ಬೆಂಗಳೂರು : ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ದಿನಗಣಗೆ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿಯೆಲ್ಲೆಡೆ ಶ್ರೀರಾಮನ ಕಲಾಕೃತಿಗಳು ರಾರಾಜಿಸುತ್ತಿವೆ. ಇದಕ್ಕೆ ಪೂರಕವೆಂಬಂತೆ ಗಿರಿನಗರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಮಂಜುನಾಥ್ ಅವರಿಂದ ಕುಂಚದಲ್ಲಿ ಮೂಡಿ ಬಂದಿರುವ ಅಯೋಧ್ಯೆಯ ರಾಮಮಂದಿರದ ಕಲಾಕೃತಿಯೊಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಅಪರಾಧ ಪತ್ತೆ ಹಚ್ಚಿ ಅದನ್ನು ಮಟ್ಟ ಹಾಕುವಲ್ಲೇ ಸದಾ ಮಗ್ನರಾಗುವ ಪೊಲೀಸ್ ಅಧಿಕಾರಿಗಳ ಪೈಕಿ ಕೆಲವರಲ್ಲಿ ವಿವಿಧ ಬಗೆಯ ಕೌಶಲ್ಯಗಳಿರುತ್ತವೆ. ಆದರೆ, ಕೆಲಸದ ಒತ್ತಡದಲ್ಲಿ ಇವುಗಳು ಮುನ್ನಲೆಗೆ ಬರುವುದಿಲ್ಲ. ಇದೀಗ ಎಲ್ಲರ ಚಿತ್ತ ಅಯೋಧ್ಯೆಯತ್ತ ನೆಟ್ಟಿರುವುದನ್ನು ಗಮನದಲ್ಲಿಟ್ಟುಕೊಂಡು ಪಿಎಸ್‌ಐ ಮಂಜುನಾಥ್ ಬಿಡಿಸಿರುವ ಅಯೋಧ್ಯೆ ರಾಮ ಮಂದಿರ ಚಿತ್ರವು ಎಲ್ಲರ ಗಮನ ಸೆಳೆದಿದೆ. ಮಂಜುನಾಥ್ ಅವರು ಚಿತ್ರ ಬಿಡಿಸಿರುವ ವಿಡಿಯೋ ಹಾಗೂ ಫೋಟೋಗಳು ಎಲ್ಲೆಡೆ ವೈರಲ್ ಆಗಿವೆ. ಇದರ ಬೆನ್ನಲ್ಲೇ ಮಂಜುನಾಥ್ ಹಿರಿಯ ಅಧಿಕಾರಿಗಳ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.
ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿರುವ ಮಂಜುನಾಥ್ ಇದನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದರು. ಮಂಜುನಾಥ್ ಸಾವಿರಕ್ಕೂ ಹೆಚ್ಚು ದೇವರ ಕಲಾಕೃತಿ, ಪ್ರಕೃತಿಯ ಸೌಂದರ್ಯ, ಗಣ್ಯರ ಚಿತ್ರಗಳನ್ನು ಸೊಗಸಾಗಿ ಬಿಡಿಸಿದ್ದಾರೆ. ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ವಾರನೂರು ನಿವಾಸಿ ಮಂಜುನಾಥ್ ಎಂಎಸ್ಸಿ ಪದವೀಧರರಾಗಿದ್ದಾರೆ. ಮೈಸೂರಿನಲ್ಲಿ ವ್ಯಾಸಂಗ ಮುಗಿಸಿ 2012ರಲ್ಲಿ ಪೊಲೀಸ್ ಇಲಾಖೆಗೆ ಸೇರಿ ಸೇವೆ ಸಲ್ಲಿಸುತ್ತಿದ್ದಾರೆ.
ಮನೆಯ ಗೋಡೆಗಳ ಮೇಲೆ ರಾಮನ ಚಿತ್ರ ಬಿಡಿಸಿದ ಕಲವಿದ : ಶಿವಮೊಗ್ಗದಲ್ಲೂ ಕೂಡ ಚಿತ್ರ ಕಲಾವಿದರೊಬ್ಬರು ವಿವಿಧ ಮನೆಯ ಗೋಡೆಗಳ ಮೇಲೆ ಅಂದವಾಗಿ ಶ್ರೀರಾಮ ಮಂದಿರ, ಶ್ರೀರಾಮ ಹನುಮನ ಚಿತ್ರ ಬಿಡಿಸುವದರೊಂದಿಗೆ ಶ್ರೀರಾಮನ ಆರಾಧನೆಯಲ್ಲಿ ತೊಡಗಿದ್ದಾರೆ. ಶಿವಮೊಗ್ಗದ ಹೊಸ ತೀರ್ಥಹಳ್ಳಿ ರಸ್ತೆಯ ಪಿಯರ್ ಲೈಟ್ ಬಳಿ ವಾಸವಿರುವ ಚಿತ್ರ ಕಲಾವಿದ ರಾಮಣ್ಣ ಅವರು ಫುಟ್ಬಾಲ್ ಆಟಗಾರಾಗಿದ್ದು, ಶಿವಮೊಗ್ಗ ಜಿಲ್ಲಾ ಫುಟ್ಬಾಲ್ ಸಂಘದ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕ್ರೀಡೆ ಜೊತೆಗೆ ಚಿತ್ರ ಕಲೆಯನ್ನು ಕರಗತ ಮಾಡಿಕೊಂಡಿರುವ ಫುಟ್ಬಾಲ್ ರಾಮಣ್ಣ ತಮ್ಮ ಕೈಯಾರೆ ಕುಂಚದಲ್ಲಿ ಗೋಡೆಗಳ ಮೇಲೆ ಶ್ರೀರಾಮ ಮಂದಿರ, ಶ್ರೀರಾಮ ಜೊತೆಗಿರುವ ಹನುಮನ ಚಿತ್ರಗಳು, ಶ್ರೀರಾಮನು ತನ್ನ ಕಪಿ ಸೇನೆಯ ಜೊತೆ ಲಂಕಾಕ್ಕೆ ಸೇತುವೆ ಕಟ್ಟುತ್ತಿರುವುದು ಹಾಗೂ ವಿವಿಧ ಬಗೆಯ ಚಿತ್ರಗಳನ್ನು ಸುಂದರವಾಗಿ ಬಿಡಿಸಿ ಜನರ ಮನಗೆದ್ದಿದ್ದಾರೆ. ರಾಮಣ್ಣ ಅವರು ಶ್ರೀರಾಮನ ಚಿತ್ರ ರಚಿಸಲು ಮುಂದಾದಾಗ ಶಿವಮೊಗ್ಗ ನಗರ ಶಾಸಕ ಎಸ್ ಎನ್ ಚನ್ನಬಸಪ್ಪ ಪೇಂಟ್ ಕೊಡಿಸಿದ್ದಾರೆ. ಇತರರು ಸಹ ಸಹಾಯ ಒದಗಿಸಿದ್ದಾರೆ.
ಇದನ್ನೂ ಓದಿ : ಕಲಾವಿದ ಫುಟ್ಬಾಲ್ ರಾಮಣ್ಣನ ಕುಂಚದಲ್ಲಿ ಅರಳಿದ ಶ್ರೀರಾಮ, ರಾಮಮಂದಿರ, ರಾಮಾಯಣ ಚಿತ್ರ