ಬೆಂಗಳೂರು: ಸ್ನೇಹಿತನನ್ನು ಭೇಟಿಯಾಗಲು ಬಂದ ಯುವಕ, ಯುವತಿಗೆ ಆಟೋ ಚಾಲಕನೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮನೆ ಬಾಡಿಗೆಗೆ ನೀಡುವುದಾಗಿ ಕರೆದೊಯ್ದು, ಯುವತಿ ಮೇಲೆ ಲೈಂಗಿಕ ದೌರ್ಜನಕ್ಕೆ ಮುಂದಾಗಿದ್ದಾಗ ಜೊತೆಗಿದ್ದ ಯುವಕ ಆತನ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ನಡೆದಿದ್ದೇನು?: ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ಚಿಕ್ಕಮಗಳೂರು ಮೂಲದ ಯುವತಿ ಹಾಗೂ ಕೇರಳದ ಯುವಕನಿಗೆ ಆತನ ಸ್ನೇಹಿತ ಸಹಾಯ ಮಾಡುವ ಭರವಸೆ ನೀಡಿದ್ದ. ಆತನ ಮಾತಿನಂತೆ ಮೇ 4ರಂದು ಇಬ್ಬರೂ ಸ್ನೇಹಿತನನ್ನು ಭೇಟಿಯಾಗಲು ರಾತ್ರಿ 8.30ಕ್ಕೆ ಜಯನಗರ ಮೆಟ್ರೋ ಸ್ಟೇಷನ್ ಬಳಿ ಬಂದಿದ್ದರು. ಆದರೆ ರಾತ್ರಿ 10.30ರವರೆಗೆ ಕಾದರೂ ಚೇತನ್ ಬಂದಿರಲಿಲ್ಲ. ಇದೇ ವೇಳೆ ಅಲ್ಲಿಗೆ ಬಂದ ಆಟೋ ಚಾಲಕನೊಬ್ಬ, "ನೀವು ಎಲ್ಲಿಗೆ ಹೋಗಬೇಕು?" ಎಂದು ವಿಚಾರಿಸಿದ್ದಾನೆ. ಇಬ್ಬರೂ ಮೆಜೆಸ್ಟಿಕ್ ಬಳಿ ರೈಲ್ವೆ ಸ್ಟೇಷನ್‌ಗೆ ಹೋಗಬೇಕು ಎಂದಿದ್ದಾರೆ. ಅದರಂತೆ ಇಬ್ಬರನ್ನೂ ಆಟೋದಲ್ಲಿ ಕರೆದೊಯ್ದ ಆತ ಸ್ವಲ್ಪ ದೂರ ಕ್ರಮಿಸಿದ ಬಳಿಕ "ನಿಮಗೆ ರೂಂ ಬೇಕಾ?" ಎಂದು ಕೇಳಿದ್ದಾನೆ. ಇದಕ್ಕೆ, "ಬೇಡ, ನಮ್ಮನ್ನು ರೈಲ್ವೆ ಸ್ಟೇಷನ್ ಬಳಿ ಬಿಟ್ಟರೆ ಸಾಕು" ಎಂದಿದ್ದರು. ಅಷ್ಟಕ್ಕೆ ಸುಮ್ಮನಾಗದ ಆಟೋ ಚಾಲಕ, "ಪಿಳ್ಳಗಾನಹಳ್ಳಿಯಲ್ಲಿ ನನ್ನದೇ ಒಂದು ಖಾಲಿ ಮನೆ ಇದೆ, ಇಷ್ಟವಾದರೆ ಇಂದು ಅಲ್ಲಿ ಇರಿ" ಎಂದು ಹೇಳಿದ್ದಾನೆ. ಇದಕ್ಕೆ ಇಬ್ಬರೂ ಒಪ್ಪಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಗೆ ಲೈಂಗಿಕ ಕಿರುಕುಳ: ದಾರಿಮಧ್ಯೆ ಮದ್ಯ ಖರೀದಿಸಿದ್ದ ಆಟೋ ಚಾಲಕ, ರಾತ್ರಿ 12.30ಕ್ಕೆ ಪಿಳ್ಳಗಾನಹಳ್ಳಿಯಲ್ಲಿರುವ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ, ಈಗಾಗಲೇ ತಡವಾಗಿದೆ, ಇಂದು ಇಲ್ಲಿಯೇ ಇದ್ದು ಬೆಳಗ್ಗೆದ್ದು ಹೋಗಿ ಎಂದಿದ್ದಾನೆ. ಈ ಸಂದರ್ಭದಲ್ಲಿ ಮದ್ಯಪಾನ ಮಾಡಿ, ಮೊಹಮ್ಮದ್ ಅನ್ಸರ್‌ಗೂ ಬಲವಂತವಾಗಿ ಮದ್ಯ ಕುಡಿಸಿದ್ದಾನೆ. ಬಳಿಕ ಯುವತಿಯನ್ನು ಕರೆದು ತನ್ನೊಂದಿಗೆ ಸಹಕರಿಸುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಯುವತಿ ಪ್ರತಿರೋಧಿಸಿದಾಗ, ಅಲ್ಲಿಯೇ ಇದ್ದ ಮಚ್ಚು ತೋರಿಸಿ, ನನ್ನೊಂದಿಗೆ ಸಹಕರಿಸದೇ ಇದ್ದರೆ ಇಬ್ಬರನ್ನೂ ಮುಗಿಸಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೇ, ಯುವತಿಗೆ ಲೈಂಗಿಕ ಕಿರುಕುಳ ನೀಡಲು ಶುರು ಮಾಡಿದಾಗ ಆಕೆ ಕಿರುಚಿದ್ದಾಳೆ. ತಕ್ಷಣ ಅಲ್ಲಿದ್ದ ಮಚ್ಚಿನಿಂದ ಆಟೋ ಚಾಲಕನ ಮೇಲೆ ಹಲ್ಲೆ ಮಾಡಿದ್ದ ಅನ್ಸರ್, ಸ್ನೇಹಿತೆಯನ್ನು ಕರೆದುಕೊಂಡು ಓಡಿ ಹೋಗಿದ್ದಾನೆ. ಇದಾದ ನಂತರ ಭಯದಲ್ಲಿದ್ದ ಇಬ್ಬರೂ ಪೊಲೀಸರಿಗೆ ದೂರು ನೀಡಿರಲಿಲ್ಲ ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಸಿಡಿಲು ಬಡಿದು ಇಬ್ಬರು ಸಾವು, 6 ಮಂದಿಗೆ ಗಾಯ - Lightning Strike
ದೂರು ನೀಡಿದ್ದ ಆಟೋ ಚಾಲಕ: ಬಳಿಕ ಮಾರನೇ ದಿನ ಕೋಣನಕುಂಟೆ ಪೊಲೀಸ್ ಠಾಣೆಗೆ ಗಾಬರಿಯಿಂದ ಬಂದಿದ್ದ ಆಟೋ ಚಾಲಕ, ತನ್ನ ಮನೆಗೆ ನುಗ್ಗಿ ಯುವಕ, ಯುವತಿ ಹಲ್ಲೆ ಮಾಡಿ ದರೋಡೆ ಮಾಡಿದ್ದಾರೆ ಎಂದು ದೂರು ನೀಡಿದ್ದ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರಿಗೆ ಆರಂಭದಲ್ಲೇ ಅನುಮಾನ ಮೂಡಿತ್ತು. ಆತನ ಮನೆ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಗಮನಿಸಿದಾಗ ಆಟೋ ಚಾಲಕನೇ ಯುವಕ-ಯುವತಿಯನ್ನು ಕರೆತಂದಿರುವ ವಿಚಾರ ಬಯಲಾಗಿತ್ತು. ತಕ್ಷಣ ಯುವಕ-ಯುವತಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಇಡೀ ಸಂಗತಿ ಬಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸದ್ಯ ಯುವತಿಯಿಂದಲೂ ದೂರು ಪಡೆದಿರುವ ಕೋಣನಕುಂಟೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆಟೋ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಳಿಕ ಆತನನ್ನು ವಶಕ್ಕೆ ಪಡೆಯುವುದಾಗಿ ಪೊಲೀಸರು ತಿಳಿಸಿದ್ದಾರೆ.