ಹುಬ್ಬಳ್ಳಿ: ಉಪ ಚುನಾವಣೆಯ ಎಲ್ಲ ಕ್ಷೇತ್ರಗಳಿಗೂ ಶೀಘ್ರದಲ್ಲೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು. ನಾಡಿದ್ದು ನಾನೂ ಕೂಡ ದೆಹಲಿಗೆ ತೆರಳಲಿದ್ದೇನೆ. ವರಿಷ್ಠರೊಂದಿಗೆ ಚರ್ಚಿಸಿ ಎರಡು, ಮೂರು ದಿನಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರಿಗೆ ಟಿಕೆಟ್ ನೀಡಬೇಕೆನ್ನುವುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಶಿಗ್ಗಾಂವಿಯಲ್ಲಿ ಎಷ್ಟೇ ಆಕಾಂಕ್ಷಿಗಳಿದ್ದರೂ ಬಸವರಾಜ್ ಬೊಮ್ಮಾಯಿ ಮನಸ್ಸಿನಲ್ಲಿ ಏನಿದೆ ಎಂಬುದು ಮುಖ್ಯ. ಅಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂದು ಬೊಮ್ಮಾಯಿ ಅಭಿಪ್ರಾಯ ಪಡೆದು ಮುಂದುವರೆಯುತ್ತೇವೆ ಎಂದರು.
ಚನ್ನಪಟ್ಟಣದ ಟಿಕೆಟ್ ಆಯ್ಕೆಯಲ್ಲಿ ಹೈಕಮಾಂಡ್ ಕುಮಾರಸ್ವಾಮಿ ಅಭಿಪ್ರಾಯ ಪ್ರಮುಖವಾಗಿದೆ ಎಂದು ತಿಳಿಸಿದರು.
ಹಳೆ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದಿರುವುದು ಹುಡುಗಾಟಿಕೆಯ ವಿಚಾರವಲ್ಲ. ಸರ್ಕಾರದ ಈ ನಿರ್ಧಾರದಿಂದ ಜನತೆಯಲ್ಲಿ ಪೊಲೀಸ್ ವ್ಯವಸ್ಥೆ ಬಗ್ಗೆ ಅಪನಂಬಿಕೆ ಉಂಟಾಗಿದೆ. ಎನ್ಐಎ ತನಿಖೆ ನಡೆಸುತ್ತಿದ್ದರೂ ಕೇಸ್ ವಾಪಸ್ ಪಡೆದಿದ್ದಾರೆ. ನಾವು ಈ ಪ್ರಕರಣವನ್ನು ತಾರ್ಕಿಕ ಹಂತಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದರು.
ಕೆ.ಎಸ್.ಈಶ್ವರಪ್ಪ ಹೊಸ ಸಂಘಟನೆ ಶುರು ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಶ್ವರಪ್ಪ ತಾವು ಏನು ಮಾಡಬೇಕು ಎನ್ನುವುದರಲ್ಲಿ ಸ್ವತಂತ್ರರು. ಅವರು ಈಗ ಬಿಜೆಪಿಯಲ್ಲಿ ಇಲ್ಲ. ಸಂಘಟನೆ ಮಾಡುವ ಉತ್ಸಾಹದಲ್ಲಿದ್ದಾರೆ. ಒಳ್ಳೆಯದಾಗಲಿ ಎಂದು ಹೇಳಿದರು.
ಇದನ್ನೂ ಓದಿ: 3 ಕ್ಷೇತ್ರಗಳಿಗೆ ಬೈ ಎಲೆಕ್ಷನ್ ಘೋಷಣೆ: ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ವಿಜಯೇಂದ್ರ ಹೇಳಿದ್ದೇನು?