್ರಯತ್ನದ ಹೊರತಾಗಿಯೂ ಅವರು ಚುನಾವಣಾ ಅಖಾಡಡದಲ್ಲಿ ಉಳಿದುಕೊಂಡಿದ್ದಾರೆ. ಅಖಾಡದಲ್ಲಿ ಉಳಿದುಕೊಂಡಿದ್ದು, ಅವರಿಗೆ ಬಿಟ್ಟ ವಿಷಯವಾಗಿದೆ. ಇದರ ಪರಿಣಾಮವಾಗಿ ಬಿಜೆಪಿಯ ಶಿಸ್ತು ಸಮಿತಿ ಅವರನ್ನು ಪಕ್ಷದಿಂದ ಆರು ವರ್ಷ ಉಚ್ಚಾಟನೆ ಮಾಡಿದೆ ಎಂದರು.
ಚುನಾವಣೆ ಗೆದ್ದ ಬಳಿಕ ತಂದೆ ಮಕ್ಕಳು ಪಕ್ಷಕ್ಕೆ ಕರೆದುಕೊಂಡು ಹೋಗುತ್ತಾರೆ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಮತ ಎಣಿಕೆ ಆರಂಭವಾದಾಗ ಅವರಿಗೆ ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು.
ಮೊದಲ ರೌಂಡ್ ನಿಂದ ಕೊನೆಯ ರೌಂಡ್ ವರೆಗೂ ಈಶ್ವರಪ್ಪರಿಗೆ ಮತಗಳು ಬರುವುದಿಲ್ಲ. ಕ್ಷೇತ್ರಕ್ಕೆ ರಾಘವೇಂದ್ರ ಅವರು ಏನು ಕೊಡುಗೆ ನೀಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ನರೇಂದ್ರ ಮೋದಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಏನೆಲ್ಲ ಅಭಿವೃದ್ಧಿ ಕೆಲಸ ಆಗಿವೆ ಎಂಬುದು ಜನರಿಗೆ ಗೊತ್ತಾಗಿದೆ. ಹಾಗಾಗಿ ರಾಘವೇಂದ್ರ ಕನಿಷ್ಠ ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ರಾಜಕೀಯ ಚಿತ್ರಣ ಬದಲಾಗಿದೆ: ವಿಧಾನಸಭೆ ಚುನಾವಣೆಯಲ್ಲಿ ಜನರ ಕಣ್ಣಿಗೆ ಮಣ್ಣೆರಚಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ನ ಆಡಳಿತವನ್ನು ನೋಡಿ ಜನ ಬೇಸತ್ತಿದ್ದಾರೆ. ದೇಶದಲ್ಲಿ ಮಹಾ ಚುನಾವಣೆ ನಡೆಯುತ್ತಿದ್ದು, ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗಬೇಕು ಎಂಬ ಉತ್ಸುಕತೆ ಜನರಲ್ಲಿದೆ. ಜೆಡಿಎಸ್ ಮತ್ತು ಬಿಜೆಪಿಯನ್ನು ಬೆಂಬಲಿಸಲು ಜನ ನಿರ್ಧರಿಸಿದ್ದಾರೆ. ಕಾಂಗ್ರೆಸ್ ನಿಂದ ರಾಜ್ಯದ ಜನತೆಗೆ ಚಿಪ್ಪು ಸಿಕ್ಕಿರುವುದೆಂದು ಈಗಾಗಲೇ ಮನವರಿಕೆ ಆಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬೆಲೆ ಏರಿಕೆಯ ಕೊಡುಗೆ ಸಿಕ್ಕಿದೆಯೇ ಹೊರತು ಜನರಿಗೆ ಮತ್ತೇನು ಸಿಕ್ಕಿಲ್ಲ. ವಿದ್ಯುತ್, ಬಸ್, ರೈತರ ಜಮೀನಿಗೆ ಹಾಕುವ ಟಿಸಿ, ಸ್ಟ್ಯಾಂಪ್ ಡ್ಯೂಟಿ ಹೀಗೆ ಪ್ರತಿಯೊಂದು ಈಗ ದುಬಾರಿಯಾಗಿದೆ. ಯಾವ ವಿಶ್ವಾಸವಿಟ್ಟು ಜನರು ಕಾಂಗ್ರೆಸ್ಸಿಗೆ ಮತ ಹಾಕಿದ್ದರು ಅದೇ ಜನ ಇವತ್ತು ರಾಜ್ಯ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಆರೋಪಿಸಿದರು.
ನಾಳೆ ಶಿವಮೊಗ್ಗಕ್ಕೆ ಅಣ್ಣಾಮಲೈ ಆಗಮನ: ನಾಳೆ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಭದ್ರಾವತಿಗೆ ಆಗಮಿಸಲಿದ್ದಾರೆ. ಅಭ್ಯರ್ಥಿ ರಾಘವೇಂದ್ರ ಪರ ಪ್ರಚಾರ ನಡೆಸಲಿದ್ದಾರೆ. ಹಾಗೆಯೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸುವ ನಿರೀಕ್ಷೆ ಇದೆ ಎಂದರು.
ಪ್ರತಿಕ್ರಿಯೆಗೆ ಬಿಎಸ್ವೈ ನಿರಾಕರಣೆ: ಕೆ.ಎಸ್. ಈಶ್ವರಪ್ಪರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿದ ವಿಚಾರಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.